Site icon Vistara News

ಯಕ್ಷಗಾನದಲ್ಲಿ ವಿನೂತನ ಪ್ರಯೋಗ: ಮಕ್ಕಳಿಗೆ ಯಕ್ಷಗಾನದ ಮೂಲಕ ಗಣಿತ ಕಲಿಕೆ

ಯಕ್ಷಗಾನ

ಶಿರಸಿ: ಗಣಿತ ಎಂದು ಹೇಳಿದರೆ ಎಲ್ಲರೂ ಮೂಗು ಮುರಿಯುತ್ತಾರೆ. ಅಂತಹ ʼಕಬ್ಬಿಣದ ಕಡಲೆʼ ಗಣಿತವನ್ನು ಯಕ್ಷಗಾನದ ಮೂಲಕ ಸುಲಭವಾಗಿ ಕಲಿಸುವ ಪ್ರಯೋಗವೊಂದು ನಡೆದಿದೆ. ಶಿರಸಿ ನಗರದ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಸುಳ್ಯ ಪ್ರಜ್ಞಾ ಯಕ್ಷಗಾನ ಕಲಾ‌ ಶಾಲೆ, ಮಾರಿಕಾಂಬಾ ಸರಕಾರಿ ಪ್ರೌಢಶಾಲೆ, ಗಣಿತ ಶಿಕ್ಷಕರ ಸಂಘ, ಆರ್ಯಭಟ ಗಣಿತ ಸಂಘ ಜಂಟಿಯಾಗಿ ಈ ಪ್ರಯೋಗ ನಡೆಸಲಾಗಿದೆ.

ಏನಿದು ಸಂಖ್ಯಾ ಶಾಸ್ತ್ರ ತಾಳಮದ್ದಲೆ?
ಸಂಖ್ಯೆ ಅಂಕೆಗಳನ್ನು ತಾಳ ಬಧ್ದವಾಗಿ ಸ್ವರಗಳಲ್ಲಿ, ತಾಳಧಾರಿಗಳಾದ ಭಾಗವತರು ಮೃದಂಗ ವಾದನದ ಮೇಳವಿಟ್ಟುಕೊಂಡು ಆಖ್ಯಾನವನ್ನು ಹೇಳುವುದಕ್ಕೆ ʼಸಂಖ್ಯಾ ಶಾಸ್ತ್ರ ತಾಳ ಮದ್ದಳೆʼ ಎಂದು ಹೇಳುತ್ತಾರೆ. ಯಕ್ಷಗಾನದ ಮೊದಲ ಹಂತ ಈ ತಾಳಮದ್ದಳೆಯೆಂದು ಹೇಳುತ್ತಾರೆ.

ನಾಲ್ಕಾರು ಜನ ಒಂದೆಡೆ ಸೇರಿಕೊಂಡು ಒಂದು ಕಥೆಯಲ್ಲಿನ ಬೇರೆ ಬೇರೆ ಪಾತ್ರಗಳ ಚಿತ್ರಣವನ್ನು ಪದ್ಯಗಳ ಆಧಾರದ ಮೇಲೆ ತಮ್ಮ ಪ್ರತಿಭೆಯಿಂದ ಮಾತಿನ ಮೂಲಕ ಚಿತ್ರಿಸುತ್ತಾರೆ. ಆದರೆ ʼಸಂಖ್ಯಾ ಶಾಸ್ತ್ರ ತಾಳ ಮದ್ದಳೆʼಯಲ್ಲಿ ಬೇರೆ ಬೇರೆ ಪಾತ್ರಗಳಿರದೆ ಸಂಖ್ಯಾ ಶಾಸ್ತ್ರದ ಸಂಖ್ಯೆ ಅಂಕೆಗಳು ಇರುತ್ತವೆ.

