ಮಂಗಳೂರು: ಕೇಂದ್ರ ಗೃಹಸಚಿವ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಅವರು ಶನಿವಾರ ಕರಾವಳಿಯಲ್ಲಿ ಆರುವರೆ ಗಂಟೆಗಳ ಕಾಲ ಮಿಂಚಿನ ಸಂಚಾರ (Amit Shah in Karavali) ನಡೆಸಲಿದ್ದು, ಅದಕ್ಕಾಗಿ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 1.45ಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯಲಿರುವ ಅಮಿತ್ ಶಾ ಅವರು ರಾತ್ರಿ ೮.೨೦ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹಾರಲಿದ್ದಾರೆ. ಈ ಆರೂವರೆ ಗಂಟೆಗಳ ಅವಧಿಯಲ್ಲಿ ಅವರು ಪುತ್ತೂರಿನಲ್ಲಿ ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಅದಕ್ಕಾಗಿ ಸರ್ವ ಸಿದ್ಧತೆಗಳು ನಡೆದಿವೆ. ರಾಜಕೀಯವಾಗಿಯೂ ಅತ್ಯಂತ ಪ್ರಮುಖವಾಗಿರುವ ಈ ಭೇಟಿಯ ಬಗ್ಗೆ ಸಾಕಷ್ಟು ಕುತೂಹಲಗಳಿವೆ.
ಕಣ್ಣೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರಮಂಗಲದ ಗಜಾನನ ಶಾಲೆಯ ಮೈದಾನದಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ನಲ್ಲಿ ಇಳಿಯಲಿರುವ ಗೃಹಸಚಿವರು ಈಶ್ವರಮಂಗಲದ ಅಮರಗಿರಿಯಲ್ಲಿ ನಿರ್ಮಾಣವಾಗಿರುವ ದಕ್ಷಿಣ ಭಾರತದ ಎರಡನೇ ಭಾರತ್ ಮಾತೆಯ ಮಂದಿರವನ್ನು ಲೋಕಾರ್ಪಣೆ ಮಾಡಲಿರುವರು.
ಬಳಿಕ ಅವರು ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಎನ್.ಆರ್.ಸಿ.ಸಿ ಯಲ್ಲಿರುವ ಹೆಲಿಪ್ಯಾಡ್ ನಲ್ಲಿ ಇಳಿಯಲಿದ್ದು, ಅಲ್ಲಿಂದ ರಸ್ತೆ ಮೂಲಕ ಕ್ಯಾಂಪ್ಕೋದ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಡಿಕೆ ಬೆಳೆಗಾರರ ಸಂಸ್ಥೆಯಾಗಿರುವ ಕ್ಯಾಂಪ್ಕೋ ಕಾರ್ಯಕ್ರಮದಲ್ಲಿ ಭಾಗವಹಿಸುವ ದೇಶದ ಮೊದಲ ಕೇಂದ್ರ ಸಹಕಾರಿ ಸಚಿವರೂ ಆಗಿರುವ ಅಮಿತ್ ಶಾ ಭೇಟಿ ಅಡಿಕೆ ಬೆಳೆಗಾರರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಅಡಿಕೆಯ ಚುಕ್ಕಿ ಎಲೆ ರೋಗ, ಹಳದಿ ರೋಗ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಈ ಎಲ್ಲಾ ಸಂಕಷ್ಟಗಳಿರುವ ಸಮಯದಲ್ಲಿ ಕೇಂದ್ರ ಸಹಕಾರಿ ಸಚಿವರ ಭೇಟಿ ಅಡಿಕೆ ಬೆಳೆಗಾರನಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಎಲ್ಲಾ ಸಮಸ್ಯೆಗೆ ಅಮಿತ್ ಶಾ ಇಂದಿನ ಕಾರ್ಯಕ್ರಮದಲ್ಲಿ ಪರಿಹಾರದಂತಹ ಘೋಷಣೆಗಳನ್ನು ಮಾಡಲಿದ್ದಾರೆಯೇ ಎಂದು ಬೆಳೆಗಾರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಪುತ್ತೂರು ನಗರದಾದ್ಯಂತ ಭಾರೀ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಸಾವಿರಕ್ಕೂ ಮಿಕ್ಕಿದ ಪೋಲೀಸರನ್ನು ಅಮಿತ್ ಶಾ ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ನಿಯೋಜನೆ ಮಾಡಲಾಗಿದೆ. ಬ್ಯಾನರ್, ಬಂಟಿಂಕ್ಸ್ ಮತ್ತು ಬಿಜೆಪಿ ಧ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಬಿಜೆಪಿ ಪಕ್ಷಕ್ಕಂತೂ ಅಮಿತ್ ಶಾ ಭೇಟಿ ಹೊಸ ಹುರುಪನ್ನೂ ನೀಡಿದಂತಾಗಿದೆ.
ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮ
ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ ಸಂಸ್ಥೆಯ (ಕ್ಯಾಂಪ್ಕೋ) ಸುವರ್ಣ ಸಂಭ್ರಮ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜನೆಯಾಗಿದೆ. ಸುವರ್ಣ ಸಂಭ್ರಮ ಹಾಗೂ ಕೃಷಿಕ ಸಹಕಾರಿಗಳ ಮಹಾ ಸಮಾವೇಶದಲ್ಲಿ ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಭಾಗದ ಸಾರ್ವಜನಿಕರು ಭಾಗಿಯಾಗಲಿದ್ದಾರೆ.
ಜಿಲ್ಲೆಯ ಸಹಕಾರಿ ಇಲಾಖೆಗೆ ಸಂಬಂಧಿಸಿದ 66 ಸಾವಿರ ಫಲಾನುಭವಿಗಳು, ಮುಖ್ಯಮಂತ್ರಿಗಳು, ಗೃಹ ಸಚಿವರು, ಸಹಕಾರ ಸಚಿವರು ಸೇರಿದಂತೆ ಸುಮಾರು 12-13 ಮಂದಿ ಸಚಿವರು ಭಾಗಿಯಾಗಲಿದ್ದು, ಸುಮಾರು ಒಂದು ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷರು ಕಿಶೋರ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ
1973ರಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ ಬಹುರಾಜ್ಯ ಸಹಕಾರಿ ಸಂಘ ಕ್ಯಾಂಪ್ಕೊ ಲಿಮಿಟೆಡ್ ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಇದೀಗ ಕರಿಮೆಣಸಿನ ವ್ಯವಹಾರ ಮಾಡುತ್ತದೆ. ಕೊಕ್ಕೊ ಆಧಾರಿತ ಚಾಕೊಲೇಟ್ ಮತ್ತು ಇತರ ಅರೆ-ಸಿದ್ಧ ಕೊಕ್ಕೊ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುತ್ತದೆ. 3576 ರೈತರ ಸದಸ್ಯತ್ವದೊಂದಿಗೆ ಶುರುವಾದ ಕ್ಯಾಂಪ್ಕೋ ಈಗ 1,38,000 ಕ್ಕೂ ಹೆಚ್ಚು ರೈತರ ಸದಸ್ಯತ್ವವನ್ನು ಹೊಂದಿದೆ.
