| ರಾಜು ಪಾಟೀಲ್, ವಿಜಯಪುರ
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರ ಹಿಂದೆ ಅನೇಕ ಸಾಹಸಗಾತೆಗಳಿವೆ. ಅದಕ್ಕೆ ಸ್ಫೂರ್ತಿ ನೀಡುವ ಸಾಹಸ ಗೀತೆಗಳಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ (Amrit Mahotsav) ಈ ಸಂದರ್ಭದಲ್ಲಿ ಅಂಥದ್ದೊಂದು ಯಶೋಗಾಥೆಯು ಜಿಲ್ಲೆಯಲ್ಲಿ ನಡೆದಿದ್ದು, ಇದಕ್ಕೆ ಮೂಲ ಸ್ಥಾನವನ್ನು ಒದಗಿಸಿರುವುದು ಶ್ರೀಮಠ ಎಂಬ ರೋಚಕ ವಿಷಯವು ಹೆಮ್ಮೆಯನ್ನುಂಟು ಮಾಡುತ್ತದೆ.
ಗಾಂಧಿಯ ಮಾತಿಗೆ ಸಿಂದಿಯ ಗಿಡಕಡಿದ ||
ಪಿರಂಗಿಯರಿಗೆದರಿ ಶಿರ ಬಾಗಬ್ಯಾಡ್ರಿ || ಅಪ್ಪನ ||
ಮಠದಾಗ ದಂಡ ಸೇರೆದ ದೇಶ ಆಳಾಕ ||
ಹೀಗೆ ಜಾನಪದ ಸಾಲು ಕೇಳುತ್ತಿದ್ದರೆ ಪ್ರತಿಯೊಬ್ಬ ದೇಶಪ್ರೇಮಿಯ ಮೈ ರೋಮಾಂಚನಗೊಳ್ಳುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದಲ್ಲಿ ಧಾರ್ಮಿಕ ಮಠಗಳು ಮತ್ತು ಖಾದಿಗೂ ಬಹಳ ಗಟ್ಟಿಯಾದ ಸಂಬಂಧಗಳಿವೆ. ಅಂದಹಾಗೆ ನಾವು ಈಗ ನಿಮಗೆ ತೋರಿಸಲು ಮತ್ತು ಹೇಳಲು ಹೊರಟಿರುವುದು ಬಸವ ನಾಡಿನ ಸ್ವಾತಂತ್ರ್ಯ ಯೋಧರ ಗ್ರಾಮವೆಂದೇ ಪ್ರಸಿದ್ಧಿ ಪಡೆದಂತಹ ವಿಜಯಪುರ ಜಿಲ್ಲೆಯ ಮಸಬಿನಾಳ ಗ್ರಾಮದ ಮಠದ ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕತೆ.
ಬಸವನಬಾಗೇವಾಡಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಮಸಬಿನಾಳ ಗ್ರಾಮವು ಅಂದಿನ ತರ್ದವಾಡಿಯ ಸಾವಿರದ ಹಳ್ಳಿಗಳಲ್ಲಿ ಒಂದಾಗಿತ್ತು. 13ನೇ ಶತಮಾನದಲ್ಲಿ ದೇವಗಿರಿಯ ಯಾದವರು, 14ನೇ ಶತಮಾನದ ಪ್ರಾರಂಭದಲ್ಲಿ ತುಘಲಕ್‌ರ ಆಳ್ವಿಕೆಗೆ ಈ ಭಾಗ ಒಳಪಟ್ಟಿತ್ತು. ಬಹುಮನಿ ರಾಜ್ಯ ಸ್ಥಾಪನೆಯಾದಾಗ ಪ್ರಾರಂಭದಲ್ಲಿ ಅಂದಿನ ಗುಲ್ಬರ್ಗ (ಈಗಿನ ಕಲಬುರಗಿ) ಕೇಂದ್ರದಿಂದ, ನಂತರ ಬಿಜಾಪುರ (ಈಗಿನ ವಿಜಯಪುರ) ಸ್ವತಂತ್ರ ರಾಜ್ಯ ಸ್ಥಾಪನೆಯಾದಾಗ ಮಸಬಿನಾಳ ಅದರ ಅದೀನಕ್ಕೊಳಪಟ್ಟಿತ್ತು. ಹೀಗೆ 16ನೇ ಶತಮಾನದಲ್ಲಿ ವಿಜಯನಗರದ ಅರಸರು, ನಂತರ ಕೆಲವು ವರ್ಷ ಔರಂಗಜೇಬನು ಈ ಭಾಗವನ್ನು ಗೆದ್ದುಕೊಂಡನು. ತದನಂತರ 1760ರಲ್ಲಿ ಮರಾಠರು ಈ ಭಾಗವನ್ನು ವಶಪಡಿಸಿಕೊಂಡ ಆಳ್ವಿಕೆ ನಡೆಸಿದರು.
