ಮಂಗಳೂರು: ರಾಜ್ಯದಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಫುಲ್ ಆಕ್ಟಿವ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮತ್ತೆ ಮತ್ತೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂದು ಪಣ ತೊಟ್ಟಂತೆ ಕಾಣುತ್ತಿದೆ. ಒಂದು ಕಡೆ ಹಳೆ ಮೈಸೂರಿನಲ್ಲಿ ಇನ್ನೂ ಗೆಲ್ಲದ ಕ್ಷೇತ್ರಗಳನ್ನು ಗೆಲ್ಲುವ ಕಡೆಗೆ ರಣತಂತ್ರಗಳನ್ನು ರೂಪಿಸುತ್ತಿದ್ದರೆ, ಇನ್ನೊಂದು ಕಡೆ ಈಗಾಗಲೇ ಬಲಿಷ್ಠವಾಗಿರುವ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಿ ಫುಲ್ ಸ್ವೀಪ್ ಮಾಡಬೇಕು ಎನ್ನುವ ಉದ್ದೇಶವೂ ಪಕ್ಷಕ್ಕಿದೆ.
ಸಹಕಾರ ಸಚಿವರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಕರಾವಳಿಯಲ್ಲಿ ನಡೆಸಿದ ಮಿಂಚಿನ ಸಂಚಾರವೂ ಇದೇ ತಂತ್ರಗಾರಿಕೆಯ ಭಾಗವಾಗಿದೆ. ಪುತ್ತೂರಿನ ಈಶ್ವರಮಂಗಲದ ಅಮರಗಿರಿಯಲ್ಲಿ ʻಭಾರತ್ ಮಾತಾ ಮಂದಿರ್ʼ ಎಂಬ ದೇಶಭಕ್ತಿಯ ದೇಗುಲವನ್ನು ಲೋಕಾರ್ಪಣೆ ಮಾಡಿದ ಅವರು ಬಿಜೆಪಿಯ ಆಂತರಿಕ ಶಕ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದರು. ಭಾರತ ಮಾತೆಗೆ ದೇಗುಲ ಕಟ್ಟುವುದು ಎನ್ನುವುದು ಈ ಭಾಗದಲ್ಲಿ ಬಿಜೆಪಿಯ ಅಸ್ಮಿತೆಯನ್ನು ಇನ್ನಷ್ಟು ಶಕ್ತಿಶಾಲಿಗೊಳಿಸುವ ಒಂದು ಬಲಿಷ್ಠ ಅಸ್ತ್ರ.
ಇದರ ಜತೆಗೆ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ʻನಿಮಗೆ ಉಳ್ಳಾಲದ ರಾಣಿ ಅಬ್ಬಕ್ಕ ಬೇಕೋ, ಟಿಪ್ಪು ಸುಲ್ತಾನ್ ಬೇಕೋʼ ಎಂಬ ಹೊಸ ಸಿದ್ಧಾಂತವಾದವನ್ನು ಮುಂದಿಟ್ಟರು. ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಆರನ್ನು ತನ್ನ ವಶದಲ್ಲಿ ಇಟ್ಟುಕೊಂಡಿದೆ. ಆದರೆ, ಯು.ಟಿ. ಖಾದರ್ ಪ್ರತಿನಿಧಿಸುತ್ತಿರುವ ಮಂಗಳೂರು (ಹಿಂದಿನ ಉಳ್ಳಾಲ) ಕ್ಷೇತ್ರ ಮಾತ್ರ ಕೈ ತಪ್ಪಿದೆ. ಅದನ್ನೇ ಟಾರ್ಗೆಟ್ ಆಗಿಟ್ಟುಕೊಂಡು ಉಳ್ಳಾಲದ ರಾಣಿಯನ್ನು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಒಡೆಯರ್ ವರ್ಸಸ್ ಟಿಪ್ಪು ಸುಲ್ತಾನ್ ಪ್ರಯೋಗ ನಡೆಸಿರುವ ಅಮಿತ್ ಶಾ ಇಲ್ಲಿ ಅಬ್ಬಕ್ಕ ವರ್ಸಸ್ ಟಿಪ್ಪು ಸೂತ್ರ ಮುಂದಿಟ್ಟಿದ್ದಾರೆ.
