ಬೆಂಗಳೂರು: ಡಿಜಿ–ಐಜಿಪಿ (DG-IGP) (ರಾಜ್ಯ ಪೊಲೀಸ್ ಮಹಾನಿರ್ದೇಶಕ – State Director General of Police) ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿದ್ದ ಅಲೋಕ್ ಮೋಹನ್ (Alok Mohan) ಅವರನ್ನು ಈಗ ಅದೇ ಹುದ್ದೆಗೆ ಕಾಯಂ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ 41ನೇ ಡಿಜಿ–ಐಜಿಪಿಯಾಗಿ 2020 ಜನವರಿ 31ರಂದು ಅಧಿಕಾರ ವಹಿಸಿಕೊಂಡಿದ್ದ ಪ್ರವೀಣ್ ಸೂದ್ (Praveen Sood) ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರನ್ನಾಗಿ ಮೇ ತಿಂಗಳಿನಲ್ಲಿ ನೇಮಕ ಮಾಡಲಾಗಿತ್ತು. ಇದರಿಂದಾಗಿ ತೆರವಾಗಿದ್ದ ಡಿಜಿ–ಐಜಿಪಿ ಹುದ್ದೆಗೆ ಅಲೋಕ್ ಮೋಹನ್ ಅವರನ್ನು ಪ್ರಭಾರಿಯನ್ನಾಗಿ ಕೂಡಲೇ ನಿಯೋಜಿಸಲಾಗಿತ್ತು. ಅಲೋಕ್ ಮೋಹನ್ ಅವರು ಆಗ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಆಗಿದ್ದರು.
ಇದನ್ನೂ ಓದಿ: Karnataka Politics : ರಾಜ್ಯ ಸರ್ಕಾರಕ್ಕೆ ಬಿಜೆಪಿ ಮೂರನೇ ಬಾಣ; ಕೃಷಿ ನೀತಿ ವಿರುದ್ಧ ಜನಾಂದೋಲನ
ಮೇ 22ರಂದು ಅಧಿಕಾರ ಅಲೋಕ್ ಮೋಹನ್ ವಹಿಸಿಕೊಂಡಿದ್ದು, ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಈಗ ಅಲೋಕ್ ಮೋಹನ್ ಅವರು ರಾಜ್ಯದ 42ನೇ ಡಿಜಿ– ಐಜಿಪಿ ಆಗಿ ನೇಮಕಗೊಂಡಿದ್ದಾರೆ.
ಬಿಹಾರ ಮೂಲದ ಡಾ. ಅಲೋಕ್ ಮೋಹನ್, 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಕಾರಾಗೃಹ ಇಲಾಖೆ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇವರು ಎಂ.ಎಸ್‌ಸಿ ಹಾಗೂ ಎಂ.ಫಿಲ್ ಪದವೀಧರರು. ಅಲೋಕ್ ಮೋಹನ್ ಅವರ ಅಧಿಕಾರಾವಧಿ ಇನ್ನು ಒಂದು ವರ್ಷ ಎಂಟು ತಿಂಗಳು ಇದೆ. ಅಂದರೆ, 2025ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ.
ಅಲೋಕ್ ಮೋಹನ್ ನಡೆದು ಬಂದ ದಾರಿ
ವೃತ್ತಿಜೀವನದ ಮೂರು ದಶಕಗಳಿಗೂ ಹೆಚ್ಚು ಅವಧಿಯಲ್ಲಿ ಅವರು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸವಾಲಿನ ಮತ್ತು ನಿರ್ಣಾಯಕ ಕಾರ್ಯಯೋಜನೆಗಳಲ್ಲಿ ಕೆಲಸ ಮಾಡಿದ್ದು, ಉನ್ನತ ನಿರ್ವಹಣಾ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Karnataka Politics : ಎಚ್‌ಡಿಕೆ ನೈಸ್ ದಾಖಲೆ ಕೊಟ್ರೆ ತನಿಖೆ ಎಂದ ಜೋಶಿ; ಪ್ರತ್ಯುತ್ತರ ಕೊಡುವೆನೆಂದ ಡಿಕೆಶಿ
ಅವರು ಮೂರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ರೂರ್ಕಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ‘ಆನರ್ಸ್’ ಜತೆಗೆ ವಿಜ್ಞಾನದ ಮಾಸ್ಟರ್ (ಎಂ.ಎಸ್ಸಿ ), ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಫಿಲಾಸಫಿ (ಎಂ.ಫಿಲ್) ಮತ್ತು ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್, ಹಾರ್ವರ್ಡ್ ವಿಶ್ವವಿದ್ಯಾಲಯ, ಯುಎಸ್‌ಎ ಮತ್ತು ಲೀ ಕ್ವಾನ್ ಯೂ (ಎಲ್‌ಕೆವೈ) ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ, ಸಿಂಗಾಪುರ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನಿರ್ವಹಣೆಯಲ್ಲಿ ಮಾಸ್ಟರ್ (ಎಂಪಿಎಂ) ಪಡೆದಿದ್ದಾರೆ. ಅವರು ತಮ್ಮ ಎಂಪಿಎಂ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಲೀ ಕುವಾನ್ ಯೂ ಫೆಲೋಶಿಪ್’ ಅನ್ನು ಸಹ ಪಡೆದಿದ್ದಾರೆ.