ಬೆಂಗಳೂರು: ಮೀಸಲಾತಿ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಳೆದ 1೩ ದಿನಗಳಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.
ಮೀಸಲಾತಿ ಮುಂದುವರಿಸುವಂತೆ ಬೃಹತ್ ಸಮಾವೇಶ ನಡೆಸಿ ರಾಜ್ಯ ಸರ್ಕಾರಕ್ಕೆ ಈಗಾಗಲೇ ಒತ್ತಾಯಿಸಿದ್ದೇವೆ. ಆಗ ಸಮಾಜ ಕಲ್ಯಾಣ ಸಚಿವರು ಇಲ್ಲಿಗೆ ಭೇಟಿ ನೀಡಿ ಒಂದು ದಿನದೊಳಗೆ ಸಮಸ್ಯೆ ಪರಿಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ವಾರ ಕಳೆದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ರಾಜ್ಯ ಸರ್ಕಾರ ಸಹ ನಿರ್ಲಕ್ಷ್ಯ ತೋರುತ್ತಿದೆ ಎಂದು ಒಕ್ಕೂಟದ ರಾಜಾಧ್ಯಕ್ಷ ಬಿ.ಡಿ. ಹಿರೇಮಠ ಸೇರಿ ಹಲವು ಸ್ವಾಮೀಜಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಜಾತಿ ಕಾಯ್ದೆ -1976ರ ಬೇಡಜಂಗಮ, ಬುಡ್ಗಜಂಗಮರನ್ನು ಕೇಂದ್ರ ಎಸ್‌ಸಿ-ಎಸ್‌ಟಿ ಪಟ್ಟಿಗೆ ಈಗಾಗಲೇ ಸೇರಿಸಲಾಗಿದೆ. ರಾಜಕೀಯ ಹಿತಾಸಕ್ತಿಯಿಂದ ಬೇಡಜಂಗಮ, ಬುಡ್ಗಜಂಗಮಕ್ಕೆ ನೀಡಲಾಗುತ್ತಿರುವ ಮೀಸಲಾತಿ ನಿಲ್ಲಿಸಲಾಗಿದೆ. ಹೀಗೆ ನಿಲ್ಲಿಸಿರುವುದು ಸರಿಯಲ್ಲ ಎಂದು ಬಿ.ಡಿ.ಹಿರೇಮಠ ಹೇಳಿದರು.
ಜಾತಿ ಪ್ರಮಾಣ ಪತ್ರ ನೀಡುವ, ಪರಿಶೀಲಿಸುವ ಹಾಗೂ ಅನುಮೋದಿಸುವ ಅಧಿಕಾರಿಗಳು ಮತ್ತು ಪ್ರಾಧಿಕಾರಗಳು ಹೈಕೋರ್ಟ್ ತೀರ್ಪಿಗೆ ಬದ್ಧವಾಗಿ ಕ್ರಮವಹಿಸಬೇಕು ಎಂದು 1995ರಲ್ಲಿ ಅಂದಿನ ಸರ್ಕಾರ ಹೇಳಿತ್ತು. ಏಪ್ರಿಲ್‌ನಲ್ಲಿ ಬುಡಕಟ್ಟಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರಸ್ವಾಮಿ ಅವರಿಗೆ ಬೇಡಜಂಗಮ ಪರಿಶಿಷ್ಟ ಜಾತಿ ಕುರಿತು ಚಾರಿತ್ರಿಕ, ವಾಸ್ತವಿಕ ಮತ್ತು ಕಾನೂನುಬದ್ಧ ಅಂಶಗಳನ್ನು ನೀಡಲಾಗಿತ್ತು. ಆದರೂ ಯಾವುದೇ ಆಶ್ವಾಸನೆಯು ಸಮಿತಿಯಿಂದ ದೊರೆತಿಲ್ಲ ಎಂದು ಬೇಸರ ಹೊರಹಾಕಿದರು.
ಒಕ್ಕೂಟದ ಸಮಿತಿ ಸಭೆಗೆ ಹೋದಾಗ ಇದನ್ನು ಪಶ್ನಿಸಲು ಅವಕಾಶ ಕೊಡದೆ ಹೊರಗೆ ಕಳುಹಿಸಿದರು. ಇಲ್ಲಿಯವರೆಗೂ ನ್ಯಾಯ ದೊರೆತಿಲ್ಲ. ಸರ್ಕಾರದ ಈ ನೀತಿಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರವರ್ಗ 1 ರ ಜಾತಿಗಳು ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಮೀಸಲು ಹಾಗೂ ಸೌಲಭ್ಯ ವಂಚಿತವಾಗಿದೆ. ಬೇಡಿಕೆ ಈಡೇರಿಸಿಕೊಳ್ಳಲು ಪಕ್ಷಾತೀತವಾಗಿ ಬಲ ಪ್ರದರ್ಶನ ಮಾಡುವ ಅನಿವಾರ್ಯತೆ ಇದೆ ಎಂದು ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
ಸಮಾಜದಲ್ಲಿ ಬಲಾಡ್ಯರು ಬೆಳೆದಿದ್ದರೆ, ದುರ್ಬಲರು ತುಳಿತಕ್ಕೆ ಒಳಗಾಗಿದ್ದಾರೆ ಎಂದು ತಾಲೂಕಿನಲ್ಲಿ ಭಾನುವಾರ ಆಯೋಜಿಸಿದ್ದ ಪ್ರವರ್ಗ 1 ಜಾತಿಗಳ ಒಕ್ಕೂಟದ ರಾಜ್ಯ-ಜಿಲ್ಲಾ ಮಟ್ಟದ ಪದಾಧಿಕಾರಿಗಳ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು. ನಿರಂತರ ಶೋಷಣೆ ದುರ್ಬಲ ವರ್ಗದವರ ಮೇಲೆ ನಡೆಯುತ್ತಿದೆ. ಹೀಗಾಗಿ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಒಗ್ಗೂಡಿ ಸರ್ಕಾರದ ಸೌಲಭ್ಯ ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇದನ್ನು ಓದಿ: ಬೇಡ ಜಂಗಮರಿಗೆ ಎಸ್ಸಿ ಮೀಸಲಾತಿ ಬೇಡವೇ ಬೇಡವೆಂದ ಆದಿಜಾಂಬವ ಸಂಘಟನೆ; ವಿಧಾನಸೌಧದಲ್ಲಿ ಹೈಡ್ರಾಮ