ವಿವೇಕ ಮಹಾಲೆ, ಶಿವಮೊಗ್ಗ
ಏಸೂರು ಕೊಟ್ಟರೂ ಈಸೂರು ಕೊಡೆವು- ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಘೋಷಣೆಯಿದು. ವೀರತನಕ್ಕೆ, ಮಹಾಕ್ರಾಂತಿಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಒಂದು ಪುಟ್ಟ ಈಸೂರು ಗ್ರಾಮದಿಂದ ಹೊರಟ ಈ ಧ್ಯೇಯವಾಕ್ಯ ಬ್ರಿಟಿಷ್ ಸರ್ಕಾರವನ್ನೇ ನಡುಗಿಸಿದ್ದು ಸುಳ್ಳಲ್ಲ. ಇಲ್ಲಿನ ಜನರು ಬ್ರಿಟಿಷರಿಗೆ ಸಡ್ಡು ಹೊಡೆದು, ಅವರೊಂದಿಗೆ ಕಾದಾಡಿ ವೀರಮರಣ ಹೊಂದಿದ್ದು ಈಗ ಇತಿಹಾಸ. ಇವತ್ತಿನವರೆಗೂ ಈ ಗ್ರಾಮ ವೀರಪುತ್ರರ ನಾಡು ಎಂದೇ ಕರೆಸಿಕೊಳ್ಳುತ್ತದೆ. ಭಾರತದ ಭೂಪಟದಲ್ಲಿ ಈ ಪುಟ್ಟ ಗ್ರಾಮಕ್ಕೆ ವಿಶೇಷ ಸ್ಥಾನವಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಈ ಸಂದರ್ಭದಲ್ಲಿ ವೀರ ಹೋರಾಟಗಾರರ ನೆನೆಯಬೇಕಿದೆ.
ಹೌದು, ಅದು ಭಾರತವನ್ನು ಬ್ರಿಟಿಷರ ದಾಸ್ಯದಿಂದ ಹೊರತರುವ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಹೊತ್ತು. ಅದೆಷ್ಟೋ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ಪಡೆದ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಕುಮುದಿನಿ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮ ಈಸೂರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಘಟ್ಟವಾದ ‘ಚಲೇಜಾವ್’ ಚಳವಳಿಯಿಂದ ಪ್ರೇರೇಪಿತವಾದ ಈಸೂರು ಗ್ರಾಮದ ಚಳವಳಿಗಾರರು ದೇಶದಲ್ಲಿಯೇ ಮೊದಲ ಬಾರಿಗೆ ತಾವು ಸ್ವತಂತ್ರರು ಎಂದು ಘೋಷಿಸಿಕೊಂಡಿದ್ದರು. ಈ ಹಳ್ಳಿಗೆ ತಾವೇ ಸರ್ಕಾರ ರಚಿಸಿಕೊಂಡಿದ್ದರು. ಬ್ರಿಟಿಷ್ ಆಳ್ವಿಕೆ ಇದ್ದರೂ ಗ್ರಾಮದಲ್ಲಿ ತಮ್ಮದೇ ಆದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದರು. ಗ್ರಾಮಕ್ಕೆ ಗ್ರಾಮವೇ ಚಳವಳಿಗೆ ಧುಮುಕಿತ್ತು. ಮಕ್ಕಳು, ವಯಸ್ಸಾದವರೂ, ಮಹಿಳೆಯರೂ, ಯುವಕರು ಸೇರಿದಂತೆ ಎಲ್ಲರೂ ಒಟ್ಟಾಗಿ ಸ್ವತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ, ಬ್ರಿಟಿಷ್ ಸರ್ಕಾರದ ಅಧಿಕಾರಿಗಳನ್ನು ಊರಿಗೆ ಬರದಂತೆ ತಡೆ ಹಾಕಿ, ಬೋರ್ಡ್ ಹಾಕುವಷ್ಟು. ಅವರಿಗೆ ಕಂದಾಯ ಕಟ್ಟುವುದನ್ನು ನಿಲ್ಲಿಸಿಬಿಡುತ್ತಾರೆ.
