ಹೊಸನಗರ: ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಸೇತುವೆ ಕಾಮಗಾರಿ ಕುಂಠುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಚ್. ಹಾಲಪ್ಪ ಸ್ಥಳ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬದಲಿ ತಂತ್ರಜ್ಞಾನ ಬಳಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂಬ ಮಾಹಿತಿಯನ್ನು ಶಾಸಕರು ಈ ವೇಳೆ ತಿಳಿಸಿದ್ದಾರೆ.
ಮಂಗಳೂರು ಬಂದರು, ಕುಂದಾಪುರ ಸೇರಿದಂತೆ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ೨೦೧೮ರಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಆದರೆ, ಕಾಮಗಾರಿ ಪ್ರಾರಂಭವಾಗಿ ೪ ವರ್ಷಕ್ಕೆ ಬಂದರೂ ಇನ್ನೂ ಆಮೆಗತಿಯಲ್ಲಿ ಕುಂಠುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಹಾಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಮಾತನಾಡಿದ ಶಾಸಕ ಹಾಲಪ್ಪ, ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 115.59 ಕೋಟಿ ರೂಪಾಯಿ ಮಂಜೂರಾಗಿದೆ. ಕೆಆರ್‌ಡಿಸಿಎಲ್ ಏಜೆನ್ಸಿ ಮೂಲಕ ಎಸ್‌ಪಿಎಲ್ ಇನ್ಫ್ರಾಸ್ಟಕ್ಚರ್ ಪ್ರೈ.ಲಿ ನವರಿಗೆ ಟೆಂಡರ್ ಆಗಿದೆ. 2018ರಲ್ಲಿ ಕಾಮಗಾರಿ ಪ್ರಾರಂಭಗೊಂಡು, 2022ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಪ್ರಸ್ತುತ ಸೇತುವೆಯ ಎರಡೂ ಭಾಗದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು 210 ಪೈಲ್‌ಗಳಲ್ಲಿ 143 ಪೈಲ್‌ಕ್ಯಾಪ್‌ಗಳು ಪೂರ್ಣಗೊಂಡಿವೆ ಎಂದರು.
2020 ಹಾಗೂ 2021 ರಲ್ಲಿ ಕೋವಿಡ್-19ರ ಸಾಂಕ್ರಾಮಿಕ ಕಾಯಿಲೆ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಸೇತುವೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಾಗ ಆದ ತಾಂತ್ರಿಕ ಸಮಸ್ಯೆಯಿಂದಾಗಿ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ಬದಲಿ ತಂತ್ರಜ್ಞಾನ ಬಳಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಂತದಲ್ಲಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಇದನ್ನೂ ಓದಿ | Modi Birthday | ಮೈಸೂರು, ಬೆಳಗಾವಿ, ಶಿವಮೊಗ್ಗದಲ್ಲಿ ಮೋದಿ ಮೇನಿಯಾ; ಬಿಜೆಪಿಯಿಂದ ವಿಶೇಷ ಕಾರ್ಯಕ್ರಮ