ವಿಜಯನಗರ: ರಾಜ್ಯ ರಾಜಕೀಯದಲ್ಲಿ ಚುನಾವಣೆ ಕಾವು ಏರತೊಡಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಗೆ (Karnataka Election 2023) ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಳ್ಳುತ್ತಲೇ ಇವೆ. ಈ ವೇಳೆ ವಿಜಯನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ವರಿಷ್ಠರ ವಿರುದ್ಧ ಅವರು ಸಿಡಿದೆದ್ದಿದ್ದಾರೆ. ಕುಟುಂಬ ರಾಜಕೀಯದ ಪ್ರಸ್ತಾಪ ಮಾಡಿದ್ದು, ಸಚಿವ ಆನಂದ್ ಸಿಂಗ್ ಮತ್ತವರ ಮಗನನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕೀಯ ಮಾಡುವುದಿಲ್ಲ ಎಂದು ಬಿಜೆಪಿ ಹೇಳುತ್ತಲೇ ಕುಟುಂಬ ರಾಜಕೀಯ ಮಾಡುತ್ತಲಿದೆ. ಸಚಿವ ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್‌ಗೆ ಟಿಕೆಟ್ ಕೊಟ್ಟಿರುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಆಗಿರುವ ರಾಣಿ ಸಂಯುಕ್ತ ಬಿಜೆಪಿ ವರಿಷ್ಠರ ಮೇಲೆ ಸಖತ್ ಗರಂ ಆಗಿದ್ದು, ಬೇರೆ ಪಕ್ಷದಂತೆ ಕುಟುಂಬ ರಾಜಕೀಯ ಮಾಡುವುದಿಲ್ಲ ಎನ್ನುವ ಬಿಜೆಪಿ ಇದೀಗ ಮಾಡುತ್ತಿರುವುದು ಏನು? ಜೆಡಿಎಸ್ ಹಾಗೂ ಕಾಂಗ್ರೆಸ್‌ಗೂ ಮತ್ತು ಈಗ ಬಿಜೆಪಿಗೂ ಇರು ವ್ಯತ್ಯಾಸವೇನು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Crorepati Chief Ministers: ದೇಶದ 30 ಸಿಎಂಗಳಲ್ಲಿ ದೀದಿ ಬಿಟ್ಟು 29 ಜನ ಕೋಟ್ಯಧೀಶರು, ಶ್ರೀಮಂತ ಸಿಎಂ ಯಾರು?
ಆನಂದ್ ಸಿಂಗ್ ನನಗೆ ಸಹೋದರ ಇರಬಹುದು. ಆದರೆ, ಇದೀಗ ನಾನು ಮದುವೆಯಾಗಿ ಮನೆಯಿಂದ ಹೊರಗೆ ಬಂದಿರುವೆ. ಆನಂದ್ ಸಿಂಗ್‌ಗೂ ನಮಗೂ ಅವರಿಗೂ ಸಂಬಂಧವಿಲ್ಲ. ಪಕ್ಷದ ನಿಲುವು ನನಗೆ ಬಹಳಷ್ಟು ಬೇಸರವನ್ನು ತಂದಿದೆ. ಪಕ್ಷದಲ್ಲಿ ಇರಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಬಹುತೇಕ ಪಕ್ಷ ಬಿಡುವುದು ಖಚಿತ ಎನ್ನುವ ಸಂದೇಶವನ್ನು ಅವರು ರವಾನೆ ಮಾಡಿದ್ದಾರೆ.
ಕಾಂಗ್ರೆಸ್ ಬೆಂಬಲ ನೀಡಬೇಕೋ? ಪಕ್ಷೇತರರಾಗಿ ಕಣಕ್ಕಿಳಿಯೋ ಬೇಕೋ ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ. ಪರೋಕ್ಷವಾಗಿ ಆನಂದ್ ಸಿಂಗ್ ಪಕ್ಷಕ್ಕೆ ಬೆದರಿಕೆ ಹಾಕುವ ಮೂಲಕ ಮಗನಿಗೆ ಟಿಕೆಟ್ ಪಡೆದಿದ್ದಾರೆ. ಇನ್ನು ನಾನು ಆನಂದ್ ಸಿಂಗ್ ಮತ್ತವರ ಮಗನನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ರಾಣಿ ಸಂಯುಕ್ತ ಹೇಳಿದ್ದಾರೆ.
ವಿಜಯನಗರ ಟೆಂಪಲ್ ರನ್
ವಿಜಯನಗರ ಕ್ಷೇತ್ರದ ಬಿಜೆಪಿ ಟಿಕೆಟ್ ತಮಗೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿ ಸಿದ್ಧಾರ್ಥ ಸಖತ್ ಆ್ಯಕ್ಟಿವ್ ಆಗಿದ್ದು, ತಂದೆ, ಸಚಿವ ಆನಂದ್ ಸಿಂಗ್ ಅವರ ಜತೆಗೆ ಟೆಂಪಲ್ ರನ್ ಆರಂಭಿಸಿದ್ದಾರೆ.
