Site icon Vistara News

ಕನ್ನಡ ರಾಜ್ಯೋತ್ಸವ | ಚಾಮರಾಜಪೇಟೆ ಮೈದಾನದಲ್ಲಿ ಹಾರುತ್ತಾ ಕನ್ನಡ ಬಾವುಟ? ಸರ್ಕಾರಕ್ಕೆ ಮತ್ತೊಂದು ಟೆನ್ಷನ್‌

chamarajpet ground

ಬೆಂಗಳೂರು: ಗಣೇಶೋತ್ಸವ ಆಚರಣೆ ಬಳಿಕ ಈಗ ಚಾಮರಾಜಪೇಟೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಕೂಗು ಕೇಳಿ ಬಂದಿದೆ. ಮೈದಾನ ಯಾರದು ಎಂಬ ಹಗ್ಗಜಗ್ಗಾಟದಲ್ಲೇ ಭಾರಿ ಸುದ್ದಿಯಾಗಿತ್ತು. ಕೋರ್ಟ್‌ ಅಂಗಳಕ್ಕೂ ಹೋಗಿ ಬಂದ ವಿವಾದಿತ ಮೈದಾನದಲ್ಲಿ, ಈಗ ರಾಜ್ಯೋತ್ಸವ ಆಚರಣೆ ಮಾಡಲು ತಯಾರಿ ನಡೆದಿದೆ.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಪಟ್ಟು ಹಿಡಿದಿದ್ದ ಚಾಮರಾಜಪೇಟೆ ನಾಗರಿಕ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳಿಗೆ ಅನುಮತಿ ಸಿಗದೇ ನಿರಾಸೆಗೊಂಡಿದ್ದರು. ಈಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಪಟ್ಟು ಹಿಡಿದಿದ್ದು, ಇದರಿಂದ ಕಂದಾಯ ಇಲಾಖೆಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಕೇವಲ ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಕೂಡ ಮೈದಾನದಲ್ಲಿ ನಾಡಧ್ವಜ ಹಾರಿಸುವಂತೆ ಒತ್ತಡ ಹಾಕಿದೆ.

ಭರವಸೆ ನೀಡಿದ್ದ ಆರ್‌ ಅಶೋಕ್‌

ಕಳೆದ 8 ತಿಂಗಳಿಂದ ಸುದ್ದಿಯಾಗಿದ್ದ ಮೈದಾನದಲ್ಲಿ ಮತ್ತೆ ಹೊಸ ತಿರುವು ಪಡೆದುಕೊಂಡು ಜನ್ಮತಾಳಿದೆ. ಸ್ವತಂತ್ರ ದಿನಾಚರಣೆಯ ವೇಳೆ ಕಂದಾಯ ಸಚಿವ ಆರ್‌ ಅಶೋಕ್‌, ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಚಾಮರಾಜಪೇಟೆ ನಾಗರಿಕ ಒಕ್ಕೂಟದಿಂದ ಸಭೆ ನಡೆಸಿ, ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಾಟಕ್ಕೆ ಅನುಮತಿ ನೀಡಿದ್ದಂತೆ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಕಳೆದ 2006ರಲ್ಲೇ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮೈದಾನದಲ್ಲಿ ಕನ್ನಡ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿದ್ದರು. ಈಗಲೂ ಅವರೇ ಧ್ವಜ ಹಾರಿಸಲಿ ಎಂದು ಸಂಘಟನೆ ಸದಸ್ಯರು ಸಲಹೆ ನೀಡಿದ್ದಾರೆ.

ಮೈದಾನದಲ್ಲಿ ಕನ್ನಡ ಧ್ವಜರೋಹಣಕ್ಕೆ ಚಾಮರಾಜಪೇಟೆ ನಾಗರಿಕರು ಶಾಸಕರಿಗೆ ಸವಾಲ್ ಹಾಕಿದ್ದು, ನೀವೇ ಧ್ವಜ ಹಾರಿಸಿ ಅಥವಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಧ್ವಜರೋಹಣ ಮಾಡಿಸಿ. ನೀವು ಹಿಂದೂಗಳ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಕಾಳಜಿ ಇದ್ದರೆ ಧ್ವಜ ಹಾರಾಟ ಮಾಡಿ ಎಂದು ಸವಾಲು ಹಾಕಿದ್ದಾರೆ. ಜತೆಗೆ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು. ಧ್ವಜರೋಹಣಕ್ಕೆ ಅನುಮತಿ ಕೇಳಲಾಗಿದೆ.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಸಾಧಕರ ಆಯ್ಕೆಗೆ ಸಲಹಾ ಸಮಿತಿ ರಚನೆ

Exit mobile version