Site icon Vistara News

Thawar Chand Gehlot: ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನೇ ವಿಮಾನ ಹತ್ತಲು ಬಿಡದ ಸಿಬ್ಬಂದಿ; ಏನಿದಕ್ಕೆ ಕಾರಣ?

Thawar Chand Gehlot Misses Flight

AirAsia Flight Takes Off Without Karnataka Governor Thaawarchand Gehlot, Probe Orders

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನೇ ಬಿಟ್ಟು ಏರ್‌ ಏಷ್ಯಾ (Air Asia) ವಿಮಾನ ಹಾರಾಟ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜುಲೈ 27ರಂದು ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಅವರು ಹೈದರಾಬಾದ್‌ಗೆ ತೆರಳಬೇಕಿತ್ತು. ಆದರೆ, ರಾಜ್ಯಪಾಲರು ವಿಮಾನ ಹತ್ತುವ ಮೊದಲೇ ಹಾರಾಟ ನಡೆಸಿದ್ದು, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ.

ವಿಮಾನ ಟೇಕ್‌ ಆಫ್‌ ಆಗಲು 15 ನಿಮಿಷ ಮೊದಲೇ ವಿಮಾನ ನಿಲ್ದಾಣಕ್ಕೆ ತೆರಳಿದರೂ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಬಿಟ್ಟು ಏರ್‌ ಏಷ್ಯಾ ವಿಮಾನ ಹಾರಾಟ ಆರಂಭಿಸಿರುವುದು ಶಿಷ್ಟಾಚಾರದ ಉಲ್ಲಂಘನೆ ಎಂದು ರಾಜ್ಯಪಾಲರ ಕಚೇರಿಯು (ರಾಜ ಭವನ) ದೂರು ನೀಡಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ ಹಾಗೂ ಏರ್‌ ಏಷ್ಯಾಗೆ ದೂರು ನೀಡಲಾಗಿದೆ. ಇನ್ನು ಪ್ರಕರಣವನ್ನು ಏರ್‌ ಏಷ್ಯಾ ತನಿಖೆಗೆ ಆದೇಶಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಗುರುವಾರ ಮಧ್ಯಾಹ್ನ 2 ಗಂಟೆ 5 ನಿಮಿಷಕ್ಕೆ ಹಾರಬೇಕಿದ್ದ ಏರ್‌ ಏಷ್ಯಾ ವಿಮಾನದಲ್ಲಿ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರು ಹಾರಾಟ ಆರಂಭಿಸಬೇಕಿತ್ತು. ಇದಕ್ಕಾಗಿ ಅವರು 1.50ಕ್ಕೇ ವಿಮಾನ ನಿಲ್ದಾಣ ತಲುಪಿದ್ದರು. ಆದರೆ, ಅಲ್ಲಿರುವ ಸಿಬ್ಬಂದಿಯು ಗೆಹ್ಲೋಟ್‌ ಅವರನ್ನು ವಿಮಾನ ನಿಲ್ದಾಣದ ಲಾಂಜ್‌ನಲ್ಲಿಯೇ ಕೂರಿಸಿದ್ದಾರೆ. ಬಳಿಕ ವಿಮಾನ ಹಾರಾಟದ ಸಮಯ ತಿಳಿದು ರಾಜ್ಯಪಾಲರನ್ನು ವಿಮಾನ ಹತ್ತಿಸಬೇಕು ಎನ್ನುವಷ್ಟರಲ್ಲಿಯೇ ವಿಮಾನ ಟೇಕ್‌ಆಫ್‌ ಆಗಿತ್ತು ಎಂದು ತಿಳಿದುಬಂದಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ವಿಮಾನ ಟೇಕ್‌ ಆಫ್‌ ಆಗಲು ಇನ್ನೂ ಐದು ನಿಮಿಷ ಇದ್ದರೂ ವಿಮಾನದ ಸಿಬ್ಬಂದಿಯು ಥಾವರ್‌ ಚಂದ್‌ ಗೆಹ್ಲೋಟ್‌ ಅವರು ವಿಮಾನ ಹತ್ತಲು ಬಿಟ್ಟಿಲ್ಲ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Bhagavad Gita Abhiyan | ಭಗವದ್ಗೀತೆ ಜ್ಞಾನದ ಗಂಗೆ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

ಸ್ಪಷ್ಟನೆ ನೀಡಿದ ಏರ್‌ ಏಷ್ಯಾ

ರಾಜ್ಯಪಾಲರನ್ನು ಬಿಟ್ಟು ವಿಮಾನ ಹಾರಾಟ ನಡೆಸಿದ ಪ್ರಕರಣದ ಕುರಿತು ಏರ್‌ ಏಷ್ಯಾ ಸ್ಪಷ್ಟನೆ ನೀಡಿದೆ. “ಘಟನೆ ಬಗ್ಗೆ ನಾವು ವಿಷಾದಿಸುತ್ತೇನೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗುತ್ತದೆ. ಏರ್‌ ಏಷ್ಯಾದ ಹಿರಿಯ ಅಧಿಕಾರಿಗಳ ತಂಡವು ರಾಜ್ಯಪಾಲರ ಕಚೇರಿ ಜತೆ ಸಂಪರ್ಕದಲ್ಲಿದೆ” ಎಂದು ತಿಳಿಸಿದೆ. ಆದಾಗ್ಯೂ, ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ತೆರಳಿಲ್ಲ ಎಂಬ ಆರೋಪವನ್ನು ರಾಜ ಭವನ ಅಲ್ಲಗಳೆದಿದೆ.

Exit mobile version