ಇದನ್ನೂ ಓದಿ: Karnataka Election 2023 : ಕನಕಪುರ, ವರುಣದಲ್ಲಿ ಸಂತೋಷ್, ಜೋಷಿಯವರನ್ನು ಕಣಕ್ಕಿಳಿಸಿ; ಕಾಂಗ್ರೆಸ್ ಪಂಥಾಹ್ವಾನ
ಟಿಕೆಟ್ ಘೋಷಣೆ ಬೆನ್ನಲ್ಲೇ ಹಂಪಿಗೆ ಭೇಟಿ ನೀಡಿರುವ ತಂದೆ ಹಾಗೂ ಮಗ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಬಳಿಕ ಹಂಪಿ ವಿರೂಪಾಕ್ಷನ ದರ್ಶನ ಪಡೆದಿದ್ದಾರೆ. ದರ್ಶನ ಪಡೆದ ನಂತರ ತಂದೆ ಆನಂದ್ ಸಿಂಗ್‌ರಿಂದ ಮಗನಿಗೆ ಸಿಹಿ ಹಂಚಿಕೆ ಮಾಡಲಾಗಿದೆ. ಬಳಿಕ ಅಭಿಮಾನಿಗಳು, ಕಾರ್ಯಕರ್ತರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು. ವಿರೂಪಾಕ್ಷ ದೇವಸ್ಥಾನದ ಆನೆ ಲಕ್ಷ್ಮಿಯಿಂದ ಹೂಮಾಲೆಯ ಆಶೀರ್ವಾದವನ್ನು ಸಿದ್ಧಾರ್ಥ ಪಡೆದುಕೊಂಡರು.
ಬಳಿಕ ಮಾತನಾಡಿದ ಆನಂದ್ ಸಿಂಗ್, ರಾಜ್ಯ ಹಾಗೂ ರಾಷ್ಟ್ರ ನಾಯಕರ ಆಶಯದಂತೆ ಯುವಕರಿಗೆ ಪಕ್ಷದಿಂದ ಮನ್ನಣೆ ನೀಡಲಾಗಿದೆ. ಹೀಗಾಗಿ ಸಿದ್ಧಾರ್ಥ ಸಿಂಗ್‌ಗೆ ಟಿಕೆಟ್ ದಕ್ಕಿದೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಿದೆ. ಸಿದ್ಧಾರ್ಥ ಸಿಂಗ್ ಗೆಲ್ಲಲಿದ್ದಾರೆ, ಅವರ ಗೆಲುವಿಗೆ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ ಎಂದು ತಿಳಿಸಿದರು.
ಸದ್ಯಕ್ಕೆ ನಾನು ಮತ್ಯಾವ ಕ್ಷೇತ್ರದ ಕುರಿತು ಯೋಚಿಸಿಲ್ಲ. ಸಮಾಜ ಸೇವೆಯೊಂದೇ ನನ್ನ ಮುಂದಿನ ಗುರಿ. ಅಂಬೆಗಾಲಿಟ್ಟಿರೂ ಹೊಸ ಜಿಲ್ಲೆಯ ಅಭಿವೃದ್ಧಿಯನ್ನು ಚಿರತೆಯ ವೇಗದ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. ಡಬಲ್ ಎಂಜಿನ್ ಸರ್ಕಾರದಂತೆ ನಾನು ಸಿದ್ಧಾರ್ಥ ಸಿಂಗ್ ಈ ಕಾರ್ಯದಲ್ಲಿ ತೊಡಗುತ್ತೇವೆ. ನಾನು ಮುಂದಿನ ಕ್ಷೇತ್ರ ಯಾವುದು ಎಂದು ತೀರ್ಮಾನ ಮಾಡಿಲ್ಲ. ಸದ್ಯ ಜನ ಸೇವೆ ಮಾಡುವ ಯೋಚನೆಯನ್ನು ಹೊಂದಿದ್ದೇನೆ. ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ನನಗೆ ಪಕ್ಷ ಯಾವುದೇ ಸೂಚನೆ ನೀಡಿಲ್ಲ. ಹಾಗೇನಾದರೂ ಸ್ಪರ್ಧೆ ಮಾಡಬೇಕು ಎಂದಿದ್ದರೆ ಮೊದಲು ನಮಗೆ ಪಕ್ಷ ಸೂಚನೆ ನೀಡುತ್ತದೆ. ನಾನು ಆ ರೀತಿಯಲ್ಲಿ ಯಾವುದೇ ಯೋಚನೆ ಮಾಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: BJP Karnataka: ಟಿಕೆಟ್ ಘೋಷಣೆ ಬೆನ್ನಲ್ಲೇ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ದೇವರ ಮೊರೆ ಹೋದ ಸಿಎಂ ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್. ಗವಿಯಪ್ಪ ಅವರ ಬಗ್ಗೆ ಆನಂದ್ ಸಿಂಗ್ ಪ್ರತಿಕ್ರಿಯೆ ನೀಡಿ, ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದು ಹೇಳಿದರು.
ರಾಣಿ ಸಂಯುಕ್ತ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಎಚ್ ಆರ್. ಗವಿಯಪ್ಪ ಭೇಟಿ
ಬಿಜೆಪಿಯಿಂದ ರಾಣಿ ಸಂಯುಕ್ತಾಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಎಚ್ ಆರ್. ಗವಿಯಪ್ಪ ಭೇಟಿ ನೀಡಿ, ಕಾಂಗ್ರೆಸ್ ಅನ್ನು ಬೆಂಬಲಿಸಲು ಮನವಿ ಮಾಡಿದ್ದಾರೆ.