ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವ್ಯಾಪ್ತಿ ಹಾಗೂ ಮಿತಿಯನ್ನು ಬಹಳ ಸ್ಪಷ್ಟವಾಗಿ ಚಿತ್ರಿಸಲಾಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವಾಗಲೂ ಈ ಗಡಿಯನ್ನು ದಾಟಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.
ಸಂವಾದ ಫೌಂಡೇಷನ್ ವತಿಯಿಂದ ಟೌನ್‌ಹಾಲ್‌ನಲ್ಲಿ ಆಯೋಜನೆ ಮಾಡಲಾಗಿದ್ದ “ಭಾರತೀಯ ರಾಜಕೀಯ ವ್ಯವಸ್ಥೆ: 65 ವರ್ಷಗಳ ದೇಶದ ರಾಜಕೀಯ ಸ್ಥಿತಿಗತಿ ಹಾಗೂ ಪ್ರಧಾನಿ ಮೋದಿ ನೇತೃತ್ವದಲ್ಲಿ ಆದ ಸ್ಥಿತ್ಯಂತರ” ಕುರಿತು ಸಂವಾದದಲ್ಲಿ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಕೇಳಿದ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಿದರು.
ಕೇಂದ್ರ ಸರ್ಕಾರವು ಎಂದಿಗೂ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಹಾಗೆ ಎಲ್ಲಾದರೂ ಕಂಡುಬಂದರೆ ಯಾರು ಬೇಕಾದರೂ ತಿಳಿಸಬಹುದು. ಆದರೆ ಕೆಲವೊಮ್ಮೆ ವಿವಾದಗಳನ್ನು ಹುಟ್ಟುಹಾಕಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಉದಾಹರಣೆಯನ್ನು ಅಮಿತ್ ಶಾ ನೀಡಿದರು.
ಒಮ್ಮೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕರೆ ಮಾಡಿದರು. ರಾಜ್ಯಪಾಲರು ದಿಡೀರನೆ ವಿಧಾನಸಭೆ ಅಧಿವೇಶನ ಕರೆದಿದ್ದಾರೆ, ಅದೂ ಬೆಳಗಿನ ಜಾವ 1 ಗಂಟೆಗೆ ಎಂದರು. ಹೌದ? ಸಾಮಾನ್ಯವಾಗಿ ರಾಜ್ಯವು ಕಳಿಸುವ ಪ್ರಸ್ತಾವನೆಗೆ ರಾಜ್ಯಪಾಲರು ಅಂಕಿತ ಹಾಕುತ್ತಾರೆ. ಹೀಗೇನಾದರೂ ಮಾಡಿದ್ದರೆ ಅದು ತಪ್ಪು ಎಂದು ತಿಳಿಸಿದೆ. ಕೂಡಲೆ ರಾಜ್ಯಪಾಲರಿಗೆ ಕರೆ ಮಾಡಿ ಕೇಳಿದೆ. ನಾನು ಹಾಗೆ ಮಾಡಿಲ್ಲ, ಈ ಸಮಯವು ಸ್ವತಃ ರಾಜ್ಯ ಸರ್ಕಾರವೇ ನಿರ್ಧಾರ ಮಾಡಿದ ಪ್ರಸ್ತಾವನೆಯಲ್ಲಿದೆ, ಅದಕ್ಕೆ ಸಹಿ ಮಾತ್ರ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನು ತಿಳಿಸಲು ಮಮತಾ ಬ್ಯಾನರ್ಜಿ ಅವರಿಗೆ ಎರಡು ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದರು.
ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಆಡಳಿತದಲ್ಲಿ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳನ್ನು ರೋಗಿಷ್ಠ ರಾಜ್ಯಗಳು ಎಂದು ಕರೆಯಲಾಗುತ್ತಿತ್ತು. ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಯಾವ ರಾಜ್ಯಗಳೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿಲ್ಲ. ಏಕೆಂದರೆ ನಮ್ಮ ಯಾವುದೇ ನೀತಿಗಳು, ವಿದೇಶದ ನೀತಿಗಳ ಡೌನ್‌ಲೋಡ್ ಮಾಡಿರುವುದಲ್ಲ. ಕೆಳಮಟ್ಟದಿಂದ ಸಮಸ್ಯೆಗಳನ್ನು ಮೇಲೆತ್ತಿಕೊಂಡು ನೀತಿ ಆಗುತ್ತದೆ, ಅದು ಮತ್ತೆ ಕೆಳಗೆ ಹೋಗುತ್ತದೆ. ಮೊದಲು ಕುಟುಂಬದಲ್ಲಿ ಜನಿಸಿದ್ದಕ್ಕೆ ಅಧಿಕಾರ ಸಿಗುತ್ತಿತ್ತು. ಈಗ ಸಾಮರ್ಥ್ಯದ ಮೇಲೆ ಅಧಿಕಾರ ಸಿಗುತ್ತದೆ. ಜಾತಿವಾದವನ್ನು ಪಕ್ಕಕ್ಕೆ ಸರಿಸಿದ್ದೇವೆ ಎಂದರು.
ನರೇಂದ್ರ ಮೋದಿ ಎಂದಿಗೂ ಜನರಿಗೆ ಇಷ್ಟವಾಗುವ ನಿರ್ಧಾರ ತೆಗೆದುಕೊಂಡಿಲ್ಲ ಎಂದ ಅಮಿತ್ ಶಾ, ಜನರಿಗೆ ಒಳ್ಳೆಯದು ಯಾವುದೋ ಅದೇ ನಿರ್ಧಾರ ಮಾಡಿದೆ. ನಾವು ಎಂದಿಗೂ ವೋಟ್‌ಬ್ಯಾಂಕ್ ರಾಜಕಾರಣ ಮಾಡಿಲ್ಲ. ದೇಶದ 10 ಕೋಟಿ ಮನೆಗಳಿಗೆ ಶೌಚಾಲಯ ನಿರ್ಮಿಸಿ ತಾಯಂದಿರ ಗೌರವ ಉಳಿಸಿದ್ದೇವೆ. ಎಲ್‌ಪಿಜಿ ಉಚಿತವಾಗಿ ನೀಡಿ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಿದೆ. ಕೊರೊನಾ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರ ನೀಡಲಾಯಿತು, ಕೋಟ್ಯಂತರ ಜನರು ಮೋದಿ ಬಂದ ನಂತರವೇ ಬ್ಯಾಂಕ್ ಖಾತೆ ತೆರೆದರು. ದೆಹಲಿಯಲ್ಲಿ ಕುಳಿತವರು ನನ್ನ ಬಗ್ಗೆಯೂ ಯೋಚಿಸುತ್ತಾರೆ ಎಂದು ಜನರಿಗೆ ಅನ್ನಿಸತೊಡಗಿತು ಎಂದರು.
ಮಾತೃಭಾಷೆಗೆ ಒತ್ತು
ಹಿಂದಿ ಹೇರಿಕೆಯಾಗುತ್ತಿದೆ ಎಂಬ ಭಾವನೆಯ ಕುರಿತು ಪ್ರಕಾಶ್ ಬೆಳವಾಡಿ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ವೈದ್ಯಕೀಯ ವಿಜ್ಞಾನ ಹಿಂದಿಯಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಇರಬೇಕು. ಭಾಷೆಯೇ ಜ್ಞಾನವಲ್ಲ, ಅದೊಂದು ಅಭಿವ್ಯಕ್ತಿ ಮಾರ್ಗ. ನಿರ್ಣಯ ಪ್ರಕ್ರಿಯೆಯು ಮಾತೃಭಾಷೆಯಲ್ಲಿ ಆದಷ್ಟು ಉತ್ತಮವಾಗಿ ಎಲ್ಲೂ ಆಗುವುದಿಲ್ಲ. ರಾಮ್ ಜೇಠ್ಮಲಾನಿಗಿಂತಲೂ ಉತ್ತಮ ವಕೀಲರನ್ನು ನಾನು ಉತ್ತರ ಪ್ರದೇಶದಲ್ಲಿ ನೋಡಿದ್ದೇನೆ. ಇಂಗ್ಲಿಷ್ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವರು ಸುಪ್ರೀಂಕೋರ್ಟ್‌ಗೆ ಬರುತ್ತಿಲ್ಲ. ಭಾಷೆಯ ತೊಡಕಿನ ಕಾರಣಕ್ಕೆ ಬೃಹತ್ ಸಂಪನ್ಮೂಲವನ್ನು ಮನೆಯಲ್ಲಿ ಇರಿಸಿದ್ದೇವೆ. ಬಿಜೆಪಿ ಬಂದ ನಂತರ ಎಲ್ಲ ಭಾರತೀಯ ಭಾಷೆಗಳಲ್ಲೂ ಪರೀಕ್ಷೆ ನೀಡಲಾಗುತ್ತಿದೆ. ಹಿಂದಿ, ಇಂಗ್ಲಿಷ್ ಕಲಿಯಲೇಬೇಕೆಂದಿಲ್ಲ ಎಂದರು.
