ಬೆಳಗಾವಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು (Amit shah Meeting) ಬಿಜೆಪಿ ಮುಖಂಡರ ಸಭೆಯನ್ನು ಶನಿವಾರ ನಡೆಸಿದರು. ಸಭೆಯಲ್ಲಿ ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಸಂಘಟನಾತ್ಮಕ ಜಿಲ್ಲೆಗಳ ಬಿಜೆಪಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು, ಹಾಲಿ ಮಾಜಿ ಸಚಿವರು, ಸಂಸದರು, ಶಾಸಕರು, ಎಂಎಲ್‌ಸಿಗಳು ಹಾಗೂ ರಾಜ್ಯಸಭಾ ಸದಸ್ಯರು ಸೇರಿ ಹಲವರು ಭಾಗಿಯಾಗಿದ್ದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣಾ ಅಂಗಡಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಸೇರಿ ಹಲವರು ಭಾಗಿಯಾಗಿದ್ದರು. ಎರಡು ದಿನಗಳ ರಾಜ್ಯ ಪ್ರವಾಸದ ಅಂತ್ಯದಲ್ಲಿ ಮಹತ್ವದ ಸಭೆ ನಡೆಸಿದ ಅಮಿತ್ ಶಾ ಅವರು, ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.
ಸಭೆಯ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬೆಳಗಾವಿಯಲ್ಲಿ ಬಿಜೆಪಿ ಪರ ಅಲೆ ಇದೆ. ಬೆಳಗ್ಗೆಯಿಂದ ನಡೆದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ನನಗೆ ಸಮಾಧಾನ ಆಗಿದೆ, ತೃಪ್ತಿಯಾಗಿದೆ ಎಂಬ ಮಾತನ್ನು ಅಮಿತ್ ಶಾ ಅವರು ಹೇಳಿದ್ದಾರೆ. ಬೆಳಗಾವಿಯಲ್ಲಿ ನಾವು ಪ್ರಯತ್ನ ಮಾಡಿದರೆ ಹದಿನೆಂಟಕ್ಕೆ ಹದಿನೆಂಟು ಸೀಟ್ ಗೆಲ್ಲಲು ಸಾಧ್ಯತೆ ಇದೆ. ಈಗ ಹದಿಮೂರು ಸೀಟ್ ಗೆದ್ದಿದ್ದು, ಎಲ್ಲರೂ ಪ್ರಯತ್ನ ಮಾಡಿ ಬೆಳಗಾವಿ ಎಲ್ಲ ಸೀಟ್ ಗೆಲ್ಲಬೇಕು ಎಂದು ಅಮಿತ್ ಶಾ ಹೇಳಿರುವುದಾಗಿ ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಸೀಟ್ ಗೆಲ್ಲುವುದರ ಮೂಲಕ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾನು ಇನ್ನೊಮ್ಮೆ ಬೆಳಗಾವಿಗೆ ಬರುತ್ತೇನೆ, ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಒಟ್ಟಾಗಿ ಪ್ರಯತ್ನ ಮಾಡಿದರೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಲು ಕಷ್ಟ ಆಗಲ್ಲ. ಕಾಂಗ್ರೆಸ್‌ನವರು ನಾವೇ ಮುಖ್ಯಮಂತ್ರಿ ಅಂತ ತಿರುಕನ ಕನಸು ಕಾಣುತ್ತಿದ್ದಾರೆ, ಅದ್ಯಾವುದು ನನಸು ಆಗಲ್ಲ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಆ ದಿಕ್ಕಿನಲ್ಲಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕೆಂದು ಅಮಿತ್ ಶಾ ಅವರು ಸೂಚನೆ ಕೊಟ್ಟು ಹೋಗಿದ್ದಾರೆಂದು ಮಾಜಿ ಸಿಎಂ ತಿಳಿಸಿದರು.
ಅಮಿತ್ ಶಾ ಅವರ ಸೂಚನೆಗಳನ್ನು ಎಲ್ಲರೂ ಒಪ್ಪಿಕೊಂಡಿದ್ದೇವೆ. ರಾಜ್ಯದಲ್ಲಿ ಎಲ್ಲ ಕಡೆ ಅಮಿತ್ ಶಾ ಪ್ರವಾಸ ಮಾಡಲಿದ್ದಾರೆ. ನನಗೆ ಇನ್ನೊಂದು ತಿಂಗಳಾದರೆ ನನಗೆ 80 ವರ್ಷ ಮುಗಿಯುತ್ತದೆ. ಆದರೂ, ಚುನಾವಣೆ ಮುಗಿಯುವವರೆಗೂ ಮನೆ ಸೇರುವುದಿಲ್ಲ. ಹಗಲು ರಾತ್ರಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ನಮ್ಮೆಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಹೋಗುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನಾಯಕತ್ವ ನಮಗಿದೆ. ಕಾಂಗ್ರೆಸ್‌ನವರಿಗೆ ಇಂತಹ ನಾಯಕತ್ವ ಎಲ್ಲಿದೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ನಿಶ್ಚಿತವಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ಅವರಿಗೆ ವಿಶ್ವಾಸ ತುಂಬಿದ್ದೇವೆ. ಅವರು ಅದೇ ವಿಶ್ವಾಸದಲ್ಲೇ ದೆಹಲಿಗೆ ಹೋಗಿದ್ದಾರೆ ಎಂದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯ ವಿಚಾರ ಪ್ರತಿಕ್ರಿಯಿಸಿ, ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲ. ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಯಡಿಯೂರಪ್ಪ ಅವರು ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು. ಜಿಲ್ಲೆಯಲ್ಲಿ 15 ಕ್ಷೇತ್ರ ಗೆಲ್ಲಲು ಅಮಿತ್ ಶಾ ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದಂತೆ ನಾವು ಕೆಲಸ ಮಾಡುತ್ತೇವೆ ಎಂದರು.
