ಬೆಂಗಳೂರು: ಚಾಮರಾಜಪೇಟೆಯ ವಿವಾದಿತ ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಎಚ್ಚರಿಕೆ ನೀಡಿದ್ದಾರೆ. ಬಾಡಿಗೆ ಮನೆಗಳ ಮೇಲೂ ಕಣ್ಣಿಡಲಾಗಿದೆ.
ಚಾಮರಾಜಪೇಟೆ ಸುತ್ತ ಮುತ್ತ ಇರುವ ಅಪರಾಧ ಹಿನ್ನಲೆಯುಳ್ಳವರು, ರೌಡಿ ಶೀಟರ್ ಗಳಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದು, ಸಾಮಾನ್ಯರಾಗಿ ಬಂದು ಧ್ವಜಾರೋಹಣದಲ್ಲಿ ಭಾಗವಹಿಸಿದರೆ ಉತ್ತಮ. ಯಾರದ್ದೋ ಮಾತು ಕೇಳಿ ಅಥವಾ ಸಮಾಜದಲ್ಲಿ ಅಶಾಂತಿ ಹುಟ್ಟಿಸಲು ಅಶಾಂತಿ ಹುಟ್ಟಿಸಲು ಸ್ವಯಂ ಪ್ರೇರಿತ ಕೃತ್ಯದಲ್ಲಿ ಭಾಗವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ʻʻನೀವು ಮಾತ್ರವಲ್ಲ ನಿಮ್ಮ ಸಹಚರರು ಯಾವುದಾದರೂ ಕೃತ್ಯದಲ್ಲಿ ಭಾಗವಹಿಸಿದರೂ ಅದಕ್ಕೆ ನೀವೆ ಹೊಣೆʼʼ ಎಂದು ಡಾನ್‌ಗಳಿಗೆ ಎಚ್ಚರಿಕೆ ನೀಡಿರುವ ಪೊಲೀಸರು, ಗಡಿಪಾರು ಜೊತೆಗೆ ಅಕ್ರಮ ಕೂಟ, ಕ್ರಿಮಿನಲ್ ಸಂಚು ಪ್ರಕರಣ ದಾಖಲಿಸುತ್ತೇವೆ.
ಈಗಾಗಲೇ ರೌಡಿಗಳನ್ನು ಕರೆಸಿಕೊಂಡು ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಸೆಕ್ಷನ್ ೧೧೦ರ ಅಡಿ ಮುಚ್ಚಳಿಕೆ ಬಾಂಡ್ ಬರೆಸಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ರೌಡಿಗಳು, ಅಪರಾಧ ಹಿನ್ನೆಲೆಯವರು ಬಾಲ ಬಿಚ್ಚದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಜತೆಗೆ ಕುಕೃತ್ಯದ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕೆಂದು ಅಪರಾಧ ಹಿನ್ನೆಲೆಯುಳ್ಳವರಿಗೆ ಸೂಚನೆ ನೀಡಲಾಗಿದೆ.
ಚಾಮರಾಜಪೇಟೆ ಮೈದಾನ ಸುತ್ತ ಮತ್ತು ಕಟ್ಟಡಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕಟ್ಟಡದ ಮಾಲೀಕರ ಬಗ್ಗೆ ಮಾಹಿತಿ ಹಾಗು ಕಟ್ಟಡದಲ್ಲಿ ನೆಲಸಿರುವ ಬಾಡಿಗೆ ಮನೆಯವರ ಮನೆಯವರ ವಿವರವನ್ನೂ ಪೊಲೀಸರು ಕಲೆ ಹಾಕಿದ್ದಾರೆ. ಬಾಡಿಗೆ ಬಂದಿದ್ದರೆ ಅವರು ಎಷ್ಟು ದಿನದಿಂದ ಇದ್ದಾರೆ ಎನ್ನುವ ಮಾಹಿತಿ ಜತೆಗೆ ಯಾವ ಜಿಲ್ಲೆ, ಯಾವ ರಾಜ್ಯ ಎಂಬ ವಿವರವನ್ನೂ ಪಡೆದಿದ್ದಾರೆ. ಮಫ್ತಿಯಲ್ಲಿ ಕೂಡ ಕಾರ್ಯಚರಣೆ ನಡೆಸಲಾಗುತ್ತಿದೆ. ಮೈದಾನದ ಸುತ್ತ ಮುತ್ತ ಇರುವ ಕಟ್ಟಡದಲ್ಲಿ ಕೂಡ ಪೊಲೀಸರ ನಿಯೋಜನೆ ಮಾಡಲಾಗಿದೆ. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಕೂಡ ಈಗಾಗಲೆ ಪರಿಶೀಲನೆ ನಡೆಸಿದೆ.