Site icon Vistara News

Anant Nag: ಹಿರಿಯ ನಟ ಅನಂತ್‌ ನಾಗ್‌ ಇಂದು ಬಿಜೆಪಿ ಸೇರ್ಪಡೆ

Veteran actor Anant Nag to join BJP today

‌ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಸಾಕಷ್ಟು ತಂತ್ರಗಾರಿಕೆಯಲ್ಲಿ ತೊಡಗಿದ್ದು, ಸಭೆ-ಸಮಾರಂಭಗಳನ್ನು ಆಯೋಜಿಸುತ್ತಾ ಬಂದಿದೆ. ಕೇಂದ್ರ ನಾಯಕರು ಸಹ ರಾಜ್ಯಕ್ಕೆ ಭೇಟಿ ನೀಡಿ ಮತಕ್ರೋಢೀಕರಣಕ್ಕೆ ಮುಂದಾಗಿದ್ದಾರೆ. ಈ ನಡುವೆ ಖ್ಯಾತನಾಮರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿಯೂ ಬಿಜೆಪಿ ಮುಂದಡಿ ಇಟ್ಟಿದೆ. ಈಗ ಖ್ಯಾತ, ಹಿರಿಯ ನಟ ಹಾಗೂ ಮಾಜಿ ಸಚಿವ, ಜೆಡಿಎಸ್‌ ನಾಯಕ ಅನಂತ್‌ ನಾಗ್‌ (Anant Nag)‌ ಅವರು ಬುಧವಾರ (ಫೆ. ೨೨) ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿದ್ದು, ಸಂಜೆ ೪.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲಿ ಅಧಿಕೃತ ಸೇರ್ಪಡೆಗೊಳ್ಳಲಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇವರ ಜತೆ ನೆಲಮಂಗಲದ ಕೆಲವು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಸಹ ಪಕ್ಷ ಸೇರ್ಪಡೆಯಾಗಲಿದ್ದಾರೆ.

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದ್ದ ವೇಳೆ ಮಾತುಕತೆಯಾಗಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಬಿಜೆಪಿ ಬಗ್ಗೆ ಅನಂತ್‌ ನಾಗ್‌ ಅವರು ಒಲವು ಹೊಂದಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಳಿ ರಾಜ್ಯದ ನಾಯಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಈಗ ಅವರ ಪಕ್ಷ ಸೇರ್ಪಡೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಬುಧವಾರ ನಡೆಯುವ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಕೆ. ಸುಧಾಕರ್, ಮುನಿರತ್ನ ಸಹ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ‘ಮದುವೆಯಾಗುವ, ಮಕ್ಕಳನ್ನು ಹೊಂದಬೇಕು ಎಂಬ ಆಸೆ ನನ್ನಲ್ಲೂ ಇತ್ತು, ಆದರೆ‘; ತಾನು ಮದುವೆ ಆಗದೆ ಇರುವುದರ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ

ಸಚಿವರಾಗಿದ್ದ ಅನಂತ್‌ ನಾಗ್‌

ಜೆ.ಎಚ್. ಪಟೇಲ್ ಅವರ ಸರ್ಕಾರದಲ್ಲಿ ಅನಂತ್ ನಾಗ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಶಾಸಕ, ವಿಧಾನ ಪರಿಷತ್​ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಅವರು, 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​​ನಿಂದ ಚಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಸುಮಾರು ೧೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರಿಗೆ ರಾಜ್ಯದಲ್ಲಿ ಅವರದ್ದೇ ಆದ ಫ್ಯಾನ್‌ ಫಾಲೋವರ್ಸ್‌ಗಳಿದ್ದಾರೆ. ಅಲ್ಲದೆ, ಸಜ್ಜನ ನಟ, ವ್ಯಕ್ತಿ ಎಂಬ ಹೆಸರು ಪಡೆದಿರುವ ಅನಂತ್‌ ನಾಗ್‌ ಅವರು ಈಗ ಬಿಜೆಪಿ ಸೇರ್ಪಡೆಗೊಳ್ಳುವುದರಿಂದ ಸಹಜವಾಗಿಯೇ ಪಕ್ಷಕ್ಕೆ ಮತ್ತಷ್ಟು ತಾರಾ ಬಲ ಬರಲಿದೆ. ಅಲ್ಲದೆ, ಇದರಿಂದ ವರ್ಚಸ್ಸು ಸಹ ಹೆಚ್ಚಲಿದೆ ಎಂಬ ಲೆಕ್ಕಾಚಾರ ಇದೆ ಎನ್ನಲಾಗಿದೆ.

ಇದನ್ನೂ ಓದಿ: Anushka Shetty: ಬೆಂಗಳೂರಿನಲ್ಲಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ಅನುಷ್ಕಾ ಶೆಟ್ಟಿ: ತೂಕ ಇಳಿಸಿಕೊಳ್ಳಿ ಎಂದ ನೆಟ್ಟಿಗರು

23ರಂದು ಸಂಡೂರಿನಲ್ಲಿ ಅಮಿತ್‌ ಶಾ ಸಮಾವೇಶ

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಫೆ.23ರಂದು ಸಂಡೂರಿಗೆ ಆಗಮಿಸಲಿದ್ದು, ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ. ಅಂದು ತೋರಣಗಲ್ಲಿನಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಸಂಡೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಕೇಂದ್ರ ಬಿಜೆಪಿ ನಾಯಕರು ರಾಜ್ಯಕ್ಕೆ ಹಲವು ಸುತ್ತಿನ ಭೇಟಿ ನೀಡುತ್ತಿದ್ದು, ಫೆ. ೨೭ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿದ್ದಾರೆ.

Exit mobile version