ಮಡಿಕೇರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ರಾಜ್ಯಕ್ಕೆ ರಾಜಕೀಯ ಪಕ್ಷಗಳ ಕೇಂದ್ರ ನಾಯಕರು ಆಗಮಿಸುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ನಡುವೆ ರಾಜ್ಯಕ್ಕೆ ಈಗಾಗಲೇ ಹಲವು ಬಾರಿ ಭೇಟಿ ನೀಡಿರುವ ಗೃಹ ಸಚಿವ ಅಮಿತ್ ಶಾ ಅವರು, ಶನಿವಾರವೂ (ಏಪ್ರಿಲ್ 29) ತಮ್ಮ ಮತಬೇಟೆಯನ್ನು ಮುಂದುವರಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅವರ ರೋಡ್ ಶೋ ಅರ್ಧಕ್ಕೇ ಮೊಟಕುಗೊಂಡಿದ್ದು, ಅಮಿತ್ ಶಾ ಉಡುಪಿಯತ್ತ ಪ್ರಯಾಣ ಬೆಳೆಸಿದರು.
ಕೊಡುಗು ಜಿಲ್ಲೆಯು ಬಿಜೆಪಿಯ ಭದ್ರಕೋಟೆಯಾಗಿದ್ದರೂ ಕಾಂಗ್ರೆಸ್ ಈ ಬಾರಿ ಪೈಪೋಟಿ ನೀಡಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಚಾಣಕ್ಯ ಎಂದೇ ಖ್ಯಾತಿಯನ್ನು ಹೊಂದಿರುವ ಅಮಿತ್ ಶಾ ಅವರು ಕೊಡಗು ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು. ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ ಅವರ ಪರವಾಗಿ ಮತ ಯಾಚನೆ ನಡೆಸಿದರು.
ಮಡಿಕೇರಿಯ ಹೊರವಲಯದ ಗಾಲ್ಫ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅಮಿತ್ ಶಾ ಅವರು, ಮಡಿಕೇರಿಯ ಚೌಡೇಶ್ವರಿ ದೇವಾಲಯದಲ್ಲಿ ಮೊದಲಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ರೋಡ್ ಶೋಗೆ ಚಾಲನೆ ನೀಡಿದರು.
ಇದನ್ನೂ ಓದಿ: Modi in Karnataka : ನೀವು ಮತ ಹಾಕುವುದು ಸರ್ಕಾರ ರಚನೆಗಲ್ಲ, ರಾಜ್ಯವನ್ನು ದೇಶದಲ್ಲೇ ನಂ. 1 ಮಾಡಲು; ಮೋದಿ ಹೊಸ ವ್ಯಾಖ್ಯಾನ
1 ಕಿ.ಮೀ. ಮಾತ್ರ ರೋಡ್ ಶೋ
ಅಮಿತ್ ಶಾ ಅವರು ರೋಡ್ ಶೋ ಆರಂಭಿಸುತ್ತಿದ್ದಂತೆ ಕಾರ್ಯಕರ್ತರು, ಅಭಿಮಾನಿಗಳು ಹೂ ಮಳೆಯ ಸ್ವಾಗತ ಕೋರಿದರು. ಅಲ್ಲದೆ, ಬಿಜೆಪಿಗೆ, ಅಮಿತ್ ಶಾ ಅವರಿಗೆ ಜೈಕಾರ ಕೂಗಿದರು. ಈ ವೇಳೆ ರಸ್ತೆಯುದ್ದಕ್ಕೂ ಸೇರಿದ್ದ ಜನಸ್ತೋಮದ ಕಡೆಗೆ ಕೈಬೀಸಿದ ಅಮಿತ್ ಶಾ ಅವರು, ಬಿಜೆಪಿ ಪರ ಮತಯಾಚಿಸಿದರು. ಅಲ್ಲದೆ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನೂ ನಡೆಸಿದರು. ಸುಮಾರು 1 ಕಿ.ಮೀ. ರೋಡ್ ಶೋ ನಡೆಸಿದ ಅಮಿತ್ ಶಾ ಅರ್ಧಕ್ಕೇ ಮೊಟಕುಗೊಳಿಸಿ ಅಲ್ಲಿಂದ ಉಡುಪಿಯತ್ತ ಪ್ರಯಾಣ ಬೆಳೆಸಿದರು.