ಅಮಿತ್ ಶಾ ಕಾರ್ಯಕ್ರಮ ಪಿನ್ ಟು ಪಿನ್ ಡಿಟೇಲ್ಸ್
– ಮಧ್ಯಾಹ್ನ 1.20ಕ್ಕೆ ಕೇರಳದ ಕಣ್ಣೂರು ಏರ್ ಪೋರ್ಟ್‌ನಿಂದ ಸೇನಾ ಹೆಲಿಕಾಪ್ಟರ್ ನಲ್ಲಿ ಪ್ರಯಾಣ
– 01.45ಕ್ಕೆ ಪುತ್ತೂರಿನ ಈಶ್ವರಮಂಗಳದ ಗಜಾನನ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್
-1.50ಕ್ಕೆ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ಈಶ್ವರಮಂಗಳ ಹನುಮಗಿರಿ ದೇವಸ್ಥಾನ ಭೇಟಿ, ಪೂಜೆ ಸಲ್ಲಿಕೆ
– 2.10: ಈಶ್ವರಮಂಗಳದ ಹನುಮಗಿರಿಯ ಧರ್ಮಶ್ರೀ ಪ್ರತಿಷ್ಠಾನದ ಭಾರತ್ ಮಾತಾ ಮಂದಿರ ಉದ್ಘಾಟನೆ
-2.25: ಕಾರ್ಯಕ್ರಮ ಮುಗಿಸಿ ರಸ್ತೆ ಮಾರ್ಗವಾಗಿ ಗಜಾನನ ಶಾಲಾ ಮೈದಾನದತ್ತ
-2.30: ಗಜಾನನ ಶಾಲಾ ಮೈದಾನ್ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ
-2.40: ಪುತ್ತೂರಿನ ಮೊಟ್ಟೆತ್ತಡ್ಕದ ಗೇರು ಅಭಿವೃದ್ಧಿ ನಿಗಮದ ಎದುರಿನ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್
-3.00: ರಸ್ತೆ ಮಾರ್ಗವಾಗಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನ ತಲುಪಲಿರುವ ಶಾ
-3.00ರಿಂದ ಸಂಜೆ 4.30 ಗಂಟೆಯವರೆಗೆ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಭಾಗಿ
-ಸಂಜೆ 4.30 ಗಂಟೆಗೆ ಸಮಾವೇಶ ಮೈದಾನದಿಂದ ರಸ್ತೆ ಮಾರ್ಗವಾಗಿ ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ಗೆ ಪ್ರಯಾಣ
-ಸಂಜೆ 4.45ಕ್ಕೆ ಮೊಟ್ಟೆತ್ತಡ್ಕ ಹೆಲಿಪ್ಯಾಡ್ ಗೆ ಆಗಮಿಸಿ ಮಂಗಳೂರಿಗೆ ಪ್ರಯಾಣ
-ಸಂಜೆ 5.05 ಗಂಟೆಗೆ ಮಂಗಳೂರು ಏರ್ಪೋರ್ಟ್ ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್
-ಸಂಜೆ 5.10ಕ್ಕೆ ಮಂಗಳೂರು ಏರ್ಪೋರ್ಟ್ ನಿಂದ ರಸ್ತೆ ಮಾರ್ಗವಾಗಿ ಪ್ರಯಾಣ
– ಸಂಜೆ 5.20ಕ್ಕೆ ಏರ್ ಪೋರ್ಟ್ ಬಳಿಯ ಶ್ರೀದೇವಿ ಕಾಲೇಜಿನ ಸಭಾಂಗಣದಲ್ಲಿ ಬಿಜೆಪಿ ಸಭೆ
-ಸಂಜೆ 05.20ರಿಂದ 07.30ರವರೆಗೆ ಬಿಜೆಪಿ ಜನ ಪ್ರತಿನಿಧಿಗಳು, ಮುಖಂಡರು ಭಾಗಿಯಾಗಲಿರುವ ಸಭೆಯಲ್ಲಿ ಶಾ ಭಾಗಿ
– 07.50ಕ್ಕೆ ಏರ್ಪೋರ್ಟ್‌ಗೆ ಪ್ರಯಾಣ
-8.20ಕ್ಕೆ ಏರ್ಪೋರ್ಟ್ ತಲುಪಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣ
ಇದನ್ನೂ ಓದಿ : Areca News : ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಬರುವ ಅಮಿತ್ ಶಾ ಅಡಿಕೆ ಬೆಳೆಗಾರರಿಗೆ ನೀಡುವ ಸಿಹಿ ಸುದ್ದಿ ಏನು?