ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ಸಿಡಿ ಎಕ್ಸ್‌ಪರ್ಟ್ ಆಗಿದ್ದಾರೆ. ಗುಜರಾತ್ ಬಿಜೆಪಿ ನಾಯಕ ಸಂಜಯ್ ಜೋಶಿ ಅವರ ಸಿಡಿ ಮಾಡಿಸಿದ್ದು ಅವರೇ ಅಲ್ಲವೇ? ಅದಕ್ಕಾಗಿಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿ ಅವರನ್ನು ಭೇಟಿ ಮಾಡಿರಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಮಿತ್ ಶಾ ಅವರು ಸಿಡಿ ಎಕ್ಸ್‌ಪರ್ಟ್ ಆಗಿರುವುದರಿಂದ ಅವರ ಬಳಿ ಸಲಹೆ ಪಡೆದುಕೊಳ್ಳಲು ರಮೇಶ್ ಜಾರಕಿಹೊಳಿ ಹೋಗಿರಬೇಕು ಎಂದು ಹೇಳಿದ್ದಾರೆ. “ತಮ್ಮ ವಿರುದ್ಧದ ಸಿಡಿ ಬಿಡುಗಡೆ ಹಿಂದೆ ಡಿ.ಕೆ. ಶಿವಕುಮಾರ್ ಕೈವಾಡವಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು” ಎಂದು ಆರೋಪ ಮಾಡಿರುವ ರಮೇಶ್ ಜಾರಕಿಹೊಳಿ ಅವರು ಅಮಿತ್ ಶಾರನ್ನು ಭೇಟಿ ಮಾಡಿದ ವಿಷಯಕ್ಕೆ ಈ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Ramesh Jarkiholi: ದೆಹಲಿಯಿಂದ ಮುಂಬೈನತ್ತ ಹಾರಿದ ರಮೇಶ್ ಜಾರಕಿಹೊಳಿ; ಸಿಐಡಿ ತನಿಖೆಗೆ ಸಿಡಿ ಕೇಸ್ ವಹಿಸಲು ಒತ್ತಡ ತಂತ್ರ
ಬಳಿಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿ.ಕೆ. ಹರಿಪ್ರಸಾದ್, ಬೆಂಗಳೂರು ನಗರ ಮೂಲಭೂತ ಸೌಕರ್ಯಗಳ ವಿಚಾರವಾಗಿ ಬಿಜೆಪಿ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ನಗರವನ್ನು ಅಭಿವೃದ್ಧಿ ಮಾಡುತ್ತಿಲ್ಲ. ನಗರದ ೧೨ ಕ್ಷೇತ್ರಗಳಲ್ಲಿ ಪ್ಲ್ಯಾನಿಂಗ್ ಪ್ರಕಾರ ಮೂಲಭೂತ ಸೌಕರ್ಯಗಳನ್ನು ಮಾಡುತ್ತಿಲ್ಲ. ಸ್ಯಾಂಕಿ ರಸ್ತೆಯಲ್ಲಿ ಪ್ಲೈಓವರ್ ಮಾಡುವ ಬದಲು, ಮೊದಲು ಕೆರೆ ಉಳಿಸುವ ಕೆಲಸವನ್ನು ಮಾಡಬೇಕು ಎಂದು ಕಿಡಿಕಾರಿದರು.
ಸ್ಯಾಂಕಿ ಟ್ಯಾಂಕ್ ರಸ್ತೆಯಲ್ಲಿ ಪ್ಲೈಓವರ್ ಬಗ್ಗೆ ಮುಂದಾಲೋಚನೆಯೇ ಈ ಸರ್ಕಾರಕ್ಕೆ ಇಲ್ಲ. ಮರಗಳನ್ನು ಕಡಿದು ಫ್ಲೈಓವರ್ ಮಾಡುವುದು ಖಂಡಿತಾ ಬೇಡ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕೊಟ್ಟಿರುವ ಸಲಹೆಯನ್ನಾದರೂ ಈ ಸರ್ಕಾರದವರು ಪರಿಗಣಿಸಬೇಕು. ಫ್ಲೈಓವರ್ ಯೋಜನೆಯನ್ನು ಮರು ಪರಿಶೀಲನೆ ಮಾಡಬೇಕು. ಈಗ ನಡೆಯುತ್ತಿರುವ ಹೋರಾಟವನ್ನು ಸರ್ಕಾರವು ಪರಿಗಣಿಸಬೇಕು. ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Traffic Fine: ಓವರ್ ಸ್ಪೀಡ್‌ಗಾಗಿ ಟ್ರಾಫಿಕ್ ಫೈನ್ ಕಟ್ಟಿದ ಶಾಸಕ ಎಲ್. ನಾಗೇಂದ್ರ; ಇವರಿಗೂ ಸಿಕ್ತು ಶೇ. 50 ರಿಯಾಯ್ತಿ!
