ಬೆಂಗಳೂರು: ಆರ್‌ಟಿಒ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ಚಾಲಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು(Lokayukta Raid) ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿ, ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ್ದಾರೆ.
ಬಳ್ಳಾರಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-63ರ ಗೋಡೆಹಾಳ್ನಲ್ಲಿರುವ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿದೆ. ಈ ವೇಳೆ ಅಪಾರ ಪ್ರಮಾಣದ ಹಣ ಸಿಕ್ಕಿದ್ದು, ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಗಣಿಗಾರಿಕೆ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಮತ್ತು ಆರ್‌ಟಿಒ ಒಳಗೊಂಡಂತೆ ಕಾಂಪೋಜಿಟ್ ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೆಲ ವರ್ಷಗಳಿಂದ ಇಲ್ಲಿ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ಸಿಬ್ಬಂದಿಯನ್ನು ಹಿಂದಕ್ಕೆ ಪಡೆದ ಹಿನ್ನಲೆಯಲ್ಲಿ ಇಲ್ಲಿ ಆರ್‌ಟಿಒ ಅಧಿಕಾರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು.
ಬೀದರ್: ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಅರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಎಸ್.ಪಿ.ಕರ್ನೂಲ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದಾಗ 1.5 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಮಹತ್ವದ ದಾಖಲೆಗಳು ಪರಿಶೀಲನೆ ನಡೆಸಲಾಗಿದೆ.
ವಿಜಯಪುರ: ಜಿಲ್ಲೆಯ ಮಹಾರಾಷ್ಟ್ರ ಗಡಿಯಲ್ಲಿರುವ ಧೂಳಖೇಡ್ ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, 3 ರಿಂದ 4 ಲಕ್ಷ ಹಣವನ್ನು ವಶಕ್ಕೆ ಪಡೆದು, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಳಿಕ ಹೋಮ್ ಗಾರ್ಡ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ, ವಿಜಯನಗರ, ಚಾಮರಾಜನಗರದಲ್ಲಿ ಪರಿಶೀಲನೆ
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್‌ಪೋಸ್ಟ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದೇ ರೀತಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿರುವ ಚೆಕ್‌ಪೋಸ್ಟ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ 94,950 ರೂ.ಗಳ ಪೈಕಿ 7999 ರೂಪಾಯಿಗೆ ಯಾವುದೇ ರಸೀದಿ ಹಾಕದಿರುವುದು ಕಂಡುಬಂದಿದೆ.
ಇದನ್ನೋ ಓದಿ | Bharat Jodo | ಪಾದಯಾತ್ರೆ ಅಂದ್ರೆ ಹೀಗೆ ಅಂತ ನಮ್ ತಾಯಾಣೆ ಗೊತ್ತಿರಲಿಲ್ಲ: ವಿ. ಸೋಮಣ್ಣ ಲೇವಡಿ