ಇದನ್ನೂ ಓದಿ: Amit Shah: ಜೆಡಿಎಸ್ ಕುಟುಂಬದಲ್ಲಿ ಎಲ್ಲರೂ ರಾಜಕೀಯದಲ್ಲಿದ್ದಾರೆ; ಅವರ ಮನೆ ಯಾರು ನಡೆಸ್ತಾರೆ?: ಅಮಿತ್ ಶಾ ಗೇಲಿ
ವ್ಯಕ್ತಿಯನ್ನು ನೋಡಿ ಮತ ನೀಡಬೇಡಿ. ಪಕ್ಷವನ್ನು ಹಾಗೂ ಅದರ ನೇತೃತ್ವವನ್ನು ನೋಡಿ ಮತ ನೀಡಿ. ಏಕೆಂದರೆ ನೇತೃತ್ವ ವಹಿಸಿರುವವರು ಆ ಪಕ್ಷದ ಅಭಿವೃದ್ಧಿ ಮಾದರಿ, ಸಿದ್ಧಾಂತಕ್ಕೆ ಅನುಗುಣವಾಗಿರುತ್ತದೆ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಹಿಜಾಬ್ ಹಲಾಲ್‌ನಂತಹ ವಿಚಾರಗಳು ಮುನ್ನೆಲೆಗೆ ಬರುತ್ತಿವೆಯಲ್ಲ, ಅದು ಸಬ್ ಕಾ ವಿಕಾಸ್‌ಗೆ ಅನುಗುಣವಲ್ಲ ಅಲ್ಲವೇ? ಎಂದು ಪ್ರಕಾಶ್ ಬೆಳವಾಡಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಮಿತ್ ಶಾ, ಸಮವಸ್ತ್ರ ಎನ್ನುವುದು ಸಮಾನತೆಯ ಸಂಕೇತ. ಇದರಲ್ಲಿ ಹಿಂದು ಮುಸ್ಲಿಮ್ ಎಂದು ಯೋಚನೆ ಮಾಡುವುದೇ ತಪ್ಪು. ಭೇದ ಭಾವ ಇಲ್ಲದಂತೆ ಮಾಡುವುದು ಇದರ ಇದ್ದೇಶ, ಇದನ್ನು ಈ ರೀತಿ ನೋಡಬೇಕು. ಜಾತಿಯ ಪ್ರಾತಿನಿಧ್ಯ ತಪ್ಪಲ್ಲ. ಅಧಿಕಾರಕ್ಕೆ ಬಂದ ನಂತರ ಜಾತಿಗೆ ಮಾತ್ರವೇ ಸೀಮಿತ ಆಗಬಾರದು ಅಷ್ಟೆ. ನಮ್ಮ ನೀತಿಗಳು ಎಲ್ಲರನ್ನೂ ಒಳಗೊಳ್ಳುತ್ತವೆ ಎಂದು ಹೇಳಿದರು.