ಮಂಡ್ಯ: ಗುಜರಾತ್‌ನ ಅಮುಲ್ ಡೇರಿ ಮತ್ತು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವಿಲೀನ ಕುರಿತ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಅವರ ಹೇಳಿಕೆಗೆ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಕೆಎಂಎಫ್ ಅನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆಯಲು ನಿರ್ಧರಿಸಿದಂತಿದೆ. ಅಮಿತ್ ಶಾ ಅವರು ಪರೋಕ್ಷವಾಗಿ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಈ ರೀತಿ ಆಗಬಾರದು ಎಂದು ಆಗ್ರಹಿಸಿದ್ದಾರೆ.
ಮದ್ದೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೈನೋದ್ಯಮ ಬೆಳೆಯಲು ಕೇಂದ್ರ ಮಾಜಿ ಪಶು ಸಂಗೋಪನೆ ಸಚಿವ ಎಂ.ವಿ.ಕೃಷ್ಣಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾರಣ. ಎಚ್.ಡಿ.ರೇವಣ್ಣ ಅವರೂ ಹಾಲು ಉತ್ಪಾದಕ ಸಂಘಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗಾಗಿಯೇ ರೇವಣ್ಣ ಅವರನ್ನು ರಾಜ್ಯದ ʼಎರಡನೇ ವರ್ಗೀಸ್ ಕುರಿಯನ್ʼ ಎಂದು ಕರೆಯುತ್ತಾರೆ. ಉತ್ತಮವಾಗಿ ಅಭಿವೃದ್ಧಿಯಾಗಿರುವ ಕೆಎಂಎಫ್ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸರಿಯಲ್ಲ, ಕೆಎಂಎಫ್ ರಾಜ್ಯ ಸರ್ಕಾರದ ಅಧೀನದಲ್ಲೇ ಕಾರ್ಯ ನಿರ್ವಹಿಸಲಿ ಎಂದು ಹೇಳಿದರು.
ಇದನ್ನೂ ಓದಿ | Karnataka Election | ಬಿಜೆಪಿಗೆ ಮತ ನೀಡಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ: ಅಮಿತ್ ಶಾ
ಕರ್ನಾಟಕದಲ್ಲಿ ಡೇರಿ ಉದ್ಯಮ ದೊಡ್ಡದಾಗಿ ಬೆಳೆದಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಸು ಸಾಕಿ ಬದುಕು ಕಟ್ಟಿಕೊಂಡಿದ್ದಾರೆ. ದೊಡ್ಡ ಉದ್ಯಮ ಸಂಸ್ಥೆಯಾಗಿರುವ ಕೆಎಂಎಫ್ ಅನ್ನು ನಾಶ ಮಾಡುವ ಪರಿಸ್ಥಿತಿ ಬರಬಾರದು. ಅದು ರಾಜ್ಯ ಸರ್ಕಾರದ ಅಧೀನದಲ್ಲೇ ಮುಂದುವರಿಯಲಿ. ಕೇಂದ್ರ ಸರ್ಕಾರ ನೆರವು ನೀಡುವುದಾದರೆ ನೀಡಲಿ ಎಂದ ಕಿಡಿಕಾರಿದರು.
ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಶುಕ್ರವಾರ ನಡೆದ ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಅಮುಲ್ ಹಾಗೂ ಕೆಎಂಎಫ್ ವಿಲೀನದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು. ಅಮುಲ್ ಹಾಗೂ ನಂದಿನಿ ಒಟ್ಟುಗೂಡಿದರೆ ಕರ್ನಾಟಕದಲ್ಲಿ ಎಲ್ಲ ಹಳ್ಳಿಗಳಲ್ಲಿ ಡೇರಿ ಸ್ಥಾಪನೆ ಮಾಡಬಹುದು ಎಂದಿದ್ದರು. ನಂತರದಲ್ಲಿ ದೇಶಾದ್ಯಂತ ಕಾರ್ಯನಿರ್ವಹಣೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಅವರು ನಿಜವಾಗಿ ಯಾವ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದರು ಎಂಬ ಕುರಿತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Amit Shah | ಬಿಜೆಪಿಯವರು ಭಾರತ್ ಮಾತಾಕಿ ಜೈ ಅಂದ್ರೆ, ಕಾಂಗ್ರೆಸ್‌ನವರು ಸೋನಿಯಾ ಮಾತಾಕಿ ಜೈ ಅಂತಾರೆ: ಸಿಎಂ ಬೊಮ್ಮಾಯಿ