ಬೆಂಗಳೂರು: ಕೆಲವೊಂದು ಸಣ್ಣಪುಟ್ಟ ನಡೆಗಳೇ ರಾಜಕಾರಣ ದಿಕ್ಕು ದೆಸೆಗಳನ್ನು ಹೇಳುತ್ತವೆ ಎನ್ನುವ ಮಾತು ನಿಜವೆಂದಾದರೆ ಬಿ.ಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸ ಪವರ್ ಸೆಂಟರ್ ಆಗಿದೆ ಎಂದು ಧಾರಾಳವಾಗಿ ಹೇಳಬಹುದು. ಯಾಕೆಂದರೆ, ಪ್ರಸಕ್ತ ಬೆಂಗಳೂರಿನಲ್ಲಿರುವ ಕೇಂದ್ರ ಗೃಹ ಸಚಿವರೂ, ಭಾರತೀಯ ಜನತಾ ಪಕ್ಷದ ದಿಕ್ಕು ದೆಸೆಗಳನ್ನು ನಿರ್ಧರಿಸುವ ನಂಬರ್ ಟೂ ನಾಯಕ ಅಮಿತ್ ಶಾ (Amit Shah Visit) ಅವರು ಬೆಳಗ್ಗಿನ ಉಪಾಹಾರಕ್ಕೆ ತೆರಳಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ.
ಯಡಿಯೂರಪ್ಪ ಅವರ ಮನೆಯಲ್ಲಿ ನಡೆದಿದ್ದು ಕೇವಲ ಬೆಳಗ್ಗಿನ ತಿಂಡಿಯಲ್ಲ, ರಾಜ್ಯದ ತಿಂಡಿ ಪಾಲಿಟಿಕ್ಸ್ ಎಂದು ಹೇಳಲಾಗಿದೆ. ಉಪಾಹಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಕೂಡಾ ಜತೆಗೂಡಿದ್ದಾರೆ. ಈ ವೇಳೆ ವಿಧಾನ ಸಭಾ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ದಿಲ್ಲಿ ನಾಯಕರು ಬಂದಾಗ ಅವರು ಇಲ್ಲಿನ ನಾಯಕರನ್ನು ತಾವಿದ್ದಲ್ಲಿಗೆ ಕರೆಸಿಕೊಳ್ಳುತ್ತಾರೆ. ಹಿಂದೆ ನಡೆದಿದ್ದೂ ಹೀಗೆಯೇ. ಸ್ವತಃ ಇದೇ ಅಮಿತ್ ಶಾ ಅವರು ಯಡಿಯೂರಪ್ಪ ಅವರನ್ನು ತಾವಿದ್ದ ಹೋಟೆಲ್‌ಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಆದರೆ, ಈ ಬಾರಿ ಅಮಿತ್ ಶಾ ಅವರೇ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿಯಾಗಿದ್ದರೂ ರಾಜ್ಯ ರಾಜಕೀಯದಲ್ಲಿ ಈಗಲೂ ಯಡಿಯೂರಪ್ಪ ಅವರಿಗಿರುವ ತಾಕತ್ತು ಬಿಜೆಪಿಯಲ್ಲಿ ಬೇರೆ ಯಾರಿಗೂ ಇಲ್ಲ ಎನ್ನುವುದನ್ನು ಪಕ್ಷ ಅರಿತುಕೊಂಡಂತಿದೆ. ಅಧಿಕಾರವೇ ಇಲ್ಲದಿದ್ದರೂ ಅವರು ನಡೆಸುತ್ತಿರುವ ಓಡಾಟ, ನಾನಾ ಕಾರಣಗಳಿಗಾಗಿ ಪಕ್ಷ ಬಿಟ್ಟು ಹೋಗುವ ಹಂತದಲ್ಲಿರುವವರನ್ನು ಸಮಾಧಾನಪಡಿಸುತ್ತಿರುವ ರೀತಿ ಅವರಿಗೆ ಇರುವ ಜನಪ್ರೀತಿ, ಜನಪ್ರಿಯತೆಯನ್ನು ಸಾಬೀತುಪಡಿಸಿದೆ.
ಇದೆಲ್ಲವನ್ನು ಗಮನಿಸಿಕೊಂಡು ಅಮಿತ್ ಶಾ ಅವರೂ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನಡೆದುಕೊಳ್ಳುತ್ತಿದ್ದಾರೆ. ಅದರ ಜತೆಗೆ ಬಿಜೆಪಿ ಯಡಿಯೂರಪ್ಪ ಅವರನ್ನು ಅಪಮಾನಿಸಿದೆ, ಇದು ಲಿಂಗಾಯತರಿಗೆ ಮಾಡಿದ ಅನ್ಯಾಯ ಎಂದೆಲ್ಲ ಕಾಂಗ್ರೆಸ್ ಬಿಎಸ್‌ವೈ ಅವರ ಕಣ್ಣೀರ ಕಥೆ ಹೇಳಿಕೊಂಡು ಬರುತ್ತಿರುವುದರಿಂದ ಮತದಾರರಲ್ಲೂ ವಿಶ್ವಾಸ ಮೂಡಿಸುವ ದೃಷ್ಟಿಯಿಂದ ಈ ತಂತ್ರ ಅಳವಡಿಸಿಕೊಳ್ಳಲಾಗಿದೆ ಎಂಬ ಮಾತಿದೆ.
ಇದೆಲ್ಲದಕ್ಕೂ ಒಂದೇ ಮಾತಿನಲ್ಲಿ ಉತ್ತರ ಕೊಡುವಂತೆ ಬಿಎಸ್‌ವೈ ನಿವಾಸಕ್ಕೇ ತೆರಳಿ ಉಪಾಹಾರ ಸೇವಿಸಲು ಅಮಿತ್ ಶಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಏನೇನಿದೆ ಉಪಾಹಾರಕ್ಕೆ?
ಉಪಾಹಾರಕ್ಕೆ ಉಪ್ಪಿಟ್ಟು, ದೋಸೆ, ಪೊಂಗಲ್, ಇಡ್ಲಿ, ರಸಮಲೈ ವ್ಯವಸ್ಥೆ ಮಾಡಲಾಗಿದೆ. ಬಿಎಸ್ವೈ ಕುಟುಂಬದ ಸದಸ್ಯರಿಂದ ಅಮಿತ್ ಶಾ ಅವರಿಗೆ ಆತಿಥ್ಯ ವ್ಯವಸ್ಥೆ ಮಾಡಲಾಗಿತ್ತು. ಬಿಎಸ್‌ವೈ ಅವರ ಪುತ್ರಿಯರಾದ ಉಮಾದೇವಿ, ಪದ್ಮಾವತಿಯವರೇ ಮುಂದೆ ನಿಂತು ಸತ್ಕಾರ ಮಾಡಿದರು. ಬಿ.ವೈ ವಿಜಯೇಂದ್ರ ಕುಟುಂಬವೂ ಇದೇ ಮನೆಗೆ ಬಂದಿದೆ. ಅಮಿತ್ ಶಾ ಅವರು ಕೂಡಾ ನಿರಾಳವಾಗಿ ತಿಂಡಿ ಖುಷಿ ಖುಷಿಯಾದರು.
ಇದನ್ನೂ ಓದಿ Karnataka Elections: ಅಮಿತ್ ಶಾ ಭೇಟಿಯಾದ ಕೆ.ಸಿ. ನಾರಾಯಣ ಗೌಡ; ಬಿಜೆಪಿಯಿಂದಲೇ ಸ್ಪರ್ಧೆ ಪಕ್ಕಾ?