Site icon Vistara News

CM Siddaramaiah: ವಿವಿಧ ಭಾಗ್ಯಗಳ ಜತೆಗೆ ‘ಜ್ಞಾನ ಭಾಗ್ಯ’ವನ್ನೂ ಒದಗಿಸಿ; ಸಿಎಂಗೆ ಪ್ರಕಾಶಕರ ಮನವಿ

Kannada book Publishers with CM Siddaramaiah

ಬೆಂಗಳೂರು: ರಾಜ್ಯದಲ್ಲಿ ಪ್ರಕಾಶನ ರಂಗದ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ನಿಯೋಗವು, ಸಿಎಂ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿ ಮಾಡಿದೆ.

ನಗರದ ಸಿಎಂ ಕಚೇರಿಯಲ್ಲಿ ಪ್ರಕಾಶಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪ್ರಕಾಶಕರ ಸಮಸ್ಯೆಗಳನ್ನು ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಪುಸ್ತಕ ಆರೋಗ್ಯವಂತ ಸಮಾಜದ ಅನಿವಾರ್ಯ ಅಂಗ. ಹಾಗಾಗಿ ಪ್ರಕಾಶನ ರಂಗದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅದರ ಪರಿಹಾರ ಕಲ್ಪಿಸಲು ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ | ಮೊಗಸಾಲೆ ಅಂಕಣ : ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!

ಈ ವೇಳೆ ಪ್ರಕಾಶಕರು, ಪುಸ್ತಕೋದ್ಯಮ ಪ್ರೋತ್ಸಾಹಕ್ಕೆ ಬಜೆಟ್‌ನಲ್ಲಿ 25 ಕೋಟಿ ರೂ.ಗಳನ್ನು ಒದಗಿಸುವಂತೆ ನಿಯೋಗ ಮನವಿ ಮಾಡಿತು. ಈ ವೇಳೆ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್. ದೊಡ್ಡೇಗೌಡ ಅವರು ಮಾತನಾಡಿ, ನಮ್ಮ ಬೇಡಿಕೆ ಅನುಷ್ಠಾನಗೊಂಡಲ್ಲಿ ಸರ್ಕಾರ ಒದಗಿಸಿರುವ ಅನೇಕ ಭಾಗ್ಯಗಳ ಜತೆಗೆ ‘ಜ್ಞಾನ ಭಾಗ್ಯ’ವನ್ನೂ ಒದಗಿಸಿದಂತಾಗುತ್ತದೆ ಎಂದು ಗಮನ ಸೆಳೆದರು.

ಪುಸ್ತಕಗಳ ಸಗಟು ಖರೀದಿ ಯೋಜನೆಯನ್ನು ಕಡೆಗಣಿಸಲಾಗಿದ್ದು ಇದರಿಂದ ರಾಜ್ಯದ ಓದುಗರು ಜ್ಞಾನ ವಂಚಿತರಾಗುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಸ್ಥಗಿತವಾಗಿರುವ ಸಗಟು ಖರೀದಿ ಯೋಜನೆಗೆ ಚಾಲನೆ ನೀಡಬೇಕು ಹಾಗೂ 500 ಪ್ರತಿಗಳನ್ನು ಕೊಳ್ಳಬೇಕು. ಬೆಂಗಳೂರು ಮಹಾನಗರಪಾಲಿಕೆ 600 ಕೋಟಿ ರೂಗಳನ್ನು ಗ್ರಂಥಾಲಯ ಕರ ಎಂದು ಸಂಗ್ರಹಿಸಿದ್ದು, ಅದನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿಲ್ಲ. ಇದು ಪ್ರಕಾಶನ ರಂಗದ ಸಮಸ್ಯೆ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ ಎಂದು ಪ್ರಕಾಶಕರ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಉಕ್ರೇನ್ ಯುದ್ಧದಿಂದಾಗಿ ಉಂಟಾದ ನ್ಯೂಸ್ ಪ್ರಿಂಟ್ ಸಮಸ್ಯೆಯಿಂದ ಮುದ್ರಣ ರಂಗದ ವೆಚ್ಚ ಹಲವು ಪಟ್ಟು ಏರಿದೆ. ಈಗಿರುವ ಬೆಲೆಯ ಮೇಲೆ ಪುಟಕ್ಕೆ 40 ಪೈಸೆ ಹೆಚ್ಚಳವನ್ನು ಮಾಡಬೇಕಾದ ಅಗತ್ಯವಿದೆ. ಇವೆಲ್ಲವನ್ನೂ ಗಮನಿಸಿ ಸರ್ಕಾರ ಪ್ರಕಾಶಕರ ನೆರವಿಗೆ ಬರಬೇಕು ಎಂದು ಸಿಎಂಗೆ ಪ್ರಕಾಶಕರು ಮನವಿ ಮಾಡಿದರು.

ಇದನ್ನೂ ಓದಿ | BBMP Election: ಫ್ರೀ ಬಸ್‌ ಮೇಲೇರಿ BBMP ಗೆಲ್ಲಲು ಹೊರಟ ಕಾಂಗ್ರೆಸ್‌: ಚುನಾವಣೆಗೆ ಕಾರ್ಯತಂತ್ರ ಜೋರು

ನಿಯೋಗದಲ್ಲಿ ಪ್ರಕಾಶಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್. ದೊಡ್ಡೇಗೌಡ, ಹಿರಿಯ ಪ್ರಕಾಶಕರಾದ ನಿತಿನ್ ಶಾ, ಎಚ್.ಕೆ.ಲಕ್ಷ್ಮೀನಾರಾಯಣ ಅಡಿಗ, ಜಿ.ಎನ್.ಮೋಹನ್, ಮಾನಸ, ಪದಾಧಿಕಾರಿಗಳಾದ ಬಿ.ಕೆ.ಸುರೇಶ್, ಚಂದ್ರಕೀರ್ತಿ ಬಿ.ಎಂ, ಕೆ.ಎಸ್.ಮುರಳಿ ಇದ್ದರು.

Exit mobile version