ಬೆಂಗಳೂರು: ರಾಜ್ಯದಲ್ಲಿ ಮದ್ಯ ಪ್ರಿಯರಿಗೆ (Alcohol Drinkers) ಶಾಕ್ ನೀಡಲು ರಾಜ್ಯ ಸರ್ಕಾರ (Karnataka State Government) ತಯಾರಿ ನಡೆಸಿದೆ. ಇನ್ನು ಹತ್ತೇ ದಿನದಲ್ಲಿ ಮದ್ಯದ ಮೇಲಿನ ದರವು ಹೆಚ್ಚಳಗೊಳ್ಳಲಿದೆ. ಎಲ್ಲ ಬಗೆಯ ಮದ್ಯಗಳಿಗೂ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಒಂದೊಂದು ರೀತಿಯ ಸ್ಲ್ಯಾಬ್ ಅನ್ನು ವಿಧಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜುಲೈ 20ರಿಂದ ರಾಜ್ಯದಲ್ಲಿ ಮದ್ಯದ ದರ (Alcohol price) ಏರಿಕೆಯಾಗಲಿದೆ.
ಜುಲೈ 20ರಿಂದ ಮದ್ಯದ ಮೇಲಿನ ಸುಂಕ ಜಾರಿಯಾಗಲಿದ್ದು, ವಿಸ್ಕಿ, ರಮ್, ಜಿನ್ (Whiskey, Rum, Gin) ಸೇರಿ ಎಲ್ಲ ಬಗೆಯ ಮದ್ಯದ ದರ ಏರಿಕೆ ಮಾಡಿ ಆದೇಶಿಸಲಾಗಿದೆ. ಒಟ್ಟಾರೆಯಾಗಿ ಶೇಕಡಾ 20ರಷ್ಟು ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ: Education News : ಚಕ್ರವರ್ತಿ ಸೂಲಿಬೆಲೆ, ಸಾವರ್ಕರ್ ಪಠ್ಯ ತೆಗೆದಿಲ್ಲ, ಕಿತ್ತು ಬಿಸಾಕಿದ್ದೇವೆ: ಮಧು ಬಂಗಾರಪ್ಪ
ಬಿಯರ್ ಪ್ರಿಯರಿಗೆ ಸ್ವಲ್ಪ ಸಮಾಧಾನ
ಇನ್ನು ಬಿಯರ್ ಪ್ರಿಯರ ಮೇಲೆ ಸ್ವಲ್ಪ ಕರುಣೆ ತೋರಲಾಗಿದ್ದು, ಬಿಯರ್ ಮೇಲಿನ ದರವನ್ನು (Beer price) ಶೇಕಡಾ 10ರಷ್ಟು ಹೆಚ್ಚಳ ಮಾಡಲಾಗಿದೆ. 18 ಸ್ಲ್ಯಾಬ್‌ಗಳಲ್ಲಿ ಮದ್ಯದ ದರ ಏರಿಕೆಯಾಗಲಿದೆ. ಒಂದು ಬಾಟಲಿಗೆ ಕನಿಷ್ಠ 10 ರೂಪಾಯಿಯಿಂದ ಗರಿಷ್ಠ 200 ರೂಪಾಯಿವರೆಗೂ ಏರಿಕೆ ಕಾಣಲಿದೆ.
ಬಜೆಟ್ ಎಫೆಕ್ಟ್ (Karnataka Budget 2023)
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಈ ಬಾರಿ 5 ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಅನುಷ್ಠಾನ ಮಾಡುವ ಸವಾಲುಗಳು ಇವೆ. ಈ ಬಾರಿಯ ಸಮಾಧಾನಕರ ಸಂಗತಿಯೆಂದರೆ ಈ ಆರ್ಥಿಕ ವರ್ಷದಲ್ಲಿ ಉಳಿದಿರುವುದು 8 ತಿಂಗಳು ಮಾತ್ರವೇ ಆಗಿರುವುದರಿಂದ ಒಟ್ಟಾರೆಯಾಗಿ ಈ ಐದು ಯೋಜನೆಗಳಿಗೆ 34 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಹೊಂದಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆದಾಯದ ಮೂಲವನ್ನು ಹೆಚ್ಚಳ ಮಾಡಿಕೊಳ್ಳಲೇಬೇಕಿದೆ. ಜತೆಗೆ ಇನ್ನಿತರ ಅಭಿವೃದ್ಧಿ ಕಾರ್ಯಯೋಜನೆಗಳನ್ನೂ ಅನುಷ್ಠಾನಕ್ಕೆ ತರಬೇಕಾಗುತ್ತದೆ. ಅದಕ್ಕಾಗಿ ಅಬಕಾರಿ ಮೇಲಿನ ಸುಂಕವನ್ನು ಸಹ ಏರಿಸಲಾಗಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಈ ಕ್ರಮವನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: CM Siddaramaiah : ಮಧು ಬಂಗಾರಪ್ಪರನ್ನು ಮತ್ತೆ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ!
36,000 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ (Excise Revenue Collection) ಗುರಿಯನ್ನು (Excise Target) ಇಲಾಖೆಗೆ ನೀಡಲಾಗಿದೆ. ರಾಜ್ಯದ ಎಲ್ಲ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ 1.01 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಿದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕವಾಗಿ 25,000 ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ವಾಹನ ನೋಂದಣಿಯಿಂದ 11,500 ಕೋಟಿ ರೂ. ಸಂಗ್ರಹ ನಿರೀಕ್ಷಿಸಲಾಗಿದೆ. ಹೀಗಾಗಿ ಅಬಕಾರಿ ಇಲಾಖೆ ಮೇಲೆ ಬಹಳ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಇಟ್ಟುಕೊಂಡಿದ್ದು, ದರವನ್ನು ಪರಿಷ್ಕರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಈಗ ಮದ್ಯ ಪ್ರಿಯರ ತಲೆ ಮೇಲೆಯೂ ಹೊರೆ ಬೀಳುತ್ತಿದೆ.