ಇದನ್ನೂ ಓದಿ | ಕ್ರಾಂತಿಯ ಕಿಡಿಗಳು ಅಂಕಣ | 24 ವರ್ಷ ಸೆರೆಯಲ್ಲಿದ್ದ ಸ್ವಾತಂತ್ರ್ಯ ಸೇನಾನಿ ಸೇತುಪತಿ
ಅಂದಿನ ಬಿಜಾಪುರವನ್ನು ಐದು ಭಾಗ ಮಾಡಿ ಹಂಚಿದಾಗ ಮನಗೂಳಿ ತಾಲೂಕಿನ ಹಳ್ಳಿಯಾದ ಮಸಬಿನಾಳವನ್ನು ಸೊಲ್ಲಾಪುರದ ರಾಜರು ಆಳತೊಡಗಿದರು. 1864ರಲ್ಲಿ ಮೊದಲಿದ್ದ ಹಿಪ್ಪರಗಿ ತಾಲೂಕನ್ನು ಸಿಂದಗಿಗೆ, ಮನಗೂಳಿ ತಾಲೂಕನ್ನು ಬಸವನಬಾಗೇವಾಡಿಗೆ ವರ್ಗಾಯಿಸಿ, ಹೊಸ ತಾಲೂಕು ರಚಿಸಿದಾಗ ಮಸಬಿನಾಳವು ಈಗಿನ ಬಸವನಬಾಗೇವಾಡಿ ತಾಲೂಕಿಗೆ ಸೇರಿತು. 1885ರಲ್ಲಿ ಈ ಮಸಬಿನಾಳ ಗ್ರಾಮವು ಬಿಜಾಪುರ ಜಿಲ್ಲೆ ಬಾಗೇವಾಡಿ ತಾಲೂಕಿನ ಹಳ್ಳಿಯಾಗಿ ಬ್ರಿಟಿಷರು ಆಳತೊಡಗಿದರು ಎಂಬುದು ಕೆಲವು ದಾಖಲೆಗಳಿಂದ ತಿಳಿದುಬರುತ್ತದೆ.
ಹೀಗೆ ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ದೇಶಾದ್ಯಂತ ಮಹಾತ್ಮ ಗಾಂಧೀಜಿ ಅವರ ಹತ್ತಾರು ಚಳವಳಿಗಳು, ದೇಶದ ಹಳ್ಳಿ-ಹಳ್ಳಿಗೂ ವ್ಯಾಪಿಸಿತ್ತು. ಈ ಸಮಯದಲ್ಲಿ ಈ ಮಸಬಿನಾಳ ಗ್ರಾಮದ ಯುವಕರಲ್ಲಿ ದೇಶಭಕ್ತಿಯು ಮೊಳಕೆಯೊಡೆಯಲು ಪ್ರಾರಂಭಿಸಿತು. ದೇಶಾದ್ಯಂತ ಚಳವಳಿಗಳು ಚುರುಕುಗೊಂಡಂತೆಲ್ಲ, ಮಸಬಿನಾಳ ಗ್ರಾಮದಲ್ಲಿಯೂ ಚಳವಳಿಯ ಭಾಗವಾಗಿ ಅನೇಕ ಚಟುವಟಿಕೆ ಗರಿಗೆದರಿತು. ಗ್ರಾಮದ ಯುವ ದೇಶಪ್ರೇಮಿಗಳ ಮನದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ, ಆಂಗ್ಲರ ಎದೆಬಗೆಯಲು ಸನ್ನದ್ಧರಾಗುವಂತೆ ಮಾಡಿದ್ದು, ಬೇರೆ ಯಾರೂ ಅಲ್ಲ, ಅವರೇ ಈ ನಾಡಿನಲ್ಲಿ ಸ್ವಾತಂತ್ರ್ಯ ಕ್ರಾಂತಿಯ ರೂವಾರಿಯಾಗಿದ್ದ ಕ್ರಾಂತಿ ಕೇಸರಿ ಶ್ರೀ ಶಿವಾನಂದ ಸ್ವಾಮೀಜಿ.