ದೆಹಲಿಯಿಂದ ಮುಂಬೈನತ್ತ ಹಾರಿದ ರಮೇಶ್ ಜಾರಕಿಹೊಳಿ
ತಮ್ಮ ವಿರುದ್ಧದ ಸಿಡಿ ಬಿಡುಗಡೆ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಕೈವಾಡವಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟುಹಿಡಿದು ಕುಳಿತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi), ಈ ಸಂಬಂಧ ದೆಹಲಿಗೆ ಭೇಟಿ ನೀಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಈಗ ಮುಂಬೈಗೆ ಪ್ರಯಾಣ ಬೆಳೆಸಿದ್ದು, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಸ್ನೇಹಿತ ದೇವೇಂದ್ರ ಫಡ್ನವಿಸ್ (Devendra Fadnavis) ಅವರ ಭೇಟಿಗೆ ಮುಂದಾಗಿದ್ದಾರೆ.
ಶತಾಯಗತಾಯ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕೆಂದು ಪಟ್ಟುಹಿಡಿದಿರುವ ರಮೇಶ್ ಜಾರಕಿಹೊಳಿ, ಫಡ್ನವಿಸ್ ಜತೆ ಮಾತುಕತೆಗೆ ಮುಂದಾಗಿದ್ದಾರೆ. ಅವರ ಮೂಲಕ ಕೇಂದ್ರದಲ್ಲಿ ಒತ್ತಡ ಹೇರುವ ತಂತ್ರವನ್ನು ಅನುಸರಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಫಡ್ನವಿಸ್ ಮತ್ತು ನಾನು ತುಂಬಾ ಸ್ನೇಹಿತರು. ಅವರನ್ನು ಭೇಟಿಯಾಗುವ ಸಂಬಂಧ ನಾನು ಮುಂಬೈಗೆ ಬಂದಿದ್ದೇನೆ. ಇದರಲ್ಲಿ ಬೇರೆ ಏನೂ ವಿಷಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಸಿಡಿ ವಿಚಾರವನ್ನು ಸಿಬಿಐಗೆ ವಹಿಸುವಂತೆ ಒತ್ತಡ ಹೇರುವ ಉದ್ದೇಶದಿಂದಲೇ ಅವರು ಭೇಟಿ ನೀಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Nalanda university: ನಳಂದಾ ವಿಶ್ವವಿದ್ಯಾಲಯದಲ್ಲಿ 1200 ವರ್ಷಗಳ ಹಿಂದಿನ ಕಲ್ಲಿನ ವಿಗ್ರಹಗಳು ಪತ್ತೆ
ಇನ್ನು ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ಗೃಹ ಸಚಿವರು ಏನು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಮೇಶ್ ಜಾರಕಿಹೊಳಿ, ಈ ವಿಚಾರದ ಬಗ್ಗೆ ಮಂಗಳವಾರ ಅಥವಾ ಬುಧವಾರದಂದು ಮಾಹಿತಿಯನ್ನು ತಿಳಿಸಲಾಗುವುದು ಎಂದು ಹೈಕಮಾಂಡ್‌ನವರು ತಿಳಿಸಿದ್ದಾರೆ. ಅಲ್ಲಿಯವರೆಗೆ ನಾನು ಆ ಬಗ್ಗೆ ಏನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.