Site icon Vistara News

Karnataka election 2023: ಮತ ಎಣಿಕೆಗೆ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ಧತೆ: ಡಿಸಿ ವೆಂಕಟೇಶ್ ಟಿ

Visit of DC Venkatesh T., SP Srihari Babu to Vijayanagar Vote Counting Centre

ಹೊಸಪೇಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ (Karnataka election 2023) ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ (Vote counting) ಶನಿವಾರ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ ತಿಳಿಸಿದ್ದಾರೆ.

ಶುಕ್ರವಾರ ಮತ ಎಣಿಕಾ ಕೇಂದ್ರಕ್ಕೆ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಭೇಟಿ ನೀಡಿ. ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿ, ಬಳಿಕ ಮಾಹಿತಿ ನೀಡಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ 1,219 ಮತಗಟ್ಟೆಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಆಯಾ ಕ್ಷೇತ್ರಗಳ ಭದ್ರತಾ ಕೊಠಡಿಗಳಲ್ಲಿ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿ ಪ್ಯಾಟ್‌ಗಳನ್ನು ಇರಿಸಿ ಸೀಲ್ ಮಾಡಲಾಗಿದೆ ಎಂದರು.

ಇದನ್ನೂ ಓದಿ: IPL 2023: ಟಾಸ್​ ಗೆದ್ದ ಗುಜರಾತ್​ ತಂಡದಿಂದ ಬೌಲಿಂಗ್​ ಆಯ್ಕೆ

ಶನಿವಾರ ಬೆಳಿಗ್ಗೆ ಸೀಲ್ ತೆರವುಗೊಳಿಸಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ ನಂತರ ಉಳಿದ ಮತಗಳ ಎಣಿಕೆ ನಡೆಸಲಾಗುತ್ತದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕ ಮತ ಎಣಿಕೆ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಕೊಠಡಿಯಲ್ಲಿ 14 ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯುತ್ತದೆ. ಪ್ರತಿ ಟೇಬಲ್‌ಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಭ್ಯರ್ಥಿ ಹಾಗೂ ಏಜೆಂಟರಿಗೂ ಎಣಿಕಾ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕಾ ಕೇಂದ್ರದ ಆವರಣ ಸೇರಿದಂತೆ ಆಯಾ ಕ್ಷೇತ್ರಗಳ ಭದ್ರತಾ ಕೊಠಡಿಗಳ ಬಳಿಯಲ್ಲಿ 24/7 ಸೂಕ್ತ ಭದ್ರತೆ ಒದಗಿಸಲಾಗಿದೆ. ಅರೆ ಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಸೂಕ್ತ ಬಿಗಿ ಭದ್ರತೆ ಒದಗಿಸಲಾಗುತ್ತದೆ. ಅದೇ ರೀತಿಯಾಗಿ ಮತ ಎಣಿಕಾ ಕೇಂದ್ರದಲ್ಲಿ ಮೊಬೈಲ್ ಹಾಗೂ ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್, ಸ್ಮಾರ್ಟ್ ಫೋನ್, ಕ್ಯಾಮೆರಾ, ಬ್ಲೂಟೂತ್ ಇಯರ್ ಫೋನ್ ನಿಷೇಧಿಸಲಾಗಿದೆ. ಆಯಾ ಸುತ್ತುಗಳ ಮತ ಎಣಿಕಾ ಅಂಕಿ ಅಂಶಗಳನ್ನು ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: Viral News : ಬರ್ತ್‌ಡೇ ಆಚರಿಸಿಕೊಳ್ಳುತ್ತಿದೆ ವಿಶ್ವದ ಅತ್ಯಂತ ಹಿರಿಯ ನಾಯಿ! ಇದರ ವಯಸ್ಸೆಷ್ಟು ಗೊತ್ತಾ?

ಈಗಾಗಲೇ ಜಿಲ್ಲೆಯಾದ್ಯಂತ 144 ಸೆಕ್ಷನ್ ಅನ್ನು ಮೇ 13 ರಂದು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮತ ಎಣಿಕೆ ಪ್ರಕ್ರಿಯೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಮಾಹಿತಿ ನೀಡಿದರು.

ಸೂಕ್ತ ಪೊಲೀಸ್ ಬಂದೋಬಸ್ತ್

ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಮೇ 13ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮತ ಎಣಿಕೆ ಕೇಂದ್ರವಾಗಿ ಸ್ಥಾಪಿಸಿರುವ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಈಗಾಗಲೇ ಭದ್ರತಾ ಕೊಠಡಿ ಬಳಿ ಹಾಗೂ ಮತ ಎಣಿಕೆ ಕೇಂದ್ರದ ಬಳಿ ಪೊಲೀಸ್ ಸಿಬ್ಬಂದಿ ಹಾಗೂ ಅರೆಸೇನಾ ಪಡೆಯನ್ನು ಸೂಕ್ತ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: Road Accident : ರಸ್ತೆಯಲ್ಲೇ ಹೊತ್ತಿ ಉರಿದ 2 ಕೋಟಿ ರೂ. ಮೌಲ್ಯದ ಪೋರ್ಷೆ ಕಾರು!

ಮತ ಎಣಿಕೆ ಕೇಂದ್ರ ಹಾಗೂ ಬಂದೋಬಸ್ತ್ ಕರ್ತವ್ಯಕ್ಕೆ 4 ಜನ ಡಿವೈಎಸ್ಪಿ ನೇತೃತ್ವದಲ್ಲಿ 7 ಜನ ಇನ್ಸ್‌ಪೆಕ್ಟರ್, 12 ಜನ ಸಬ್ ಇನ್ಸ್‌ಪೆಕ್ಟರ್, 16 ಜನ ಎಎಸ್‌ಐ, 350 ಜನ ಹೆಡ್‌ ಕಾನ್ಸ್‌ಟೇಬಲ್, ಕಾನ್ಸ್‌ಟೇಬಲ್ ಹಾಗೂ 2 ಕೆಎಸ್‌ಆರ್‌ಪಿ ತುಕಡಿ 2 ಅರೆಸೇನಾಪಡೆಯನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರ ಸೇರಿದಂತೆ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸಹ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.

Exit mobile version