ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ನಡೆಯುವ ಧ್ವಜಾರೋಹಣದ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ. ಬೆಳಗ್ಗೆ ೮ ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಅದಕ್ಕಾಗಿ ಎಲ್ಲ ರೀತಿಯಲ್ಲಿ ಸಿದ್ಧತೆ ನಡೆದಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ದೊಡ್ಡ ಮಟ್ಟದಲ್ಲಿ ಭದ್ರತೆಯ ನಿಯೋಜಿಸಲಾಗಿದ್ದು, ಅದರ ನಡುವೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಮೈದಾನಕ್ಕೆ ಬರುತ್ತಿದ್ದಾರೆ. ಕಾರ್ಯಕ್ರಮ ಪಟ್ಟಿಯ ಪ್ರಕಾರ, ಮೊದಲು ರಾಷ್ಟ್ರಗೀತೆ, ನಂತರ ನಾಡಗೀತೆ, ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಚಾಮರಾಜಪೇಟೆ ಬಾಲಕಿಯರ ಪ್ರೌಢಶಾಲೆ ಮಕ್ಕಳಿಂದ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಝಂಡಾ ಉಂಛಾ ರಹೇ ಹಮಾರಾ ಸಾಮೂಹಿಕ ಗೀತೆ ಭೋರ್ಗರೆಯಲಿದೆ. ಬಿಬಿಎಂಪಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ವೀರಗಾಸೆ, ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮಕ್ಕಳಿಂದ ದೇಶ ಭಕ್ತಿ ನೃತ್ಯ ಗೀತೆ ಮೇಳೈಸಲಿದೆ. ಸರ್ವೋತ್ತಮ ಪ್ರೌಢ ಶಾಲೆ ಮಕ್ಕಳಿಂದ ದೇಶಭಕ್ತಿ ಗೀತೆ ನೃತ್ಯ ಆಯೋಜನೆಗೊಂಡಿದೆ. ಸುಮಾರು ಒಂದು ಗಂಟೆಗಳ ಕಾರ್ಯಕ್ರಮ ನಿಗದಿ ಪಡಿಸಲಾಗಿದ್ದು ೯ ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.
ಖಾಕಿಯ ಹದ್ದಿನ ಕಣ್ಣು
ಪೊಲೀಸರು ಇಡೀ ನಗರದ ಮೇಲೆ ಹದ್ದುಗಣ್ಣಿಟ್ಟಿದ್ದು, 8 ವಿಭಾಗದಲ್ಲಿ ಡಿಸಿಪಿಗಳು ಅಲರ್ಟ್ ಆಗಿದ್ದಾರೆ.
ಚಾಮರಾಜಪೇಟೆಯಲ್ಲಿ ಮೈದಾನದ ಸುತ್ತಲೂ ಪೊಲೀಸ್ ಕಣ್ಗಾವಲು ಇಡಲಾಗಿದ್ದು, 200ಕ್ಕೂ ಅಧಿಕ ಸಿಬ್ಬಂದಿ ಭದ್ರತೆಗೆ ನಿಯೋಜನೆ ಆಗಿದೆ. ಎರಡು ಕೆ.ಎಸ್.ಆರ್.ಪಿ ತುಕಡಿ ಗ್ರೌಂಡ್ ನಲ್ಲಿದೆ. ಮೈದಾನದ ಸುತ್ತ ಮುತ್ತ ಫ್ಲೆಕ್ಸ್, ಧ್ವಜಗಳ ಮೇಲೆ ಪೊಲೀಸರ ನಿಗಾ ಇಟ್ಟಿದ್ದಾರೆ.
ಮೈದಾನದ ಸುತ್ತಮುತ್ತಲಿನ ಪ್ರತೀ ರಸ್ತೆಗಳಲ್ಲೂ ಪೊಲೀಸ್ ಭದ್ರತೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಪ್ರತೀ ವಾಹನಗಳನ್ನೂ ಚೆಕ್ ಮಾಡಲಾಗುತ್ತಿದೆ. ಆರ್.ಎ.ಎಫ್.ಪಡೆ ಸಂಪೂರ್ಣ ಮೈದಾನ ಸುತ್ತುವರೆದಿದೆ. 250 ರಿಂದ 300 ಮಂದಿ RAF ಸಿಬ್ಬಂದಿಯಿಂದ ಭದ್ರತೆ ಏರ್ಪಡಿಸಲಾಗಿದೆ.
ಕೆ.ಎಸ್.ಆರ್.ಪಿ 10 ತುಕಡಿ, SWAT ಸ್ಪೇಷಲ್ ಫೋರ್ಸ್ ನ 104 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಭದ್ರತೆ ನೀಡಲಾಗುತ್ತಿದೆ.