ಪುತ್ತೂರು : ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಬೆಂಬಲಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ರಾಣಿ ಅಬ್ಬಕ್ಕಾರನ್ನು ಆದರ್ಶವಾಗಿಟ್ಟುಕೊಂಡಿರುವ ಬಿಜೆಪಿ ನಡುವೆ ಸಂಘರ್ಷ ನಡೆಯಲಿದೆ. ನಿಮಗೆ ಯಾರು ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ (Amit Shah in Karavali) ಹೇಳಿದ್ದಾರೆ.
ಇಲ್ಲಿಯ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಪಿಎಫ್‌ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಆದರೆ ಮೋದಿ ಸರ್ಕಾರ ಈ ಸಂಘಟನೆಯನ್ನೇ ನಿಷೇಧಿಸಿತು. ದೇಶದ ಮತ್ತು ರಾಜ್ಯದ ಹಿತ ರಕ್ಷಣೆಗಾಗಿ ಬಿಜೆಪಿಯನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.
ನಿಮ್ಮ ನೆರೆಯ ರಾಜ್ಯ ಕೇರಳ. ನಾನು ರಾಜ್ಯದ ಬಗ್ಗೆ ಏನನ್ನೂ ಬಿಡಿಸಿ ಹೇಳುವುದಿಲ್ಲ ಎಂದು ಹೇಳಿದ ಅಮಿತ್ ಶಾ, ಕರ್ನಾಟಕವನ್ನು ಸುರಕ್ಷಿತವಾಗಿಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರಲ್ಲದೆ, ನೀವು ಜೆಡಿಎಸ್‌ಗೆ ಮತ ನೀಡಿದರೆ ಅದು ಕಾಂಗ್ರೆಸ್‌ಗೆ ಮತ ನೀಡಿದಂತೆ, ಬಿಜೆಪಿಗೆ ಮತ ನೀಡಿದರೆ ನವ ಭಾರತದ ನವ ಕರ್ನಾಟಕಕ್ಕೆ ಮತ ನೀಡಿದಂತೆ ಎಂದರು.
ಇಂದು ದೀನ್ ದಯಾಳ್ ಉಪಾಧ್ಯಾಯರ ಪುಣ್ಯ ದಿನವೆಂದು ಅವರನ್ನು ಸ್ಮರಿಸಿ, ಗೌರವಿಸಿದ ಅಮಿತ್ ಶಾ, ಅವರ ಕನಸಿನಂತೆಯೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ವಿವರಿಸಿದರು. ಎಂಆರ್‌ಪಿಎಲ್ ವಿಸ್ತರಣೆ, ಬಂದರು ಅಭಿವೃದ್ಧಿ ಸೇರಿದಂತೆ ಕೇಂದ್ರ ಸರ್ಕಾರ ಕರಾವಳಿ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಪ್ರಸ್ತಾಪಿಸಿ, ಕರಾವಳಿಯ ಜನರ ಮನ ಗೆಲ್ಲಲು ಯತ್ನಿಸಿದರು.
ಯಡಿಯೂರಪ್ಪರ ಅಡಳಿತ ಪ್ರಸ್ತಾಪ
ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಆ ಪಕ್ಷ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತದೆ ಎಂದು ಈ ಹಿಂದೆ ಹೇಳಿದಂತೆಯೇ ಕಾಂಗ್ರೆಸ್ ಅನ್ನು ಟೀಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ರೈತರು ಯಡಿಯೂರಪ್ಪ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಯಡಿಯೂರಪ್ಪರ ಆಡಳಿತ ಬೆಂಗಳೂರನ್ನು ಅಭಿವೃದ್ಧಿ ಪಡಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿತ್ತು ಎಂದು ಸ್ಮರಿಸಿದರು.
ರಾಜ್ಯದಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿಕೊಂಡ ಅವರು, ಚುನಾವಣೆಯ ಸಂದರ್ಭದಲ್ಲಿ ಮತ್ತೆ ಇಲ್ಲಿಗೆ ಆಗಮಿಸಿ ಮನಬಿಚ್ಚಿ ನಿಮ್ಮೊಂದಿಗೆ ಮಾತನಾಡುವೆ ಎಂಬ ಭರವಸೆ ನೀಡಿದರು. ಅಮಿತ್ ಶಾ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಯೋಜನೆಗಳನ್ನು ನೆಪ ಮಾತ್ರಕ್ಕೆ ಪ್ರಸ್ತಾಪಿಸಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಚಪ್ಪಾಳೆ ತಟ್ಟಿ ಅಭಿನಂದಿಸುವಂತೆ ಕೋರಿದರು.
ಅಡಿಕೆ ತಿಂದು ಬೆವರು ಸುರಿಸುತ್ತಾರೆ!