ಮಹಾತ್ಮ ಗಾಂಧೀಜಿ ಸೇರಿ ಹಲವು ನಾಯಕರ ಪ್ರಭಾವಕ್ಕೆ ಒಳಗಾಗಿದ್ದ ಶ್ರೀ ಶಿವಾನಂದ ಸ್ವಾಮೀಜಿ, ಅಂದು ಆರಂಭವಾಗಿದ್ದ ಸ್ವದೇಶಿ ಬಟ್ಟೆ ಬಳಕೆ, ಗಾಂಧಿ ಟೋಪಿ ಧರಿಸುವ ಚಳವಳಿ ಸೇರಿ ವಿವಿಧ ಚಳವಳಿಗಳಿಗೆ ಸಾಥ್ ನೀಡಿದ್ದರು. ಈ ನಿಟ್ಟಿನಲ್ಲಿ ಮಸಬಿನಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಡೆಯನ್ನು ಸಿದ್ಧಪಡಿಸುವ ಮಹತ್ವದ ಹೆಜ್ಜೆಯನ್ನಿಟ್ಟಿದ್ದರು. ಇವರು ಕ್ರಾಂತಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತದೆ. ಇವರ ಶಿಷ್ಯಂದಿರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇಡೀ ಮಸಬಿನಾಳ ಗ್ರಾಮದಲ್ಲಿ ಮನೆಗೊಬ್ಬ ಸ್ವಾತಂತ್ರ್ಯ ಹೋರಾಟಗಾರರು ಉದಯಿಸಲು ಕಾರಣವಾಯಿತು. ಈ ಗ್ರಾಮದಲ್ಲಿ ಅಂದಾಜು 150 ಯುವ ತರುಣರು ಆಂಗ್ಲರ ಹೆಡೆಮುರಿ ಕಟ್ಟಲು ಟೊಂಕಕಟ್ಟಿ ನಿಂತು, ವಿವಿಧ ಚಳವಳಿಗಳನ್ನು ಆರಂಭಿಸಿದರು.
ಆಗ ವಿಜಯಪುರದ ಜಿಲ್ಲಾ ಕಲೆಕ್ಟರ್ ಆಗಿದ್ದ ಹ್ಯಾಂಡರ್‌ಸನ್ ಎಂಬ ಅಧಿಕಾರಿಗೆ ಮಸಬಿನಾಳದ ಈ ವೀರರು ಬಹಳವೇ ಕಾಡಿದ್ದರು. ಈ ಕುರಿತಾಗಿ ಒಂದು ತ್ರಿಪದಿ ಹಾಡು ಇಂದಿಗೂ ಕೂಡ ಜನನುಡಿಯಲ್ಲಿ ಸಾರಿ ಸಾರಿ ಹೇಳುವಂತಿದೆ.
ಹ್ಯಾಂಡರಸನ್ನಗ ಹೆಂಡಿಯ ತಿನಿಸ್ಯಾರ ||
ಗಂಡಗಭುರುಗೋಳ ಮಸಬಿನಾಳ ತರುಣರು ||
ಸ್ವಾತಂತ್ರ್ಯ ಹೋರಾಟಗಾರರು ಒಂದಾಗಿ ||
ಈ ಗ್ರಾಮದಲ್ಲಿ ಇನ್ನೊಂದು ಪ್ರಮುಖವಾದ ಘಟನೆ ಎಂದರೆ, ಅದು 1922ರ ಸಮಯ ಆಗ ಶಿವಾನಂದ ಸ್ವಾಮೀಜಿಗೆ ದಾಸೋಹ ಸಂಸ್ಥಾನ ವಿರಕ್ತಮಠದ ಪಟ್ಟಾಭಿಷೇಕದ ದಿನ. ಅಕ್ಷರಶಃ ಅದು ಸ್ವಾತಂತ್ರ್ಯದ ಹೋರಾಟಕ್ಕೆ ಕಿಡಿ ಹೊತ್ತಿಸಿದ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಈ ನಾಡಿನಲ್ಲಿ ಮಠದ ಪಟ್ಟಾಭಿಷೇಕದ ದಿನವನ್ನು ಸ್ವಾತಂತ್ರ್ಯ ಹೋರಾಟದ ಸಮಾವೇಶವನ್ನಾಗಿ ಪರಿವರ್ತಿಸಿದ ಕೀರ್ತಿ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪಗೆ ಸಲ್ಲಬೇಕು.