ಅಂದು, 1942 ಸೆಪ್ಟೆಂಬರ್ 25, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಗಾಂಧೀಜಿ ಘರ್ಜನೆಯ ಸ್ಫೂರ್ತಿಯಲ್ಲಿ, ಅಂದಿನ ಮೈಸೂರು ಸಂಸ್ಥಾನದ ಈಸೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇಶದ ಬಾವುಟ ಹಾರಿತು. ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಘೋಷಣೆ ನೆರೆದಿದ್ದ ಜನಸ್ತೋಮದಿಂದ ಮೊಳಗಿತು. ಕಂದಾಯ ಕಟ್ಟುವಂತೆ ಊರಿನ ಗ್ರಾಮಸ್ಥರಿಗೆ ಬ್ರಿಟಿಷ್ ಕಂದಾಯ ಅಧಿಕಾರಿಗಳು ತಾಕೀತು ಮಾಡಿದಾಗ ಅವರ ಲೆಕ್ಕದ ಪುಸ್ತಕವನ್ನೇ ಗ್ರಾಮಸ್ಥರು ಕಸಿದುಕೊಂಡರು. ಪಟೇಲ ಮತ್ತು ಶಾನುಭೋಗರ ದಫ್ತರುಗಳನ್ನು ಕಿತ್ತುಕೊಂಡು ಸುಟ್ಟು ಹಾಕಿದರು. ಗಾಂಧಿ ಟೋಪಿ ಧರಿಸುವಂತೆ ಆಗ್ರಹಿಸಿದರು. ಅಲ್ಲಿಂದ ನಿರ್ಗಮಿಸಿದ ಅಧಿಕಾರಿಗಳು ನೇರವಾಗಿ ಶಿಕಾರಿಪುರದ ಹವಾಲ್ದಾರ್ಗೆ ದೂರು ನೀಡಿದರು. ಇದಾದ ಮೂರು ದಿನಗಳ ನಂತರ ಒಬ್ಬ ಅಮಲ್ದಾರ್ ಮತ್ತು ಒಬ್ಬ ಪೊಲೀಸ್ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಪ್ರತಿಭಟನೆ ನಡೆಸಿದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿ 3 ಜನ ಗ್ರಾಮಸ್ಥರನ್ನು ಕೊಂದು ಹಾಕಿದರು. ಈ ಘಟನೆಯಿಂದ ಕ್ರೋಧಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಂಗೆಯೆದ್ದರು.
ಇದನ್ನೂ ಓದಿ | ಸ್ವಾತಂತ್ರ್ಯ ಅಮೃತ ಮಹೋತ್ಸವ | ಬ್ರಿಟಿಷರ ಗುಂಡಿಗೆ ಎದೆ ಕೊಟ್ಟಿದ್ದ ಹುಬ್ಬಳ್ಳಿಯ ಧೀರ ಬಾಲಕ
ಈಸೂರು ದಂಗೆಗೆ ಬೆಚ್ಚಿಬಿತ್ತು ದೇಶ:
ಅಂದು ಈಸೂರು ಚರಿತ್ರೆಯಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣದ ಮಹಾ ಪ್ರವಾಹದಲ್ಲಿ ಮರೆಯಲಾಗದ ಪ್ರಮುಖ ದಿನವಾಯಿತು. ಇಡೀ ದೇಶವೇ ಬೆಚ್ಚಿ ಬಿತ್ತು. ಊರಿಗೆ ಬ್ರಿಟಿಷ್ ಅಧಿಕಾರಿ ಪಡೆ ನುಗ್ಗಿದ್ದರಿಂದ ಊರಿನ ಜನಕ್ಕೂ ಅಧಿಕಾರಿಗಳಿಗೂ ನಡೆದ ಗಲಾಟೆಯಲ್ಲಿ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಸಬ್ ಇನ್ಸ್‌ಪೆಕ್ಟರ್ ಕೆಂಚೆಗೌಡ ಮೃತಪಟ್ಟರು. ಇವರಿಬ್ಬರನ್ನು ಗ್ರಾಮಸ್ಥರು ದೊಣ್ಣೆಯಿಂದ ಹೊಡೆದು ಸಾಯಿಸುತ್ತಾರೆ. ಈ ಸುದ್ದಿ ತಿಳಿದ ತಕ್ಷಣ ಬ್ರಿಟಿಷ್ ಸರ್ಕಾರ ಈಸೂರು ಗ್ರಾಮಕ್ಕೆ ಸೈನ್ಯ ಮತ್ತು ಪೊಲೀಸ್ ಪಡೆಯನ್ನು ಕಳಿಸಿತು. ಈ ಸೈನ್ಯವು ಮುಗ್ಧ ಜನರ ಮೇಲೆ ಚಿತ್ರಹಿಂಸೆಯನ್ನು ಕೊಟ್ಟಿತು. ಗುಂಡು ಹಾರಿಸಿ 41 