ಬೆಂಗಳೂರು : ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ‘ಹರ್ ಘರ್ ತಿರಂಗ’ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮುಖ್ಯಮಂತ್ರಿ ಬಸವರಾ ಮೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಅಭಿಯಾನದ ಸಿದ್ಧತೆಯನ್ನು ಪರಿಶೀಲಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತ ಅಧಿಕಾರಿಗಳ ಸಭೆ ನಡೆಸಿ, ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ಮಾಡದೆ, ದೇಶದ ಮೇಲಿನ ಅಭಿಮಾನದಿಂದ ಪ್ರೀತಿಯಿಂದ ಆಯೋಜಿಸಬೇಕು. ಇದನ್ನು ಅರ್ಥಪೂರ್ಣವಾಗಿ ನಡೆಸಬೇಕೆಂಬ ತುಡಿತದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಧ್ವಜ ವಿತರಣೆ ಕಾರ್ಯ ನಡೆಯುತ್ತಿದೆ. ಆಗಸ್ಟ್ 13 ರಂದೇ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ ಮೂರು ದಿನಗಳಂದು ಪ್ರತಿ ದಿನ ಬೆಳಿಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಇಳಿಸಬೇಕು. ಮನೆಗಳಲ್ಲಿ ಆಗಸ್ಟ್ 13 ರಂದು ಧ್ವಜಾರೋಹಣ ಮಾಡಿದರೆ, 15ರ ವರೆಗೆ ಇರಿಸಬಹುದಾಗಿದೆ ಎಂದು ಹೇಳಿದರು.
ಧ್ವಜಾರೋಹಣ ಎಲ್ಲಿ ಎಷ್ಟು ಹೊತ್ತಿಗೆ?
ಸರ್ಕಾರಿ ಕಚೇರಿ, ಶಾಲೆ, ಕಾಲೇಜು,ಅಂಗನವಾಡಿ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಪ್ರತಿದಿನ ಬೆಳಿಗ್ಗೆ 8 ಕ್ಕೆ ಧ್ವಜಾರೋಹಣ ಮಾಡಿ, ಸೂರ್ಯಸ್ತದ ವೇಳೆಗೆ ಇಳಿಸಬೇಕು. ಜಿಲ್ಲೆಯಾದ್ಯಂತ ಖಾಸಗಿ ಮನೆಗಳಲ್ಲಿ ಮಾತ್ರ ಆಗಸ್ಟ್ 13 ರಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಹಗಲು ರಾತ್ರಿ ನಿರಂತರವಾಗಿ ಧ್ವಜ ಹಾರಿಸಿ ಆಗಸ್ಟ್ 15 ರ ಸಂಜೆ ಸೂರ್ಯಾಸ್ತ ವೇಳೆಗೆ ಇಳಿಸಬೇಕು ಎಂದು ಸೂಚಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗಳು ಮತ್ತೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ನಿಗದಿತ ಗುರಿ ಸಾಧಿಸಲು ಜಿಲ್ಲಾಡಳಿತಗಳಿಗೆ ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಇದರೊಂದಿಗೆ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣಾರ್ಥ, ಆಯಾ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಆಗಸ್ಟ್ 9 ರಿಂದ 14ರ ನಡುವೆ, ಅವರ ಮನೆಗೆ ತೆರಳಿ ಸನ್ಮಾನಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರೂ ಇದರಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ ಪಾಟೀಲ, ಬಿ.ಸಿ. ಪಾಟೀಲ, ಆರಗ ಜ್ಞಾನೇಂದ್ರ, ಆನಂದ್ ಸಿಂಗ್, ನಾರಾಯಣಗೌಡ, ಸುನಿಲ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ ಮತ್ತು ಇತರ ಹಿರಿಯ ಅಧಿಕಾರಿಗಳು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ| Amrit Mahotsav | ಸ್ವಾತಂತ್ರ್ಯ ಅಮೃತ ಮಹೋತ್ಸವ: ಐತಿಹಾಸಿಕ ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