ಪಟ್ಟಾಧಿಕಾರ ಕಾರ್ಯಕ್ರಮದ ಹೊಣೆ ಹೊತ್ತ ಬಂಥನಾಳ ಸಂಗನಬಸವ ಶ್ರೀಗಳು ಹರ್ಡೇಕರ ಅವರಿಗೆ ಅತಿಥಿಯಾಗಿ ಬರಲು ಆಮಂತ್ರಿಸುತ್ತಾರೆ. ಆಗ ಮಂಜಪ್ಪ ಅವರು ನಾನು ಯಾವುದೇ ಕಾರ್ಯಕ್ರಮಕ್ಕೆ ಬರಲು ನನ್ನದೇ ಆದ ಕೆಲವು ನಿಯಮಗಳಿವೆ. ಲಿಂಗದೀಕ್ಷೆ ಎಷ್ಟು ಮುಖ್ಯವೋ ಪ್ರಸ್ತುತ ಸಂದರ್ಭದಲ್ಲಿ ಖಾದಿ ದೀಕ್ಷೆ ಕೂಡ ಅತ್ಯಂತ ಮಹತ್ವದ್ದು, ನಿಮ್ಮ ಈ ಪಟ್ಟಾಧಿಕಾರದ ಕಾರ್ಯಕ್ರಮವು ಖಾದಿ ಚಳವಳಿ ಮತ್ತು ಗಾಂಧಿ ಟೋಪಿ ಚಳವಳಿಯ ಕಾರ್ಯಕ್ರಮವಾಗಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಅದಕ್ಕೆ ಸಮ್ಮತಿಸಿದ ಸಿದ್ಧಯ್ಯ ಪುರಾಣಿಕ, ವಚನ ಪಿತಾಮಹ ಫ.ಗು. ಹಳಕಟ್ಟಿ, ಕೌಜಲಗಿ ಹನುಮಂತರಾಯರು ಮುಂತಾದವರು ಹರ್ಷದಿಂದ ಒಪ್ಪಿಕೊಂಡರು. ಅದರಂತೆ ಕೆಲವರ ವಿರೋಧದ ನಡುವೆಯೂ ಧಾರ್ಮಿಕ ಕಾರ್ಯದೊಂದಿಗೆ ರಾಷ್ಟ್ರ ಧರ್ಮಕ್ಕೂ ಒತ್ತುಕೊಟ್ಟರು. ಗಾಂಧಿ ಟೋಪಿ ತೊಟ್ಟು, ವಿದೇಶಿ ಬಟ್ಟೆ ಸುಟ್ಟು, ಚಿಲಮೆಗಳನ್ನೆಲ್ಲ ಒಡೆದು ರಾಷ್ಟ್ರ ಕಟ್ಟುವ ಕೆಲಸಕ್ಕೆ ನಾಂದಿ ಹಾಡಿದರು.
ಸ್ವಾತಂತ್ರ್ಯದ ಕಿಡಿ ಹೊತ್ತಲು ಕಾರಣರಾದ ಪೂಜ್ಯ ಶಿವಾನಂದ ಸ್ವಾಮಿಗಳ ನಂತರ ಬಂದ ಪೂಜ್ಯ ಗುರುಸಿದ್ಧಸ್ವಾಮಿಗಳು, ತದನಂತರ ಪ್ರಸ್ತುತ ಶ್ರೀ ಮಠವನ್ನು ಮುನ್ನಡೆಸುತ್ತಿರುವ ಶ್ರೀ ಸಿದ್ದರಾಮ ಸ್ವಾಮಿಗಳು ಹೀಗೆ ಗ್ರಾಮದ ಜನರ ಶ್ರದ್ಧೆ, ಭಕ್ತಿಯಿಂದ ಶ್ರೀ ಗುರು ಮಠದ ಪರಂಪರೆಯೂ ಮುಂದುವರಿಯುತ್ತಿದೆ.
ಇದರ ಸ್ಮರಣಾರ್ಥವಾಗಿ, ಊರಿನ ಅಗಸಿಗೆ ಸ್ವಾತಂತ್ರ್ಯ ಯೋಧರ ಗ್ರಾಮ ಮಸಬಿನಾಳ ಎಂಬ ಶೀರ್ಷಿಕೆ ಮತ್ತು 1942ರಲ್ಲೇ ನಿರ್ಮಾಣ ಮಾಡಿದ ಗಾಂಧಿ ಸ್ಮಾರಕ ನಮಗೆಲ್ಲರಿಗೆ ಎದೆಯುಬ್ಬಿಸುವಂತೆ ಮಾಡುತ್ತದೆ. ಇಷ್ಟೆಲ್ಲ ಹೋರಾಟ ನಡೆಸಿ, ತಮ್ಮ ಬದುಕು ಸಮರ್ಪಣೆ ಮಾಡಿದ ವೀರ ಯೋಧರ ಮನೆಗಳು ಈ ಗ್ರಾಮದಲ್ಲಿ ಇಂದಿಗೂ ಕಾಣಸಿಗುತ್ತವೆ. ಆದರೆ, ಅವು ಬಂಗಲೆಯ ರೀತಿಯಲ್ಲಿ ಅಲ್ಲ, ವರ್ಷದಲ್ಲಿ ಎರಡು ಸಾರಿ ಅವರ ಆತ್ಮಕ್ಕೆ ಶಾಂತಿ ಕೋರುವ ನಾವುಗಳು ಈ ಮನೆಗಳನ್ನು ನೋಡಿಯಾದರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಇದನ್ನು ಓದಿ | ಸ್ವಾತಂತ್ರ್ಯ ಅಮೃತ ಮಹೋತ್ಸವ | ಪ್ರತಿದಿನ 1.5 ಲಕ್ಷ ಧ್ವಜ ತಯಾರಿಸುವ ʻಬಾವುಟದ ಮಾಮʼ