ಜನರನ್ನು ಬಂಧಿಸಲಾಗುತ್ತದೆ. ಆಗ ಇಡೀ ಊರಿಗೆ ಮಿಲಿಟರಿ ಪಡೆ ನುಗ್ಗಿದ್ದರಿಂದ ಊರಿನ ಜನ ಕಾಡು ಸೇರಿದರು. ಈ ಸಂದರ್ಭ ಊರನ್ನು ಲೂಟಿ ಮಾಡಿದ ಮಿಲಿಟರಿ ಪಡೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿತು. ಕೊನೆಗೆ ಮಹಿಳೆಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನರ ಬಂಧನವಾಗುತ್ತದೆ. ಒಬ್ಬ ಮೃತಪಟ್ಟರೆ, ಒಬ್ಬ ಭೂಗತರಾಗುತ್ತಾರೆ. 22 ಜನರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದ ನಂತರ ಮೆಸೂರು ಮಹಾರಾಜರ ಪುತ್ರಿಯ ನಾಮಕರಣದ ಹೆಸರಲ್ಲಿ 12 ಮಂದಿಯನ್ನು ಬಿಡುಗಡೆ ಮಾಡಲಾಗುತ್ತದೆ. 24 ಜನರನ್ನು ಬಂಧಿಸಿ ಶಿವಮೊಗ್ಗ ಜೈಲಿನಲ್ಲಿ ಇಡಲಾಗಿರುತ್ತದೆ. ಅದರಲ್ಲಿ ಹನ್ನೊಂದು ಜನರಿಗೆ ಮರಣದಂಡನೆಯನ್ನು ಉಳಿದ ಹದಿಮೂರು ಜನರಿಗೆ ಜೀವಾವಧಿ ಶಿಕ್ಷೆಗೆ ಗುರಿಯಾಗಿಸಲಾಗುತ್ತದೆ.
ವೀರಮರಣ ಹೊಂದಿದರು:
ದಂಗೆಗೆ ಕಾರಣರಾದವರ ಮೇಲೆ ಸರ್ಕಾರ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಿತ್ತು. ಮೈಸೂರು ಉಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಪ್ರಮುಖ ಹೋರಾಟಗಾರರಾದ ಕೆ. ಗುರುಪ್ಪ ಮತ್ತು ಮಲ್ಲಪ್ಪ ಅವರನ್ನು 1943 ಮಾರ್ಚ್8 ರಂದು ಗಲ್ಲಿಗೇರಿಸಲಾಗುತ್ತದೆ. ಮರುದಿನ ಮಾ.9ರಂದು ಸೂರ್ಯನಾರಾಯಣಾಚಾರ್ ಮತ್ತು ಹಾಲಪ್ಪ, ತದ ನಂತರ ಮಾ.10ರಂದು ಶಂಕರಪ್ಪ ಗಲ್ಲಿಗೇರಿಸಲಾಗುತ್ತದೆ. ಈ ಘಟನೆಯಿಂದ ರಕ್ತಕ್ರಾಂತಿಯಲ್ಲಿ ಮಿಂದೆದ್ದ ಈಸೂರು ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸುತ್ತದೆ. ಗ್ರಾಮದ ಶಾಂತಿಯೇ ಕದಡಿ ಹೋಗಿ, ಈ ಘಟನೆಯಿಂದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚುತ್ತದೆ. ಬ್ರಿಟಿಷರಿಂದ ನಾವು ಸ್ವತಂತ್ರ ಎಂದು ಘೋಷಿಸಿಕೊಂಡರು.
ಇದನ್ನೂ ಓದಿ | Amrit mahotsav | ಸ್ವಾತಂತ್ರ್ಯ ಸಂಗ್ರಾಮದ ಸವಿ ನೆನಪು ಸಾರುವ ಗಾಂಧಿ ಗುಡಿ!
ದಿಟ್ಟ ಮಹಿಳೆಯರು:
ಈಸೂರು ದಂಗೆಯಲ್ಲಿ ಮಹಿಳೆಯರ ಪಾತ್ರವೂ ಪ್ರಮುಖವಾಗಿತ್ತು. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಮೂವರು ಮಹಿಳೆಯರಿಗೆ ಜೀವಾವಧಿ ಗಡಿಪಾರು ಶಿಕ್ಷೆಯನ್ನು ಮೈಸೂರು ಹೈಕೋರ್ಟ್ ನೀಡಿತ್ತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ದುರಂತವು ಸ್ಮರಣೀಯವಾಯಿತು.