ಭಿನ್ನಮತ ಮರೆತು ಬೆಳಗಾವಿಯ ಎಲ್ಲ ನಾಯಕರು ಸಭೆಗೆ ಹಾಜರಾದ ಬಗ್ಗೆ ಉತ್ತರಿಸಿ, ನಮ್ಮ ಬಾಸ್ ಬಂದಾಗ ಆಬ್ಸೆಂಟ್ ಆಗಲು ಯಾರಿಗಾದರೂ ಧೈರ್ಯ ಇದೆಯಾ? ಅವರನ್ನು ನಂಬಿಯೇ ಪಕ್ಷಕ್ಕೆ ಬಂದಿದ್ದೇವೆ, ಅವರಿಂದ ಒಳ್ಳೆಯದಾಗುತ್ತದೆ. ಯಡಿಯೂರಪ್ಪ ಅವರು ಹೇಳಿದ ಮಾತೇ ನಮ್ಮ ಮಾತು. ಭಾನುವಾರ ಗೋಕಾಕ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಇದೆ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಬೆಳಗಾವಿಯಲ್ಲಿ ಪಕ್ಷದ ಪರ ಅಲೆ ಇದ್ದು, ಎಲ್ಲರೂ ಕೂಡಿ ಹೆಚ್ಚಿನ ಸೀಟ್ ಗೆಲ್ಲುವ ಪ್ರಯತ್ನ ಮಾಡಬೇಕೆಂದು ಅಮಿತ ಶಾ ಸೇರಿ ಪಕ್ಷದ ನಾಯಕರು ಆದೇಶ ಮಾಡಿದ್ದಾರೆ. ಆ ಪ್ರಕಾರ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಪಕ್ಷದ ಕೆಲಸ ಮಾಡುತ್ತೇವೆ. ಮೋದಿ, ಅಮಿತ್ ಶಾ ನಾಯಕತ್ವದಲ್ಲಿ ಎಲ್ಲರೂ ಕೂಡಿ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತೇವೆ ಎಂದರು.
ಸಮನ್ವಯತೆ ಕೊರತೆ ಬಗ್ಗೆ ಆರ್‌ಎಸ್‌ಎಸ್ ನಾಯಕರ ದೂರು
ಬಿಜೆಪಿ ನಾಯಕರ ಸಭೆಗೂ ಮುನ್ನ ಆರ್‌ಎಸ್ಎಸ್‌ನ 6 ಹಿರಿಯ ನಾಯಕರ ಜತೆ ಅಮಿತ್ ಶಾ ಅವರು ಯುಕೆ27 ಹೋಟೆಲ್‌ನಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಉತ್ತರ ಕರ್ನಾಟಕ ಪ್ರಾಂತದ ಆರ್‌ಎಸ್ಎಸ್ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಆರ್‌ಎಸ್ಎಸ್ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸ ಇದೆ. ಆದರೆ ನಾಯಕರಲ್ಲಿ ಒಗ್ಗಟ್ಟಿನ ಅಗತ್ಯವಿದೆ ಎಂಬುದು ಸಹ ಆರ್‌ಎಸ್ಎಸ್ ನಾಯಕರ ಅಭಿಪ್ರಾಯವಾಗಿದೆ. ಚುನಾವಣೆ ತಂತ್ರಗಾರಿಕೆ, ಮಾರ್ಗಸೂಚಿ ಹಾಗೂ ಆರ್‌ಎಸ್ಎಸ್ ಜತೆ ಪಕ್ಷದ ನಾಯಕರ ಸಮನ್ವಯತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಕೆಲ ನಾಯಕರ ಸಮನ್ವಯತೆ ಕೊರತೆ ಬಗ್ಗೆ ಅಮಿತ್ ಶಾ ಬಳಿ ಆರ್‌ಎಸ್ಎಸ್ ನಾಯಕರ ದೂರು ನೀಡಿದ್ದಾರೆ ಎನ್ನಲಾಗಿದೆ.