ಪ್ರಮುಖರ ಸಭೆಯಲ್ಲಿ ಫುಲ್ ಸ್ವೀಪ್ ಚರ್ಚೆ
ಪುತ್ತೂರಿನಲ್ಲಿ ಎರಡು ಕಾರ್ಯಕ್ರಮ ಮುಗಿಸಿದ ಬಳಿಕ ಅಮಿತ್ ಶಾ ಅವರು ಮಂಗಳೂರು ವಿಮಾನ ನಿಲ್ದಾಣ ಸಮೀಪದ ಕೆಂಜಾರು ಶ್ರೀ ದೇವಿ ಕಾಲೇಜು ಸೆಮಿನಾರ್ ಹಾಲ್‌ನಲ್ಲಿ ಮಂಗಳೂರು ಮತ್ತು ಶಿವಮೊಗ್ಗ ವಿಭಾಗದ ಬಿಜೆಪಿ ಪ್ರಮುಖ ನಾಯಕರ ಸಭೆಯನ್ನು ನಡೆಸಿದರು. ಅದರಲ್ಲಿ ಪಕ್ಷ ಮುಂದಿನ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಿತು. ಅದರಲ್ಲೂ ಮುಖ್ಯವಾಗಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಎಲ್ಲ ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಅನ್ನು ಅಮಿತ್ ಶಾ ನೀಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಏಳು ಸ್ಥಾನಗಳ ಪೈಕಿ ಉಳ್ಳಾಲ ಒಂದು ಕಾಂಗ್ರೆಸ್ ಕೈಯಲ್ಲಿದೆ, ಉಡುಪಿಯ ಎಲ್ಲ ಮೂರು ಕ್ಷೇತ್ರಗಳನ್ನು ಬಿಜೆಪಿಯೇ ಗೆದ್ದಿದೆ. ಶಿವಮೊಗ್ಗ ಏಳು ಸ್ಥಾನಗಳ ಪೈಕಿ ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಚಿಕ್ಕಮಗಳೂರಿನ ಐದರಲ್ಲಿ ಶೃಂಗೇರಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಅಂದರೆ ಈ ನಾಲ್ಕು ಜಿಲ್ಲೆಗಳ ೨೨ ಕ್ಷೇತ್ರಗಳ ಪೈಕಿ ೧೯ನ್ನು ಬಿಜೆಪಿ ಗೆದ್ದಿದ್ದರೆ, ಮೂರರಲ್ಲಿ ಕಾಂಗ್ರೆಸ್ ವಿನ್ ಆಗಿದೆ.
ಈ ಬಾರಿ ಈ ಮೂರನ್ನು ಕೂಡಾ ಗೆಲ್ಲಲೇಬೇಕು ಎನ್ನುವ ಟಾರ್ಗೆಟ್ ಅನ್ನು ಅಮಿತ್ ಶಾ ನಾಯಕರಿಗೆ ನೀಡಿದ್ದಾರೆ. ಅದರ ಜತೆಗೆ ಈಗ ಗೆದ್ದಿರುವ ಕೆಲವು ಕ್ಷೇತ್ರಗಳಲ್ಲಿ ಭಿನ್ನಮತ, ಟಿಕೆಟ್ ಆಕಾಂಕ್ಷಿಗಳ ಅಬ್ಬರದ ಕಾರಣಕ್ಕೆ ಗೊಂದಲಗಳು ಮೂಡಿವೆ. ಅವುಗಳನ್ನು ನಿವಾರಿಸಿ ಎಲ್ಲವನ್ನೂ ಉಳಿಸಿಕೊಳ್ಳುವತ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು, ಶಿವಮೊಗ್ಗ ವಿಭಾಗದ ಪ್ರಮುಖರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸುನೀಲ್ ಕುಮಾರ್, ಅಂಗಾರ ಭಾಗಿಯಾಗಿದ್ದರು. ಜತೆಗೆ ಶಾಸಕರು ಪ್ರಮುಖರು ಇದ್ದರು.
ಎಲ್ಲ ಕ್ಷೇತ್ರ ಗೆಲ್ಲುವ ಟಾರ್ಗೆಟ್ ಎಂದ ಈಶ್ವರಪ್ಪ
ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಚುನಾವಣೆ ಹೊರತು ಬೇರೆ ಚರ್ಚೆ ನಡೆದಿಲ್ಲ. ನಮ್ಮಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ʻʻಚುನಾವಣೆಗೆ ಸಂಭಂದಿಸಿದಂತೆ ಪ್ರಮುಖ ಸಲಹೆ ನೀಡಿದ್ದಾರೆ. ವಿಭಾಗದಲ್ಲಿರುವ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆʼʼ ಎಂದು ಹೇಳಿದರು.
೨೦ ದಿನಗಳ ಒಳಗಾಗಿ ಹಳ್ಳಿ ತಲುಪಲು ಸೂಚನೆ ಎಂದ ಬಿಎಸ್‌ವೈ
ʻʻʻಚುನಾವಣೆಯ ಹಿನ್ನಲೆಯಲ್ಲಿ ಸಭೆ ನಡೆದಿದೆ. ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. ಈ ವಿಚಾರವನ್ನು ಅಮಿತ್ ಶಾ ಅವರು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಸಭೆ ನಡೆಸಿ ಎಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ. ಇನ್ನು 20 ದಿನಗಳ ಒಳಗಾಗಿ ಎಲ್ಲಾ ಹಳ್ಳಿಗಳನ್ನು ತಲುಪಬೇಕು. ಚುನಾವಣೆ ಘೋಷಣೆಗೂ ಮೊದಲೇ ಹಳ್ಳಿಗಳನ್ನು ತಲುಪಬೇಕು ಎಂದಿದ್ದಾರೆ. ಈ ಬಾರಿ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಸಲಹೆ ನೀಡಿದ್ದಾರೆʼʼ ಎಂದು ಸಭೆಯ ಬಳಿಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಇದನ್ನೂ ಓದಿ : Amit Shah in Karavali : ಟಿಪ್ಪು ಸುಲ್ತಾನ್ ಬೇಕೋ, ರಾಣಿ ಅಬ್ಬಕ್ಕ ಬೇಕೋ, ಆಯ್ಕೆ ನಿಮ್ಮದು ಎಂದ ಗೃಹ ಸಚಿವ ಅಮಿತ್ ಶಾ