ಬೆಂಗಳೂರು: ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಗೆ ಈ ಬಾರಿಯೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಒಂದೇ ದಿನ ₹1,680 ಕೋಟಿ ಚಿನ್ನ ಮಾರಾಟವಾಗಿದೆ.
ಅಕ್ಷಯ ತೃತೀಯದಂದೇ ಅನೇಕರು ಹಣ ನೀಡಿ ಖರೀದಿ ನಡೆಸಿದ್ದರೆ, ಇನ್ನು ಕೆಲವರು ಈ ಮೊದಲೇ ಹಣ ನೀಡಿ ಆಭರಣಗಳನ್ನು ಬುಕ್ ಮಾಡಿದ್ದರು. ಆದರೆ ಆಭರಣವನ್ನು ಅಕ್ಷಯ ತೃತೀಯದಂದೇ ಡೆಲಿವರಿ ಪಡೆದಿದ್ದಾರೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಬೇಕಿಲ್ಲ, ಈ ಬಾರಿ ಅಕ್ಷಯ ತೃತೀಯಕ್ಕೆ ಮುಸ್ಲಿಮರ ಅಂಗಡಿಗಳಿಂದ ಖರೀದಿಸಬೇಡಿ ಎನ್ನುವ ಅಭಿಯಾನವನ್ನು ಅನೇಕ ಸಂಘಟನೆಗಳು ನಡೆಸಿದ್ದವು.
ರಾಜ್ಯದ ಇತರೆಡೆಯಂತೆಯೇ ಬೆಂಗಳೂರಿನಲ್ಲೂ ಖರೀದಿ ಜೋರಾಗಿಯೇ ನಡೆದಿದೆ. ರಾಜಧಾನಿಯಲ್ಲಿ ₹650 ಕೋಟಿಗೂ ಹೆಚ್ಚಿನ ಚಿನ್ನ ಖರೀದಿ ಆಗಿದೆ. ರಾತ್ರಿವರೆಗೂ ಚಿನ್ನದ ಖರೀದಿ ನಡೆಯುತ್ತಲೇ ಇತ್ತು.
ಮೈಸೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಬಾಗಲಕೊಟೆ ಮತ್ತು ಚಿತ್ರದುರ್ಗ ಸೆರಿದಂತೆ ವಿವಿಧ ಭಾಗಗಳಲ್ಲಿ ಚಿನ್ನಾಭರಣ ಖರೀದಿ ಬಹು ಜೊರಾಗಿತ್ತು. ಖರಿದಿಸಿದ ನಂತರ ಒಡವೆಗಳನ್ನು ದೇವರ ಮುಂದಿಟ್ಟು ಪೂಜೆ ಮಾಡಿ ಹಬ್ಬವನ್ನು ಅಚರಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿರುವ ಚಿನ್ನಾಭರಣ ಮಾರಾಟಗಾರರು, 1 ಗ್ರಾಂ ಚಿನ್ನದ ನಾಣ್ಯಗಳ ಖರೀದಿ ಬಹಳ ಹೆಚ್ಚಾಗಿತ್ತು. ಮತ್ತೆ ಕೆಲವರು 10-20 ಗ್ರಾಂ ಚಿನ್ನ ಖರೀದಿಸಿದರು.
ಮಾಸಿಕ ಕಂತಿನಲ್ಲಿ ಹಣ ಪಾವತಿಸಿ ಚಿನ್ನಭರಣ ಖರಿದಿಸಿದ ಜನ ಮದುವೆ, ಮತ್ತಿತರ ಸಮಾರಂಭಗಳ ಹಿನ್ನಲೆಯಲ್ಲಿ ಓಲೆ, ನೆಕ್ಲೆಸ್, ಲಾಂಗ್ ಚೈನ್, ಬಳೆ, ಸೇರಿದಂತೆ ವಿವಧ ಬಗೆಯ ಆಭರಣಗಳನ್ನು ಖರಿದಿಸಿದ್ದಾರೆ.
ವಿಶೇಷ ಭದ್ರತಾ ಸಿಬ್ಬಂದಿ ನೇಮಕ
ಅಕ್ಷಯ ತೃತೀಯದಂದು ಜನಸಂದಣಿ ಹೆಚ್ಚಿರುವ ಮುನ್ಸೂಚನೆ ದೊರೆತಿದ್ದರಿಂದ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಬೆಳಿಗ್ಗೆ 7 ರಿಂದ ರಾತ್ರಿ 10ರ ನಂತರವೂ ಮಾರಾಟ ಪ್ರಕ್ರಿಯೆ ನಡೆದಿತ್ತು. ಕಳ್ಳರು ತಮ್ಮ ಕೈಚಳಕ ತೋರಬಹುದು ಎಂಬ ಆತಂಕದಲ್ಲಿ ಮಳಿಗೆ ಮಾಲೀಕರು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದರು. ಕೆಲವೆಡೆ ಹೆಚ್ಚುವರಿಯಾಗಿ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಪೊಲೀಸ್ ಇಲಾಖೆಯಿಂದಲೂ ವಿವಿಧ ಅಂಗಡಿ ಮಳಿಗೆಗಳ ಬಳಿ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು.
ಇದನ್ನೂ ಓದಿ: ಅಕ್ಷಯ ತೃತೀಯ: ಚಿನ್ನಾಭರಣ ಮಾರಾಟದ ಗತಿಯೇನು?