ಬೆಂಗಳೂರು: ಕೆಲವೊಂದು ಸಲ ಟೆಲಿಕಾಂ ಕಂಪನಿಗಳ ಸೇವಾ ವ್ಯತ್ಯಯವು ಗ್ರಾಹಕರನ್ನು ಕಾಡಿಸುತ್ತವೆ. ನೆಟ್‌ವರ್ಕ್ ಸಮಸ್ಯೆ, ಕಸ್ಟಮರ್ ಕೇರ್‌ನಿಂದ ಸರಿಯಾದ ಸ್ಪಂದನೆ ಸಿಗದಿರುವುದು, ಹತ್ತಿರದ ಮಳಿಗೆಗೆ ಹೋದರೂ ಸಮಸ್ಯೆ ಬಗೆಹರಿಯದಿರುವುದು ಸೇರಿ ಹಲವು ಸಮಸ್ಯೆಗಳು ಕಾಡುತ್ತವೆ. ಹೀಗೆ ಸೇವೆಯಲ್ಲಿ ವ್ಯತ್ಯಯವಾದ ಕಾರಣ ಭಾರ್ತಿ ಏರ್‌ಟೆಲ್ (Airtel) ಕಂಪನಿಗೆ ಬೆಂಗಳೂರು ನ್ಯಾಯಾಲಯವು 1.55 ಲಕ್ಷ ರೂ. ದಂಡ ವಿಧಿಸಿದೆ. ಪರಿಹಾರದ ಮೊತ್ತವನ್ನು ಗ್ರಾಹಕನಿಗೆ ನೀಡಬೇಕು ಎಂದು ಸೂಚಿಸಿದೆ.
ಬೆಂಗಳೂರಿನ ವಿಜಯನಗರದಲ್ಲಿ ವಾಸಿಸುತ್ತಿರುವ ಸಿನಿಮಾ ನಿರ್ದೇಶಕ ಸಿಂಹ ಅವರು ಏರ್‌ಟೆಲ್ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಹೀಗೆ ಖರೀದಿಸಿದ ಬಳಿಕ ಅವರ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗಿಲ್ಲ. ಹಾಗಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಏರ್‌ಟೆಲ್‌ಗೆ ದಿ ಬೆಂಗಳೂರು ಫಸ್ಟ್ ಅಡಿಷನಲ್ ಡಿಸ್ಟ್ರಿಕ್ಟ್ ಕನ್ಸ್ಯೂಮರ್ ಡಿಸ್ಪ್ಯೂಟ್ಸ್ ರೆಸ್ರೆಸ್ಸಲ್ ಕಮಿಷನ್ 5 ಸಾವಿರ ರೂ. ನ್ಯಾಯಾಂಗ ವೆಚ್ಚ ಸೇರಿ ಒಟ್ಟು 1.55 ಲಕ್ಷ ರೂ. ದಂಡ ವಿಧಿಸಿದೆ.
ಸಿಂಹ ಅವರು ವೋಡಾಫೋನ್‌ನಿಂದ ಏರ್‌ಟೆಲ್‌ಗೆ ಪೋರ್ಟ್ ಆಗಲು ಬಯಸಿದ್ದರು. ಇದಕ್ಕಾಗಿ ಅವರು ಮೂರು ಪ್ರಯತ್ನ ಮಾಡಿದ್ದರು. ಮೂರು ಬಾರಿ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೂ, ಹತ್ತಿರದ ಮಳಿಗೆಗೆ ಹೋದರೂ ಆ್ಯಕ್ಟಿವೇಟ್ ಆಗಿಲ್ಲ. 2018ರ ಜನವರಿ 22ರಿಂದ ಇದೇ ವರ್ಷದ ಫೆಬ್ರವರಿ 22ರ ಅವಧಿಯಲ್ಲಿ ಎಷ್ಟು ಬಾರಿ ಮನವಿ ಮಾಡಿದರೂ ಏರ್‌ಟೆಲ್ ಕಂಪನಿಯು ಸಿಮ್ ಆ್ಯಕ್ಟಿವೇಟ್ ಮಾಡಿಲ್ಲ. ಇದರಿಂದಾಗಿ ದೂರು ದಾಖಲಿಸಿದ್ದ ಅವರು, “ನನ್ನ ಸಿಮ್ ಕಾರ್ಡ್ ಸಮಸ್ಯೆಯಿಂದ ನನಗೆ ಹೂಡಿಕೆದಾರರಿಂದ ಸಿಗಬೇಕಿದ್ದ ಅವಕಾಶಗಳು ಕೈ ತಪ್ಪಿ ಹೋಗಿವೆ. ಹಲವು ಪ್ರಮುಖ ಕರೆಗಳನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
“ಏರ್‌ಟೆಲ್ ಕಂಪನಿಯ ಸೇವಾ ವ್ಯತ್ಯಯದಿಂದಾಗಿ ನನಗೆ ತುಂಬ ನಷ್ಟವಾಗಿದೆ. ನನಗೆ ವ್ಯಾಪಾರದಲ್ಲಿ ಹಲವು ಅವಕಾಶಗಳು ಕೈತಪ್ಪಿವೆ. ಹಾಗಾಗಿ, ನನಗೆ 43 ಕೋಟಿ ರೂಪಾಯಿ ಪರಿಹಾರ ನೀಡಬೇಕು” ಎಂದು ಅವರು ದೂರಿನಲ್ಲಿ ಪ್ರಸ್ತಾಪಿಸಿದ್ದರು. ದೂರುದಾರರ ವಾದ ಆಲಿಸಿ ನ್ಯಾಯಾಲಯವು, “ಸೇವೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸಾಬೀತಾಗಿದೆ” ಎಂದು ಹೇಳಿತು. ಹಾಗೆಯೇ, ಅರ್ಜಿದಾರರಿಗೆ 1.55 ಲಕ್ಷ ರೂ. ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿತು.