ಬೆಂಗಳೂರು: ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಿಧ ಕಾರ್ಯಕ್ರಮಗಳ ನಂತರ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು. ಈ ವೇಳೆ ವಿಧಾನಸಭೆ ಚುನಾವಣೆ ಸಿದ್ಧತೆ ಬಗ್ಗೆ ರಾಜ್ಯ ನಾಯಕರ ಜತೆ ಮಹತ್ವದ ಚರ್ಚೆ ನಡೆಸಿದರು. ವಿಶೇಷವಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಮನೆ ಮನೆ ಪ್ರಚಾರ ಚುರುಕುಗೊಳಿಸುವುದು, ಜನರಿಗೆ ಡಬಲ್ ಎಂಜಿನ್ ಸರ್ಕಾರಗಳ ಸಾಧನೆಗಳ ಮನವರಿಕೆ ಮಾಡಲು ಪಕ್ಷದ ತಂತ್ರಗಾರಿಕೆ ಬಗ್ಗೆ ಮಾತುಕತೆ ನಡೆಸಿದರು.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ, ರ‍್ಯಾಲಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯದಲ್ಲಿ ಮೀಸಲಾತಿ ಪರಿಷ್ಕರಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಯಿತು. ಮೀಸಲಾತಿಯಿಂದ ಸಮುದಾಯಗಳಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ರಾಜ್ಯ ನಾಯಕರಿಂದ ಅಮಿತ್ ಶಾ ಮಾಹಿತಿ ಪಡೆದರು.
ಇದನ್ನೂ ಓದಿ | Karnataka Election: ಸಿಎಂ ಕುರ್ಚಿಗೆ ಕಚ್ಚಾಡುವವರನ್ನು ತಿರಸ್ಕರಿಸಿ ದೇಶಭಕ್ತರನ್ನು ಆಯ್ಕೆಮಾಡಿ ಎಂದು ಕರೆ ನೀಡಿದ ಅಮಿತ್ ಶಾ
ಮೀಸಲಾತಿ ನಿರ್ಣಯವನ್ನು ವಿರೋಧ ಮಾಡಿರುವ ಕಾಂಗ್ರೆಸ್ ನಾಯಕರ ನಡೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಇನ್ನು ಮನೆ ಮನೆ ಪ್ರಚಾರ ಚುರುಕು, ಡಬಲ್ ಎಂಜಿನ್ ಸರ್ಕಾರಗಳ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಲಾಯಿತು. ಇದೇ ವೇಳೆ ಬಿಜೆಪಿ ದುರ್ಬಲ ಕ್ಷೇತ್ರಗಳನ್ನು ಬಲಗೊಳಿಸಲು ಈ ಹಿಂದೆ ನೀಡಿದ್ದ ಟಾಸ್ಕ್‌ಗಳ ಪ್ರಗತಿ ಬಗ್ಗೆ ಅಮಿತ್ ಶಾ ಮಾಹಿತಿ ಪಡೆದರು.
ಹಾಗೆಯೇ ಕಾಂಗ್ರೆಸ್‌ನಿಂದ ಪ್ರಕಟಗೊಂಡ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹಾಗೂ ಉಳಿದ 100 ಕ್ಷೇತ್ರಗಳಿಗೆ ಆಗಬೇಕಿರುವ ಪಟ್ಡಿ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಕಾಂಗ್ರೆಸ್ ಯಾವ ಆಧಾರದಲ್ಲಿ ಪಟ್ಟಿ ಪ್ರಕಟ ಮಾಡಿದೆ ಎಂಬ ಕುರಿತು ಹಾಗೂ ಸಿದ್ದರಾಮಯ್ಯ ವರುಣಾ ಕ್ಷೇತ್ರ ಸ್ಪರ್ಧೆ ಬಗ್ಗೆ ಕೇಂದ್ರ ಸಚಿವರು ಮಾಹಿತಿ ಪಡೆದರು. ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಮಹತ್ವದ ಚರ್ಚೆಯಾಗಿದ್ದು, ಈ ಯೋಜನೆಗಳಿಂದ ಕಾಂಗ್ರೆಸ್‌ಗೆ ಲಾಭ ಆಗದ ರೀತಿ ನೋಡಿಕೊಳ್ಳುವ ಬಗ್ಗೆ ತಂತ್ರಗಾರಿಕೆ ರಚನೆ ಮಾಡಲು ಅಮಿತ್ ಶಾ ಸೂಚಿಸಿದರು.
ಇದನ್ನೂ ಓದಿ | Pancharatna: ನಮ್ಮ ದುಡಿಮೆಯನ್ನು ನಂಬಿ ಸೇವೆಗೆ ಅವಕಾಶ ನೀಡಿ: ಪಂಚರತ್ನ ಸಮಾರೋಪದಲ್ಲಿ ದೇವೇಗೌಡರ ಭಾವನಾತ್ಮಕ ನುಡಿ
ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ, ಪ್ರಚಾರ ಸಮಿತಿಗಳ ಚರ್ಚೆ ಆಗಿದೆ. ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಕಳೆದ ಕೆಲ ತಿಂಗಳ ಸಂಘಟನೆ ಪರಿಣಾಮ ನಮ್ಮ ಪರ ಅಲೆ ಇದೆ. ಇನ್ನೂ ಏಳು ಜಿಲ್ಲೆಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಬಾಕಿ ಇದೆ. ಈಗಾಗಲೇ 26 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಮಾಡಿದ್ದೇವೆ. ನಾವು ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ಈ ಹಿಂದೆ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೆವು. ಇದರಿಂದ ಕಾಂಗ್ರೆಸ್‌ನವರ ಉತ್ಸಾಹ ಕಮರಿ ಹೋಗಿತ್ತು. ಈಗ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದ್ದೇವೆ. ಇದರಿಂದ ಕಾಂಗ್ರೆಸ್‌ನವರಿಗೆ ಮರ್ಮಾಘಾತ ಆಗಿದೆ ಎಂದು ತಿಳಿಸಿದರು.