Site icon Vistara News

Amrit Mahotsav | ಮಾಣೆಕ್ ಷಾ ಮೈದಾನಕ್ಕಿಂತ ಚಾಮರಾಜಪೇಟೆ ಮೈದಾನಕ್ಕೇ ಅತಿ ಹೆಚ್ಚು ಖಾಕಿ ಭದ್ರತೆ!

chamarajpet_security

ಬೆಂಗಳೂರು: ಪ್ರಸಕ್ತ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಸಂಭ್ರಮದಲ್ಲಿ ದೇಶವೇ ಇದೆ. ಈ ಹೊತ್ತಿನಲ್ಲಿ ರಾಜ್ಯದಲ್ಲೂ ಭರದ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಬಹುವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗುತ್ತಿದ್ದು, ಇದು ಮಾಣೆಕ್‌ ಷಾ ಮೈದಾನದಲ್ಲಿ ನಿಯೋಜಿಸುವ ಭದ್ರತಾ ಪ್ರಮಾಣಕ್ಕಿಂತ ಹೆಚ್ಚು ಎಂಬ ಸಂಗತಿ ತಿಳಿದುಬಂದಿದೆ.

ಈಗಾಗಲೇ ಮೈದಾನದ ಸುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಒಂದೇ ಮಾರ್ಗದಲ್ಲಿ ಒಳ ಬರಲು ವ್ಯವಸ್ಥೆ ಮಾಡಲಾಗಿದೆ. ಪೂರ್ತಿ ಚಾಮರಾಜಪೇಟೆ ಮೈದಾನವು ಖಾಕಿ ನಿಯಂತ್ರಣಕ್ಕೊಳಪಟ್ಟಿದೆ. ಈಗಾಗಲೇ ೩೫೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದು ನಾಳೆ ಎನ್ನುವಷ್ಟರ ಹೊತ್ತಿಗೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ನೋಡಿಕೊಂಡು ಹೆಚ್ಚಿನ ಭದ್ರತೆಗೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳ ಮೇಲೂ ನಿಗಾ

ಸ್ವಾಟ್ ಪಡೆ (ರಾಜ್ಯ ವಿಶೇಷ ತರಬೇತಿ ಪಡೆದ ಕಮಾಂಡೋ ಪಡೆ) ಸಹ ಮೈದಾನದ ಸುತ್ತಲೂ ಇರಲಿದ್ದು, ಸೂಕ್ಷ್ಮವಾಗಿ ನಿಗಾವಹಿಸಲಿದೆ. ಅಲ್ಲದೆ, ಮೈದಾನ ಮಾತ್ರವಲ್ಲದೆ, ಚಾಮರಾಜಪೇಟೆಯ ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳ ಮೇಲೆಯೂ ಪೊಲೀಸರು ನಿಗಾ ವಹಿಸಿದ್ದು, ಆ ಪ್ರದೇಶಗಳಲ್ಲೂ ಭದ್ರತೆ ಕೈಗೊಳ್ಳಲು ಪೊಲೀಸ್‌ ಆಯುಕ್ತರು ಸೂಚನೆ ನೀಡಿದ್ದಾರೆ.

ಗಲಭೆ ಪ್ರದೇಶವಾಗಿರುವ ಪಾದರಾಯನಪುರ, ಗೌರಿ ಪಾಳ್ಯ, ಜೆಜೆ ನಗರ ಸೇರಿದಂತೆ ಇನ್ನಿತರ ಕಡೆ ೨ ದಿನ ಹೊಯ್ಸಳ, ಚೀತಾ ಬೀಟ್ ಜತೆ ಪೊಲೀಸರು ಗಸ್ತು ತಿರುಗಲಿದ್ದು, ನಾಳೆ ಪರಿಸ್ಥಿತಿ ನೋಡಿಕೊಂಡು ಪೊಲೀಸ್ ಭದ್ರತೆಯ ಸಂಖ್ಯೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ‌ ಎನ್ನಲಾಗಿದೆ. ಅಲ್ಲದೆ, ಕೇಂದ್ರ ಅರೆಸೇನಾ ಪಡೆಯನ್ನು ನಿಯೋಜಿಸುವಂತೆ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಮನವಿ ಮಾಡಿದ್ದಾರೆ ಎನ್ನಲಾಗಿದ್ದು, ಇದರ ಬಗ್ಗೆ ಭಾನುವಾರ ಅಧಿಕೃತ ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ | ಜಮೀರ್‌ ಅಹ್ಮದ್‌ಗೆ ಹಿನ್ನಡೆ: ಚಾಮರಾಜಪೇಟೆ ಮೈದಾನದಲ್ಲಿ ರಾಜ್ಯ ಸರ್ಕಾರದಿಂದಲೇ ಧ್ವಜಾರೋಹಣ

ಗಂಭೀರವಾಗಿ ಪರಿಗಣಿಸಿರುವ ಸಿಎಂ

ಚಾಮರಾಜಪೇಟೆ ಮೈದಾನ ವಿವಾದ ಇರುವ ಕಾರಣ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿ ಮಂಜುನಾಥ ಪ್ರಸಾದ್‌ ಅವರನ್ನು ಭದ್ರತೆ ಪರಿಶೀಲನೆಗೆ ಕಳುಹಿಸಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌ ಜತೆ ಸ್ಥಳಕ್ಕೆ ಭೇಟಿ ನೀಡಿರುವ ಮಂಜುನಾಥ್‌ ಪ್ರಸಾದ್‌ ಅವರು ಭದ್ರತೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದು, ಸಚಿವರಿಗೂ ವಿವರಣೆ ನೀಡಿದರು.