ಹವ್ಯಾಸಿ ಕಲೆಯಾಗಿ ಬೆಳೆದುಬಂದಿರುವ ಈ ಕಲೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುತ್ತದೆ. ಆದರೆ ಈ ಸಂಖ್ಯಾ ಶಾಸ್ತ್ರ ತಾಳಮದ್ದಲೆಯನ್ನು ಮಕ್ಕಳಿಗಾಗಿ ತಯಾರಿಸಲಾಗಿದೆ. ಒಂಭತ್ತನೇ ಪ್ರೌಢಶಾಲಾ ಗಣಿತ ಕಲಿಕೆಯು ವಿದ್ಯಾರ್ಥಿಗಳಿಗೆ ಸುಲಭವಾಗಲು ಹಾಗೂ ಆನಂದದಾಯಕವಾಗಲು ಉದ್ದೇಶಿಸಿ ಬಳಕೆ ಮಾಡಲಾಗಿದೆ. ಒಂಭತ್ತನೇ ತರಗತಿ ಸಂಖ್ಯಾ ಪದ್ದತಿ ಎಂಬ ಅಧ್ಯಾಯದಲ್ಲಿ ಬರುವ ವಿವಿಧ ಕಲಿಕಾಂಶಗಳನ್ನು ಒಳಗೊಂಡಂತೆ ಸಂಖ್ಯಾ ಸಾಮರಸ್ಯ ಎಂಬ ಈ ಪ್ರಸಂಗ ರಚಿತವಾಗಿದೆ.

ಕಲಾ ಸಂಯೋಜಿತ ಕಲಿಕೆಗೆ ಪೂರಕವಾಗಿ ಗಣಿತ ಕಲಿಕೆಯನ್ನು ಯಕ್ಷಗಾನ ಕಲೆಯ ಮೂಲಕವೂ ದೃಢೀಕರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಡೆದ ಪ್ರಯತ್ನ ಗಣಿತ ಯಕ್ಷಗಾನ ತಾಳಮದ್ದಳೆ. ಒಂದು ವಿಷಯದ ಪ್ರಸ್ತುತಿ, ವಿಸ್ತರಣೆ, ವಿಮರ್ಶೆಗೆ ಯಕ್ಷಗಾನ ತಾಳಮದ್ದಳೆ ಪರಿಣಾಮಕಾರಿ ಮಾಧ್ಯಮವಾಗಿದೆ.

ವಿವಿಧ ಸಂಖ್ಯೆಗಳು ಪಾತ್ರಗಳಾಗುವುದರ ಮೂಲಕ ಕಲಿಕಾಂಶಗಳ ಕಲಿಕೆಯ ಆಳ ಹಾಗೂ ಹರವನ್ನು ವಿಸ್ತರಿಸಲಾಗಿದೆ. ಇದಕ್ಕೆ ಸರಿಯಾದ ಪದ್ಯ ರಚನೆ, ಗಣಿತ ಹಾಗೂ ಯಕ್ಷಗಾನದ ಚೌಕಟ್ಟಿಗೆ ಯಾವುದೇ ಭಂಗವಾಗದಂತೆ ತಾಳಮದ್ದಳೆ ಸಾಗುವದು ವಿಶೇಷವಾಗಿದೆ.

ಇದೀಗ ವಿಶೇಷವಾಗಿ ವಿದ್ಯಾರ್ಥಿಗಳಿಂದಲೇ ಯಕ್ಷಗಾನ ಹಿಮ್ಮೇಳ ಹಾಗೂ ಪ್ರೌಢಶಾಲಾ ಗಣಿತ ಶಿಕ್ಷಕರಿಂದಲೇ ಅರ್ಥಗಾರಿಕೆಯ ಸಮನ್ವಯತೆಯೊಂದಿಗೆ ಗಣಿತ ಯಕ್ಷಗಾನ ತಾಳಮದ್ದಳೆ ಮೂಡಿಬಂದಿದೆ. ಇದು ವಿದ್ಯಾರ್ಥಿಗಳ, ಶಿಕ್ಷಕರ, ಇಲಾಖೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಪುಸ್ತಕ ಪ್ರಾಧಿಕಾರ ಬಹುಮಾನ, ಡಾ.ಆಳ್ವ, ಕಾಪಸೆ, ನಾ. ಸೋಮೇಶ್ವರಗೆ ಪ್ರಶಸ್ತಿ

Exit mobile version