ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡುವ ಕುರಿತು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ (Amit shah) ನೇತೃತ್ವದಲ್ಲಿ ಶುಕ್ರವಾರ ಬಿಜೆಪಿ ನಾಯಕರ ಸಭೆ ನಡೆಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಬಿಜೆಪಿ ನಾಯಕರು ಚರ್ಚಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳು ಇನ್ನಷ್ಟು ಶೀಘ್ರವಾಗಿ ಜಾರಿಯಾಗಬೇಕು. ಒಂದು ತಿಂಗಳ ಒಳಗೆ ಎಲ್ಲವೂ ಸರಿ ಹೋಗಬೇಕು. ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸಬೇಕು. ಪಕ್ಷ ಮತ್ತು ಸರ್ಕಾರ ಸ್ಟ್ರೈಟ್ ರೂಟ್‌ನಲ್ಲಿ ಹೋಗಬೇಕು. ನನಗೆ ಫಲಿತಾಂಶ ಅಷ್ಟೇ ಮುಖ್ಯ. ಮುಂದಿನ ಭೇಟಿಯಲ್ಲಿ ಬರೀ ಫಲಿತಾಂಶವನ್ನಷ್ಟೇ ಕೇಳುತ್ತೇನೆ ಎಂದು ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಬೆಂಗಳೂರು ಹಾಗೂ ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಗೆಲ್ಲಲು ಆಗುತ್ತಿಲ್ಲ. ಈ ಭಾಗದ 9 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 13 ಸ್ಥಾನ ಗೆದ್ದಿದ್ದೇವೆ. ಅದನ್ನು ೩೦ ಸ್ಥಾನ ದಾಟಿಸುವ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಬೇಕು. ಈ ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ನಮ್ಮ ಮೊದಲ ವಿರೋಧಿ ಜೆಡಿಎಸ್ ಆಗಿದ್ದು, ಬಳಿಕ ಕಾಂಗ್ರೆಸ್ ಆಗಿದೆ. ಹೀಗಾಗಿ ಹೊಂದಾಣಿಕೆ ರಾಜಕೀಯ ಬಿಟ್ಟು, ಪಕ್ಷ ಕಟ್ಟಬೇಕು ಎಂದು ತಿಳಿಸಿದ್ದಾರೆ.
ರೌಡಿಗಳ ಪಕ್ಷ ಸೇರ್ಪಡೆ ಬಗ್ಗೆ ಪ್ರಸ್ತಾಪಿಸಿ, ಪಕ್ಷ ಸೇರ್ಪಡೆ ವೇಳೆ ಪರಿಶೀಲನೆ ಮಾಡಿ ಕಾರ್ಯಕರ್ತರು, ನಾಯಕರನ್ನು ಸೇರಿಸಿಕೊಳ್ಳಬೇಕು. ಇನ್ನು ಮುಂದೆ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿ, ಜಿಲ್ಲಾ ಘಟಕಗಳ ಅಧ್ಯಕ್ಷರಿಂದ ಕ್ಷೇತ್ರವಾರು ರಾಜಕೀಯ ಚಿತ್ರಣದ ವರದಿ ಪಡೆದುಕೊಂಡರು.
ಒಳಮೈತ್ರಿಗೆ ಬ್ರೇಕ್ ಹಾಕಿ, ಸ್ವಾಭಿಮಾನದ ಮೇಲೆ ಪಕ್ಷ ಕಟ್ಟಲು ಸೂಚನೆ ನೀಡಬೇಕು ಎಂದು ಕೆಲ ನಾಯಕರು ಸಭೆಯಲ್ಲಿ ಪ್ರಸ್ತಾಪ ಇಟ್ಟಿದ್ದಾರೆ. ನಮಗೆ ಕಾಂಗ್ರೆಸ್‌ನಷ್ಟೇ ಜೆಡಿಎಸ್ ಕೂಡ ವಿರೋಧಿಯಾಗಿದೆ. ಹೀಗಾಗಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳಬೇಕು. ಜೆಡಿಎಸ್ ನಾಯಕರ ಬಗ್ಗೆ ಸಾಫ್ಟ್ ಕರ್ನರ್ ಬೇಡ. ಈ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಅಮಿತ್ ಶಾಗೆ ಕೆಲ ನಾಯಕರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅಮಿತ್ ಶಾ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಚುರುಕುಗೊಳಿಸಬೇಕು. ಮೊದಲು ಬೂತ್ ಮಟ್ಟದಲ್ಲಿ ಜನರನ್ನು ತಲುಪಬೇಕು ಎಂದು ಸೂಚಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಅಮಿತ್ ಶಾ ಬಂದರೆ ಚುನಾವಣಾ ಕಾವು ಜಾಸ್ತಿ ಆಗುತ್ತದೆ. ಮೂರು ಗಂಟೆಗಳ ಕಾಲ ಹಳೆ ಮೈಸೂರು ಭಾಗದ ಬಗ್ಗೆ ಚರ್ಚೆ ಮಾಡಿದ್ದಾರೆ. ಶಾಸಕರು ಮತ್ತು ನಾಯಕರ ಬಳಿ ಮಾಹಿತಿ ಪಡೆದಿದ್ದಾರೆ. ಮುಂದಿನ ತಿಂಗಳು ಅಮಿತ್ ಶಾ ಎರಡು ದಿನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಒಂದು ದಿನ ಹಳೇ ಮೈಸೂರು ಭಾಗ, ಮತ್ತೊಂದು ದಿನ ಉತ್ತರ ಕರ್ನಾಟಕದ ಕಡೆ ಪ್ರವಾಸ ಮಾಡುತ್ತಾರೆ ಎಂದು ತಿಳಿಸಿದರು.
ಹೊಂದಾಣಿಕೆ ಪಾಲಿಟಿಕ್ಸ್ ಬೇಡ. ಹೊಂದಾಣಿಕೆ ಮಾಡಿಕೊಂಡರೆ ನಮ್ಮ ಪಕ್ಷಕ್ಕೆ ದ್ರೋಹ ಮಾಡಿದಂತಾಗುತ್ತದೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೂ ನಮಗೂ ಸಂಬಂಧವಿಲ್ಲ. ನಮ್ಮ ಜತೆ ಸಂಬಂಧ ಇದೆ ಅಂತ ಜೆಡಿಎಸ್ ಲಾಭ ಪಡೆಯಬಹುದು. ಇದರ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಹಳೆ ಮೈಸೂರು ಭಾಗದಲ್ಲಿ 35ಕ್ಕೂ ಅಧಿಕ ಸ್ಥಾನ ಗೆಲ್ಲಬೇಕು. ಬೆಂಗಳೂರು ಭಾಗದಲ್ಲಿ 20 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಸಿ.ಟಿ.ರವಿ ಮಾತನಾಡಿ, ಬೆಂಗಳೂರು ಹೊರತುಪಡಿಸಿ ಹಳೇ ಮೈಸೂರು ಭಾಗದಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿಲ್ಲ. ಹೀಗಾಗಿ ಅಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಟಾಸ್ಕ್ ನಮ್ಮ ಮುಂದಿದೆ. ಗೆಲ್ಲುವುದಷ್ಟೇ ಮುಖ್ಯ, ಗೆಲುವಿಗಾಗಿ ತಂತ್ರಗಾರಿಕೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Congress Convention | ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಡಿ.ಕೆ.ಶಿವಕುಮಾರ್