ಪ್ರತಿಕೂಲ ಪರಿಸ್ಥಿತಿ, ಹವಾಮಾನದಲ್ಲಿಯೂ ಕರಾವಳಿಯ ಕೃಷಿಕರು ಕಷ್ಟಪಟ್ಟು ದುಡಿಯುತ್ತಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ʻʻನೀವು ಇಲ್ಲಿ ಅಡಿಕೆ ಬೆಳೆಯುತ್ತೀರಿ, ಗುಜರಾತ್‌ನ ಜನ ಅಡಿಕೆಯನ್ನು ಜಗಿಯುತ್ತಾ ಮಂಗಳೂರನ್ನು ನೆನಪಿಸಿಕೊಳ್ಳುತ್ತಾರೆ ಎಂದರಲ್ಲದೆ, ನೀವು ಬೆವರು ಸುರಿಸಿ ಅಡಿಕೆ ಬೆಳೆದರೆ, ಗುಜರಾತಿಗಳು ಅಡಿಕೆ ತಿಂದು ಬೆವರು ಸುರಿಸುತ್ತಾರೆʼʼ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದರು.
ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಹಿತರಕ್ಷಣೆಗಾಗಿ ಹುಟ್ಟಿಕೊಂಡಿರುವ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇಶದ ಮೊದಲ ಕೇಂದ್ರ ಸಹಕಾರಿ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅಮಿತ್ ಶಾ ಕ್ಯಾಂಪ್ಕೋದ ಕಾರ್ಯವೈಖರಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಈ ಬಹುರಾಜ್ಯಗಳ ಸಹಕಾರಿ ಸಂಸ್ಥೆ ರೈತರ ವಿಶ್ವಾಸ ಪಡೆದು, ಸುವರ್ಣ ಮಹೋತ್ಸವ ಆಚರಿಸುತ್ತಿರುವುದೇ ಇದಕ್ಕೆ ಸಿಕ್ಕಿರುವ ದೊಡ್ಡ ಸರ್ಟಿಫಿಕೇಟ್ ಎಂದರು.
ಪುತ್ತೂರಿನಲ್ಲಿ ಅಗ್ರಿಮಾಲ್
ರೈತರಿಗೆ ಅಗತ್ಯವಾಗಿರುವ ಕೃಷಿ ಸಲಕರಣೆ, ಬೀಜ, ಕೀಟನಾಶಕ, ಗೊಬ್ಬರ ಹೀಗೆ ಎಲ್ಲವೂ ಒಂದೇ ಕಡೆ ಸಿಗುವಂತೆ ಪುತ್ತೂರಿನಲ್ಲಿ ನಿರ್ಮಿಸುತ್ತಿರುವ ಅಗ್ರಿ ಮಾಲ್‌ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿಲಾನ್ಯಾಸ ನೆರವೇರಿಸಿದರು. ಇದು ಸಹಕಾರ ಸಂಸ್ಥೆಯೊಂದು ಆರಂಭಿಸುತ್ತಿರುವ ದೇಶದ ಮೊದಲ ಅಗ್ರಿಮಾಲ್ ಆಗಿದೆ. ಈ ವಿಷಯವನ್ನು ಅಮಿತ್ ಶಾ ಅವರೇ ಹೇಳಿ, ಕ್ಯಾಂಪ್ಕೋವನ್ನು ಅಭಿನಂದಿಸಿದರು. ಕ್ಯಾಂಪ್ಕೋ ಉತ್ಪಾದಿಸುತ್ತಿರುವ ತೆಂಗಿನ ಎಣ್ಣೆಯನ್ನು ಈ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಭದ್ರಾವತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹು ಉದ್ದೇಶಿತ ಗೋದಾಮನ್ನು ಉದ್ಘಾಟಿಸಲಾಯಿತು.
ಸುವರ್ಣ ಸಂಭ್ರಮ ಹಾಗೂ ಕೃಷಿಕ ಸಹಕಾರಿಗಳ ಮಹಾ ಸಮಾವೇಶದಲ್ಲಿ ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಭಾಗದ ಸಾರ್ವಜನಿಕರು ಭಾಗಿಯಾಗಿದ್ದರು. ಜಿಲ್ಲೆಯ ಸಹಕಾರಿ ಇಲಾಖೆಗೆ ಸಂಬಂಧಿಸಿದ 66 ಸಾವಿರ ಫಲಾನುಭವಿಗಳು ಉಪಸ್ಥಿತರಿದ್ದರು. ಸಮಾವೇಶದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷರು ಕಿಶೋರ್ ಕುಮಾರ್ ಕೊಡ್ಗಿ ವಹಿಸಿದ್ದರು.
ಇದನ್ನೂ ಓದಿ : Amit shah in Karavali : ಅಮಿತ್ ಶಾ ಕೂಡಾ ಕಾಂತಾರ ಸಿನಿಮಾ ನೋಡಿದ್ದಾರಂತೆ! ಅವರು ಕಾಂತಾರ ಕತೆ ಹೇಳಿದ್ಯಾಕೆ?