ಮಾಣೆಕ್‌ ಷಾ ಮೈದಾನದಲ್ಲಿ ಬಿಗಿ ಭದ್ರತೆ

1700 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿದೆ. 9 ಡಿಸಿಪಿ, 15 ಎಸಿಪಿ, 44 ಪಿಐ, 14 ಪಿಎಸ್ಐ, 77 ಎಎಸ್‌ಐ, 600 ಕಾನ್ಸ್‌ಟೇಬಲ್‌, 77 ಮಹಿಳಾ ಸಿಬ್ಬಂದಿ, 160 ಅಧಿಕಾರಿಗಳು ಹಾಗೂ ಸಿಬ್ಬಂದಿ ಮಫ್ತಿಯಲ್ಲಿ ಇರಲಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗ್ಗೆಯೂ ಪೊಲೀಸರು ಪಥಸಂಚಲನ ಮಾಡಲಿದ್ದು, ಅಂದು ವಿವಿಧ ಸಂಘಟನೆಗಳು, ಅನುಮಾನಿತ ವ್ಯಕ್ತಿಗಳು, ಪ್ರಚೋದನೆ ಮಾಡುವ ವ್ಯಕ್ತಿಗಳು, ಪ್ರತಿಭಟನಾಕಾರರ ಮೇಲೆ ತೀವ್ರ ನಿಗಾವಹಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಎರಡೂ ಸಮುದಾಯದವರ ಜತೆಗೂ ಮಾತುಕತೆ ನಡೆಸಲಾಗಿದ್ದು, ಆದೇಶ ಪಾಲನೆ ಬಗ್ಗೆ ಅರಿವು ಮೂಡಿಸಲಾಗಿದೆ.

ಇದಲ್ಲದೆ, 100 ಸಿಸಿಟಿವಿ, 4 ಬ್ಯಾಗೇಜ್ ಸ್ಕ್ಯಾನರ್, 12 ಡಿಎಂಎಫ್‌ಡಿ ಹಾಗೂ 24 ಎಚ್‌ಎಚ್‌ಎಂಡಿ ಉಪಕರಣಗಳ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಪ್ರತಿಯೊಬ್ಬರ ಚಲನವಲಗಳನ್ನು ವೀಕ್ಷಿಸಲಾಗುವುದು. ಸಿಸಿಟಿವಿ ಪರಿಶೀಲನೆಗೆಂದೇ ಕೇಂದ್ರವೊಂದರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಪರೇಡ್ ವೀಕ್ಷಿಸಲು ಬರುವ ಸಾರ್ವಜನಿಕರು ತಮ್ಮೊಂದಿಗೆ ಯಾವುದೇ ರೀತಿಯ ವಸ್ತುಗಳನ್ನು ತರದಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಇಲ್ಲಿ ಸಣ್ಣ ಅಹಿತಕರ ಘಟನೆಗೂ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

2400 ಜನ ಮಕ್ಕಳು ಭಾಗಿ

ಪ್ರತಿ ವರ್ಷದಂತೆ ಮಾಣೆಕ್ ಷಾ ಮೈದಾನ್‌ದಲ್ಲಿ ಪರೇಡ್ ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಧ್ವಜಾರೋಹಣ ನೇರವೇರಲಿದೆ. ಈ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದಲ್ಲಿ 2400 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಅತ್ಯುತ್ತಮ ಪರೇಡ್‌ ಹಾಗೂ ಕಾರ್ಯಕ್ರಮಕ್ಕೆ ಪ್ರಶಸ್ತಿ ಇರಲಿದೆ. ಈಗಾಗಲೇ ಮೈದಾನ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಒಟ್ಟು 8000 ಸಾವಿರ ಆಮಂತ್ರಣ ಪತ್ರಗಳನ್ನು ಮುದ್ರಣ ಮಾಡಿಸಿ ವಿತರಣೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

2 ವರ್ಷಗಳ ನಂತರ ಸಾರ್ವಜನಿಕ ಪ್ರವೇಶಪ್ರತಾಪ್‌ ರೆಡ್ಡಿ

2 ವರ್ಷಗಳ ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ದಿನ 1700 ಪೊಲೀಸ್ ಸಿಬ್ಬಂದಿಯನ್ನು ಭಧ್ರತೆಗೆ ನಿಯೋಜನೆ ಮಾಡಲಾಗಿದೆ. 9 ಡಿಸಿಪಿಗಳ ನೇತೃತ್ವದಲ್ಲಿ ಭಧ್ರತೆ ಕೈಗೊಳ್ಳಲಾಗಿದೆ. 10 ಕೆಎಸ್‌ಆರ್‌ಪಿ ತುಕಡಿಯನ್ನು ಸಹ ಭಧ್ರತೆಗೆ ನಿಯೋಜಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ.

ಈದ್ಗಾ ಮೈದಾನದಲ್ಲಿ ಕಂದಾಯ ಇಲಾಖೆಯ ವತಿಯಿಂದ ಧ್ವಜಾರೋಹಣ ಮಾಡಲಾಗುತ್ತಿದೆ. ಈಗಾಗಲೇ ಅಲ್ಲಿಗೂ ಭಧ್ರತೆ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ಚಾಮರಾಜಪೇಟೆ ಮೈದಾನ: ಖಾಕಿ ಕಣ್ಗಾವಲು, ಕೆಎಸ್‌ಆರ್‌ಪಿ ಪಥಸಂಚಲನ

Exit mobile version