ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾರ್ಚ್ 26ರಂದು ರಾಜ್ಯ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೀದರ್, ರಾಯಚೂರು ಹಾಗೂ ಬೆಂಗಳೂರಿನಲ್ಲಿ ಆಯೋಜಿಸಿರುವ ಪ್ರತಿಮೆ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಅವರು (Amit Shah Visit) ಭಾಗವಹಿಸಲಿದ್ದಾರೆ.
ಮೊದಲಿಗೆ ಬೀದರ್ ಜಿಲ್ಲೆ ಗೋರ್ಟಾ ಗ್ರಾಮದಲ್ಲಿ ಹುತಾತ್ಮರ ಸ್ಮಾರಕ ಹಾಗೂ ಸರ್ದಾರ್ ವಲ್ಲಭಭಾಯಿ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಬಳಿಕ ರಾಯಚೂರು ಜಿಲ್ಲೆಯಲ್ಲಿ 4,238 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಬಸವೇಶ್ವರ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಜಿಲ್ಲೆ ಬೀದರ್‌ಗೆ ಎರಡನೆ ಬಾರಿಗೆ ಆಗಮಿಸಿದ್ದಾರೆ. ಶನಿವಾರ (ಮಾ.25) ಸಂಜೆ ಬೀದರ್ ಏರ್ ಬೇಸ್‌ಗೆ ಅವರು ಆಗಮಿಸಿದ್ದಾರೆ. ರಾತ್ರಿ ಏರ್‌ಪೋರ್ಸ್ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿರುವ ಬಿಜೆಪಿಯ ಚಾಣಕ್ಯ, ಭಾನುವಾರ ಬೆಳಗ್ಗೆ 10-10ಕ್ಕೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮಕ್ಕೆ ತೆರಳಲಿದ್ದಾರೆ. ಬೆಳಗ್ಗೆ 10-30 ರಿಂದ ಮಧ್ಯಾಹ್ನ 12-30 ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ | Modi in Karnataka: ಸರ್. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಹೊಸ ಮ್ಯೂಸಿಯಂ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಭರವಸೆ
ಗೋರ್ಟಾ ಗ್ರಾಮದ ಲಕ್ಷ್ಮಿ ದೇವಸ್ಥಾನದ ಎದುರು ನಿಜಾಮರ ಆಡಳಿತದಲ್ಲಿ ನಡೆದ ಹತ್ಯಾಕಾಂಡದ ಸ್ಥಳದಲ್ಲಿ 103 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, 35 ಅಡಿ ಎತ್ತರದ ಹುತಾತ್ಮದ ಸ್ಮಾರಕ, 1100 ಕೆ.ಜಿ. ತೂಕದ 11 ಅಡಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡುತ್ತಾರೆ. ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿ ಗೋರ್ಟಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡ, ನಿಜಾಮರ ಆಡಳಿತ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ರಾಜ್ಯ ನಾಯಕರು ಉಪಸ್ಥಿತರಿರಲಿದ್ದಾರೆ.
ಬಳಿಕ ಮಧ್ಯಾಹ್ನ 1.45ಕ್ಕೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರಿಗೆ ತೆರಳಿ 4,283 ಸಾವಿರ ಕೋಟಿ ರೂಪಾಯಿ ವೆಚ್ಚದ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಸೇರಿ 200 ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಜನ ಸೇರು ನಿರೀಕ್ಷೆ ಇದೆ.
ಇದನ್ನೂ ಓದಿ | Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
ನಂತರ ಸಂಜೆ 6.30ಕ್ಕೆ ಗಂಟೆಗೆ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿ ʼಬೆಂಗಳೂರು ಹಬ್ಬʼದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ವಿಧಾನ ಸೌಧದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಕೆಂಪೇಗೌಡ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ರಾತ್ರಿ 8.30ಕ್ಕೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಾಯಕರ ಜತೆ ಮಹತ್ವದ ಸಭೆ ನಡೆಸಲಿದ್ದಾರೆ. ಅದಾದ ನಂತರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿ, ಮಾ.27 ರಂದು ಬೆಳಗ್ಗೆ ನವ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.