ಹವಾಮಾನ ವೈಪರೀತ್ಯ ಕಾರಣ
ಮಡಿಕೇರಿಯ ಚೌಡೇಶ್ವರಿ ದೇವಸ್ಥಾನದ ರಸ್ತೆಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಅಮಿತ್ ಶಾ ಅವರ ರೋಡ್ ಶೋವನ್ನು ನಿಗದಿ ಮಾಡಲಾಗಿತ್ತು. ಬೆಳಗ್ಗೆ 10.30ಕ್ಕೆ ಅಮಿತ್ ಶಾ ಅವರು ಆಗಮಿಸಿ ರೋಡ್ ಶೋದಲ್ಲಿ ಭಾಗಿಯಾಗಬೇಕಿತ್ತು. ಆದರೆ, ಅಮಿತ್ ಶಾ ಬಂದಿದ್ದು, ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ. ಹೀಗಾಗಿ ಬಂದ ಕೂಡಲೇ ರೋಡ್ ಶೋವನ್ನು ಪ್ರಾರಂಭ ಮಾಡಿದರೂ 1.30ರ ಹೊತ್ತಿಗೆ ರೋಡ್‌ಶೋವನ್ನು ಮೊಟಕುಗೊಳಿಸಿದರು. ಕಾರಣ ಅವರು ಮುಂದಿನ ಚುನಾವಣಾ ಪ್ರಚಾರಕ್ಕಾಗಿ ಉಡುಪಿ ಜಿಲ್ಲೆಯ ಕಾಪುವಿಗೆ ಹೋಗಬೇಕಿತ್ತು. ಇದೇ ವೇಳೆ ಹಮಾಮಾನ ವೈಪರೀತ್ಯವಾಗುವ ಮುನ್ಸೂಚನೆ ದೊರೆತಿದ್ದರಿಂದ ಹೆಲಿಕಾಪ್ಟರ್ ಮೂಲಕ ಹೋಗುವುದು ಕಷ್ಟವಾಗುತ್ತಿತ್ತು ಎಂಬ ಕಾರಣಕ್ಕೆ ಅರ್ಧಕ್ಕೆ ರೋಡ್ ಶೋವನ್ನು ಮೊಟಕು ಮಾಡಿದ ಅಮಿತ್ ಶಾ, ಅಲ್ಲಿಂದ ನಿರ್ಗಮಿಸಿದರು.
ಕೊಡಗಿನಲ್ಲಿ ಪೈಪೋಟಿಯೇ ಇಲ್ಲ ಅಂದರು ಅಮಿತ್ ಶಾ; ಅವರ ಹೇಳಿಕೆಯ ವಿಡಿಯೊ ಇಲ್ಲಿದೆ
ಈ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಬೆಟ್ಟ ಗುಡ್ಡಗಳ ಪ್ರದೇಶಗಳೊಂದಿಗೆ ರಚನೆಯಾಗಿರುವ ಪುಟ್ಟ ಜಿಲ್ಲೆ ಕೊಡಗು. ಹೀಗಿದ್ದರೂ ಇಷ್ಟರ ಮಟ್ಟಿಗೆ ಜನ ಬೆಂಬಲ ಸಿಕ್ಕಿರುವುದು ಸಂತಸ ತಂದಿದೆ. ಈ ಬಾರಿ ಕೊಡಗಿನಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕೊಡಗಿನಲ್ಲಿ ನಮಗೆ ಫೈಟ್ ಕೊಡುವವರು ಯಾರೂ ಇಲ್ಲ. ನಾವು ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ. ಅಲ್ಲದೆ, ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Karnataka Election: ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ; ಪ್ರಿಯಾಂಕಾ ಗಾಂಧಿ ಮನವಿ
ಅಮಿತ್ ಶಾ ರೋಡ್ ಶೋದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಅಮಿತ್ ಶಾ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಕೊಡಗಿನ ಅಭ್ಯರ್ಥಿಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಸಾಥ್ ನೀಡಿದರು.