ಬೆಂಗಳೂರು: ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ (Alur Nagappa) ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇಂದು (ಜುಲೈ 23) ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪ ಅವರು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಹುಟ್ಟೂರು ಬಿಡದಿಯಲ್ಲಿ ಆಲೂರು ನಾಗಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ.
ಮೂಲತಃ ರಾಮನಗರ ಬಿಡದಿ ಮೂಲದವರಾಗಿದ್ದ ಆಲೂರು ನಾಗಪ್ಪ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಗವಿಪುರಂನಲ್ಲಿ ವಾಸವಾಗಿದ್ದರು. 80 ದಶಕದಲ್ಲಿ ಜನಪ್ರಿಯರಾಗಿದ್ದ ಅವರು ಸದ್ಯ ಕ್ಯಾಸೆಟ್ ಸಂಘದ ಅಧ್ಯಕ್ಷರೂ ಆಗಿದ್ದರು.
ಆಲೂರು ನಾಗಪ್ಪ ಅವರು ಸಾವಿರಾರು ಲಾವಣಿ, ತತ್ವಪದಗಳ ಹರಿಕಾರಕರರು. ಇವರು ರಚಿಸಿ, ಹಾಡಿರುವ ಹಾಡುಗಳನ್ನು ಇಂದಿಗೂ ಅಭಿಮಾನಿಗಳು ಗುನುಗುತ್ತಿರುತ್ತಾರೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ನಾಗಪ್ಪ ಅವರ ಕಾಲಿನ ಸೋಂಕು ಉಲ್ಬಣವಾದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಸೋಂಕು ತೀವ್ರವಾಗಿ ಚಿಕಿತ್ಸೆ ಫಲಕಾರಿ ಆಗದೆ ಅವರು ನಿಧನ ಹೊಂದಿದ್ದಾರೆ. ಇವರ ಮಗಳು ದಿವ್ಯ ಆಲೂರು ಕೂಡ ನಿರೂಪಕಿ, ಗಾಯಕಿ.
ಕನ್ನಿಕೇರಿ ಹುಡುಗಿಯೊಬ್ಬಳು, ನೀನು ಮದುಕಿಯಂಗೆ ಮುಸುಕಾಕೊಂಡು, ಬೆಂಗಳೂರ್ ಹುಡ್ಗ ಬಂದವನಂತ ಬಗ್ಗಿ ಬಗ್ಗಿ ನೋಡ್ತೀಯಲ್ಲೇ, ತವರಿಂದ ಕಳಿಸಿ ನನ್ನ ಮರಿಬೇಡ ಅಣ್ಣಯ್ಯ, ಅಳಬ್ಯಾಡ ತಂಗಿ ಅಳಬ್ಯಾಡ, ಹೆತ್ತ ತಾಯಿ ಋಣವ ತೀರಿಸೋ, ಎಚ್ಚರಾಗು ಕನ್ನಡಿಗ ಇವು ಆಲೂರು ನಾಗಪ್ಪ ಅವರ ಪ್ರಸಿದ್ಧ ಹಾಡುಗಳು.
ವಿಶೇಷ ಎಂದರೆ ಆಲೂರು ನಾಗಪ್ಪ ಅವರು ‘ಸಾವಿರ ಹಾಡುಗಳ ಸರದಾರ’ ಎಂದು ಹೆಸರಾಗಿದ್ದಾರೆ. ಯುವಜನತೆ, ಮಹಿಳೆಯರಿಗೆ ಇಷ್ಟವಾಗುವ ಹಾಡುಗಳು, ನಾಡುನುಡಿಗೆ ಸಂಬಂಧಿಸಿದ ಎಲ್ಲ ರೀತಿಯ ಹಾಡುಗಳನ್ನೂ ಬರೆದಿದ್ದಾರೆ. ಭಕ್ತಿ ಗೀತೆಗಳನ್ನೂ ರಚಿಸಿದ್ದಾರೆ. ಆದರೆ ಅವರು ತಾವು ರಚಿಸಿದ, ಹಾಡಿದ ಯಾವ ಹಾಡುಗಳ ಹಕ್ಕನ್ನೂ ಬೇರೆಯವರಿಗೆ ಕೊಟ್ಟಿಲ್ಲ. ದೊಡ್ಡ ಕಂಪನಿಗಳು ಬಂದು ಮನವಿ ಮಾಡಿದರೂ ನನ್ನ ಶಾರದೆಯನ್ನು ಯಾರಿಗೂ ಕೊಡುವುದಿಲ್ಲ ಎಂದು ಕಡ್ಡಿ ತುಂಡಾದಂತೆ ಹೇಳುತ್ತಿದ್ದರು. ಆದರೆ ಒಂದೆರಡು ಸಿನಿಮಾಗಳಲ್ಲಿ ಅಪ್ಪನ ಹಾಡುಗಳನ್ನು ಅನುಮತಿ ಪಡೆಯದೆ ಬಳಸಿಕೊಳ್ಳಲಾಗಿದೆ ಎಂದು ಸಂದರ್ಸನವೊಂದರಲ್ಲಿ ಈ ಹಿಂದೆ ದಿವ್ಯ ಆಲೂರು ತಿಳಿಸಿದ್ದರು.
ಇದನ್ನೂ ಓದಿ: Sadananda Suvarna : ʼಗುಡ್ಡದ ಭೂತʼ ಖ್ಯಾತಿಯ ಹಿರಿಯ ರಂಗಕರ್ಮಿ, ನಿರ್ದೇಶಕ ಸದಾನಂದ ಸುವರ್ಣ ಇನ್ನಿಲ್ಲ