Site icon Vistara News

Sharath Babu : ʼಅಮೃತವರ್ಷಿಣಿʼಯಿಂದ ಕನ್ನಡಿಗರ ಮನ ಗೆದ್ದಿದ್ದ ಶರತ್‌ ಬಾಬು; ಬಹುಭಾಷಾ ನಟನ ನಿಧನಕ್ಕೆ ಕಂಬನಿ

sharath babu passes away

ಹೈದರಾಬಾದ್:‌ ಅಮೃತವರ್ಷಿಣಿ ಸಿನಿಮಾ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ದಕ್ಷಿಣ ಭಾರತದ ಬಹುಭಾಷಾ ನಟ (Sharath Babu) ಶರತ್‌ ಬಾಬು (74) ಅವರ ನಿಧನಕ್ಕೆ ಸ್ಯಾಂಡಲ್‌ವುಡ್‌ ಕಲಾವಿದರ ಸಹಿತ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶರತ್‌ ಬಾಬು ಅವರು ಕಳೆದ ಹಲವು ದಿನಗಳಿಂದ ಹೈದರಾಬಾದ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ಮೇ 22) ನಿಧನರಾಗಿದ್ದಾರೆ.

ಕನ್ನಡ, ತಮಿಳು, ತೆಲುಗು ಸೇರಿ ಹಲವು ಭಾಷೆಗಳಲ್ಲಿ ನಟಿಸಿದ್ದ ಶರತ್‌ ಬಾಬು ಅವರ ಸಹಜ ಅಭಿನಯಕ್ಕೆ ಸಿನಿರಸಿಕರು ಮಾರು ಹೋಗಿದ್ದರು. ಅವರ ನಟನೆ ಎಲ್ಲರನ್ನೂ ಹಿಡಿದಿಟ್ಟಿತ್ತು. ಅವರ ಭಾಷಾ ಪ್ರೌಢಿಮೆ, ಸೌಮ್ಯ ಸ್ವಭಾವವು ಅವರ ನಟನೆಗೆ ಮತ್ತಷ್ಟು ಮೆರುಗನ್ನು ತಂದಿದ್ದವು. ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಅಭಿಮಾನಿಗಳು ಶೋಕತಪ್ತರಾಗಿದ್ದಾರೆ.

ತುಳಸಿದಳ ಅವರ ಮೊದಲ ಸಿನಿಮಾ

1984ರಲ್ಲಿ ಶರತ್‌ ಬಾಬು ಅವರು ಸ್ಯಾಂಡಲ್‌ವುಂಡ್‌ ಪ್ರವೇಶ ಮಾಡಿದ್ದರು. ಕನ್ನಡದಲ್ಲಿ ತುಳಸಿದಳ ಅವರ ಮೊದಲ ಸಿನಿಮಾವಾಗಿದೆ. ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಶರತ್‌ ಬಾಬು, ಹಲವು ಕನ್ನಡ ಸಿನಿಮಾಗಳ ಮೂಲಕ ಮನೆಮಾತಾಗಿದ್ದಾರೆ.

ಅಮೃತ ವರ್ಷಿಣಿಯಲ್ಲಿ ಮಿಂಚಿದ್ದ ನಟ

1997ರಲ್ಲಿ ಬಿಡುಗಡೆಯಾದ ಅಮೃತವರ್ಷಿಣಿ ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಇದರಲ್ಲಿ ಅವರ ಹೇಮಂತ್‌ ಪಾತ್ರವು ಕರ್ನಾಟಕದಲ್ಲಿ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು. ಸುಹಾಸಿನಿಯ ಪತಿಯಾಗಿ ಅಭಿನಯಿಸಿದ್ದ ಅವರ ಸಹಜ ನಟನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸುಹಾಸಿನಿಯ ಮೇಲಿನ ಮೋಹದಿಂದಾಗಿ ಶರತ್‌ಬಾಬು ಅವರನ್ನು ಕೊಲ್ಲುವ ಪಾತ್ರದಲ್ಲಿ ರಮೇಶ್‌ ಅರವಿಂದ್‌ ನಟಿಸಿದ್ದರು. ಈ ಚಿತ್ರದ ಹಾಡುಗಳನ್ನು ಈಗಲೂ ಕನ್ನಡಿಗರು ಗುನುಗುತ್ತಿರುತ್ತಾರೆ.

ಟಿ ಎಸ್‌ ನಾಗಾಭರಣ ಅವರ ನೀಲಾ ಚಿತ್ರದಲ್ಲೂ ಶರತ್‌ ಬಾಬು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ರಣಚಂಡಿ, ಗಾಯ, ಉಷಾ, ಓ ಪ್ರಿಯತಮಾ, ಬೃಂದಾವನ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.

200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

ಶರತ್‌ ಬಾಬು ಅವರು ಕನ್ನಡ, ಮಲಯಾಳಂ, ತಮಿಳು, ಹಿಂದಿ ಸೇರಿ ಹಲವು ಭಾಷೆಗಳ 230ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ರಾಮ ರಾಜ್ಯಂ ಎಂಬ ತೆಲುಗು ಸಿನಿಮಾ ಮೂಲಕ ಸಿನಿ ರಂಗ ಪ್ರವೇಶಿಸಿದ್ದ ಅವರು ವಿಭಿನ್ನ ಪಾತ್ರಗಳ ಮೂಲಕ ಜನರ ಮನ ಗೆದ್ದಿದ್ದರು. ಅದರಲ್ಲೂ, 1978ರಲ್ಲಿ ಕೆ. ಬಾಲಚಂದರ್‌ ನಿರ್ದೇಶನದ ನಿಜಲ್‌ ನಿಜಮಾಗಿರಧು ಸಿನಿಮಾ ಶರತ್‌ ಅವರಿಗೆ ಬ್ರೇಕ್‌ ನೀಡಿತು. ಈ ಸಿನಿಮಾದ ನಟನೆಗಾಗಿ ಶರತ್‌ ಅವರಿಗೆ ಆಂಧ್ರಪ್ರದೇಶದ ಪ್ರತಿಷ್ಠಿತ ಎಂಟು ನಂದಿ ಪ್ರಶಸ್ತಿಗಳು ಲಭಿಸಿದ್ದವು.

ಇದನ್ನೂ ಓದಿ: 2000 Notes Withdrawn : 2,000 ರೂ. ನೋಟು ಬದಲಿಸಲು ಬರುವವರಿಗೆ, ನೀರು, ನೆರಳಿನ ವ್ಯವಸ್ಥೆಗೆ ಆರ್‌ಬಿಐ ಸೂಚಿಸಿದ್ದೇಕೆ?

ಅನಾರೋಗ್ಯಕ್ಕೆ ಕಾರಣ ಏನು?

ಶರತ್‌ ಬಾಬು ಅವರು ಸುದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ, ಲಿವರ್‌, ಶ್ವಾಸಕೋಶ ಸೇರಿ ಹಲವು ಅಂಗಾಂಗಗಳ ತೊಂದರೆಯಿತ್ತು. ಕಳೆದ ಕೆಲ ದಿನಗಳಿಂದ ಅವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಂತಾಜನಕ ಸ್ಥಿತಿಯಲ್ಲಿರುವ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಕೊನೆಗೂ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನಿಂದ ಚೆನ್ನೈಗೆ ತರಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಸೇರಿದಂತೆ ಹಲವರು ಶರತ್‌ ಬಾಬು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version