ಕಿಚ್ಚು ಹಚ್ಚಿಸಿದ ಈಸೂರು ದಂಗೆ:
ದೇಶಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ ಬಾಯಲ್ಲಿ ಈಸೂರು ಗ್ರಾಮದ ರಕ್ತಚರಿತ್ರೆ ನಲಿದಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಇನ್ನಷ್ಟು ಸ್ಫೂರ್ತಿ ಸಿಕ್ಕಿತ್ತು. ಗಾಂಧೀಜಿ ಕೂಡ ಪ್ರತಿ ಭಾಷಣದಲ್ಲೂ ಈಸೂರು ಗ್ರಾಮದ ಹೋರಾಟ ಪ್ರಸ್ತಾಪಿಸುತ್ತಾ, ಸ್ವಾತಂತ್ರ್ಯ ಹೋರಾಟಗಾರರಿಗೆ ಹುರಿದುಂಬಿಸುತ್ತಿದ್ದರು. ಈಸೂರು ಗ್ರಾಮಕ್ಕೆ ಕಾಲಿಟ್ಟರೆ ಈಗಲೂ ಅಲ್ಲಿನ ಜನ ಈ ಘಟನೆಯನ್ನು ನೆನಪಿಸಿಕೊಂಡು ಬೀಗುತ್ತಾರೆ. ಈ ಗ್ರಾಮದಲ್ಲಿ ನಾವು ಹುಟ್ಟಿದ್ದೇ ಪುಣ್ಯ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ.
ಪ್ರವಾಸಿ ತಾಣವಾಗಲಿ:
ಸ್ವಾತಂತ್ರ್ಯ ಬಂದು 50 ವರ್ಷಗಳ ನಂತರ ಈ ಗ್ರಾಮದಲ್ಲಿ ಸರ್ಕಾರ ಹುತಾತ್ಮರ ನೆನಪಿಗಾಗಿ ಸ್ಮಾರಕ ನಿರ್ಮಿಸಿದೆ. ಊರಿಗೆ ಪ್ರವೇಶಿಸುತ್ತಿದ್ದಂತೆ ಕಾಣುವ ದೊಡ್ಡ ಧ್ವಜಸ್ತಂಭದಲ್ಲಿ “ಏಸೂರು ಕೊಟ್ಟರು ಈಸೂರು ಕೊಡೆವು” ಎಂಬ ಘೋಷವಾಕ್ಯ ಬರೆಯಲಾಗಿದೆ. ಸ್ಮಾರಕ ಭವನದ ಮುಂದೆ ಗಲ್ಲು ಶಿಕ್ಷೆಗೆ ಒಳಗಾದವರ ಹೆಸರನ್ನು ಕೆತ್ತಿಸಲಾಗಿದೆ. ಊರಿನಲ್ಲಿರುವ ಧ್ವಜಸ್ತಂಭದ ಎದುರು ಸ್ವಾತಂತ್ರ್ಯೋತ್ಸವ ದಿನದಂದು ಸಂಭ್ರಮ ಬಿಟ್ಟರೆ ಬೇರೇನೂ ನಡೆಯುವುದಿಲ್ಲ. ಶಿವಪುರದಲ್ಲಿ ನಡೆದ ಹೋರಾಟಕ್ಕಿಂತಲೂ ಮುಂಚೆಯೇ ಈಸೂರು ಹೋರಾಟ ನಡೆದಿತ್ತು. ಶಿವಪುರ ಮಾದರಿಯ ಸ್ಮಾರಕ ಈ ಗ್ರಾಮದಲ್ಲಿ ನಿರ್ಮಿಸಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ದಶಕಗಳ ಒತ್ತಾಯ. ಕೆಲ ವರ್ಷಗಳ ಹಿಂದೆ ಈಸೂರು ಗ್ರಾಮದ ಅಭಿವೃದ್ಧಿಗೆ ಸರ್ಕಾರ 12 ಕೋಟಿ ರೂ. ಘೋಷಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಬೃಹತ್ ಸ್ಮಾರಕ ನಿರ್ಮಿಸಿ, ಹೋರಾಟಗಾರರ ಮಾಹಿತಿ ನೀಡುವ ಒಂದು ಪ್ರವಾಸಿ ತಾಣವನ್ನಾಗಿಸಬೇಕು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಒಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಸ್ವಾಭಿಮಾನ, ದೇಶಾಭಿಮಾನ, ಶಾಂತಿ-ಕ್ರಾಂತಿ ಎರಡು ಚಿಂತೆಗಳ ಮೂಲಕ ಬ್ರಿಟಿಷರ ಆಡಳಿತಕ್ಕೆ ವಿರುದ್ಧವಾಗಿ ಮೊಟ್ಟಮೊದಲ ಬಾರಿಗೆ ಸ್ವಾತಂತ್ರ್ಯ ಘೋಷಿಸಿಕೊಂಡ ವೀರಪುತ್ರರ ನಾಡು ಈಸೂರಿನ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕಿದೆ.
ಇದನ್ನೂ ಓದಿ | Azadi ka Amrit Mahotsav | ಆಗಸ್ಟ್ 5ರಿಂದ 15ರವರೆಗೆ ಎಲ್ಲ ಸ್ಮಾರಕಗಳಿಗೆ ಪ್ರವೇಶ ಉಚಿತ