ಪುತ್ತೂರು: ದೇಶ ರಕ್ಷಕ ಯೋಧರನ್ನೇ ದೇವರೆಂದು ಆರಾಧಿಸುವ, ಭಾರತ ಮಾತೆಯೇ ಪ್ರಧಾನ ದೇವತೆಯಾಗಿರುವ ದಕ್ಷಿಣ ಭಾರತದ ಎರಡನೇ ಭಾರತ್ ಮಾತಾ ದೇಗುಲವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಲೋಕಾರ್ಪಣೆ ಮಾಡಿದರು (Amit Shah in Karavali).
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಸ್ಥಾಪನೆ ಮಾಡಲಾಗಿರುವ ಅಮರಗಿರಿ ಶ್ರೀ ಭಾರತ್ ಮಾತಾ ದೇಗುಲವನ್ನು ಅಮಿತ್ ಶಾ ಅವರು ದೀಪ ಬೆಳಗಿ ಉದ್ಘಾಟಿಸಿದರು. ಅವರ ಜತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದರು. ಈಶ್ವರ ಮಂಗಲದಲ್ಲಿ ಒಂದು ಕಡೆ ಹನುಮನ ಸಾನ್ನಿಧ್ಯ ಇರುವ ಶ್ರೀ ಹನುಮಗಿರಿ ಕ್ಷೇತ್ರವಿದ್ದರೆ ಇದು ಅಮರ ಯೋಧರ ನೆನಪಿನ ಅಮರಗಿರಿಯಾಗಿದೆ.
ಶನಿವಾರ ಮಧ್ಯಾಹ್ನ ೩.೩೦ರ ಹೊತ್ತಿಗೆ ಈಶ್ವರಮಂಗಲದ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ಹನುಮನ ದರ್ಶನ ಮಾಡಿದ ಅವರು, ಬಳಿಕ ಅಮರಗಿರಿಗೆ ಹೋದರು. ಅಲ್ಲಿ ಮೊದಲು ಯೋಧನ ಕೈಯಲ್ಲಿರುವ ತ್ರಿವರ್ಣ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿದ ಅವರು ಬಳಿಕ ದೇವಾಲಯವನ್ನು ಉದ್ಘಾಟಿಸಿದರು
ಒಂದು ಗಂಟೆ ತಡ: ಕಣ್ಣೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರಮಂಗಲದ ಗಜಾನನ ಶಾಲೆಯ ಮೈದಾನದಲ್ಲಿ ನಿರ್ಮಿಸಿದ ಹೆಲಿಪ್ಯಾಡ್ ಗೆ ಬಂದು ಇಳಿದ ಗೃಹಸಚಿವರು ಅಲ್ಲಿಂದ ಈಶ್ವರಮಂಗಲಕ್ಕೆ ಕಾರಿನಲ್ಲಿ ತೆರಳಿದರು. ಹೈದರಾಬಾದ್ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಕಣ್ಣೂರಿಗೆ ಬಂದು ಪುತ್ತೂರಿಗೆ ತಲುಪಿದಾಗ ಒಂದು ಗಂಟೆಗಿಂತಲೂ ಹೆಚ್ಚು ವಿಳಂಬವಾಗಿತ್ತು.
ಇದನ್ನೂ ಓದಿ : Amit Shah in Karavali : ಕರಾವಳಿಗೆ ಬಂದ ಅಮಿತ್ ಶಾಗೆ ಧರ್ಮಸ್ಥಳದಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಸಾದ