ಹೊಸಪೇಟೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಆನಂದ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಬಿಡಿಸಿಸಿ ಬ್ಯಾಂಕ್ ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ಆಗಿದ್ದು, ವೈಯಕ್ತಿಕ ಕಾರಣ ನೀಡಿ ಆನಂದ್ ಸಿಂಗ್ (Anand Singh) ರಾಜೀನಾಮೆ ಸಲ್ಲಿಸಿದ್ದಾರೆ.
ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಜುಲೈ 1ಕ್ಕೆ ಅನ್ವಯ ಆಗುವಂತೆ ಆನಂದ್ ಸಿಂಗ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದ ರೈತರ ಹಿತದೃಷ್ಟಿಯಿಂದ ಸ್ಥಾಪನೆಯಾಗಿದ್ದ ಬ್ಯಾಂಕ್ ನೂರಾರು ವರ್ಷ ಇತಿಹಾಸ ಹೊಂದಿದೆ.
ಮಗನ ಸೋಲು ರಾಜಕೀಯ ನಿರಾಸಕ್ತಿ ಮೂಡಿಸಿತೇ?
ಮೂರು ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್‌ನಿಂದ ಶಾಸಕರಾಗಿ ಸಚಿವರಾಗಿದ್ದ ಆನಂದ ಸಿಂಗ್ ಅವರು, ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಟಿಕೆಟ್ ಕೊಡಿಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆದರೆ, ಚುನಾವಣೆಯಲ್ಲಿ ಮಗ ಸೋತ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಈಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದ ವಿಜಯನಗರ – ಬಳ್ಳಾರಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಂತಾಗಿದೆ.
ಇದನ್ನೂ ಓದಿ | Shadow CM: ಕಾಂಗ್ರೆಸ್‌ನ ಪೇಸಿಎಂ ಅಭಿಯಾನಕ್ಕೆ ಬಿಜೆಪಿಯಿಂದ ಶ್ಯಾಡೊ ಸಿಎಂ ಪೋಸ್ಟರ್ ವಾರ್
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆನಂದ್ ಸಿಂಗ್ ಅವಿರೋಧ ಅಯ್ಕೆಯಾಗಿದ್ದರು. ಇನ್ನೂ ಎರಡೂವರೆ ತಿಂಗಳು ಅವಧಿ ಇದ್ದರೂ ಕೂಡ ಈಗಲೇ ರಾಜೀನಾಮೆ ಸಲ್ಲಿಸುವ ಮೂಲಕ ಲೋಕಸಭೆ ಚುನಾವಣೆ ಸಮಯದಲ್ಲಿ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ.