Site icon Vistara News

Ananth Nag Praises Modi | ನಾನು ಪ್ರಧಾನಿ ಮೋದಿ ಭಕ್ತ, ಅವರ ಬದ್ಧತೆ ಇಷ್ಟ: ಹಿರಿಯ ನಟ ಅನಂತ್‌ ನಾಗ್

Ananth Nag praises Modi

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ಹಿರಿಯ ನಟ ಅನಂತ್‌ ನಾಗ್‌ ಹಾಡಿ ಹೊಗಳಿದ್ದಾರೆ. ಹದಿನಾಲ್ಕು ವರ್ಷ ಮುಖ್ಯಮಂತ್ರಿಯಾಗಿ, ಎಂಟೂವರೆ ವರ್ಷಗಳಿಂದ ಪ್ರಧಾನಿಯಾಗಿ ನರೇಂದ್ರ ಮೋದಿ (Ananth Nag Praises Modi) ಅವರು ಮಾಡಿರುವ ಕೆಲಸ ಕಾರ್ಯಗಳು ನನಗೆ ಇಷ್ಟ. ಪ್ರತಿ ನಿತ್ಯ ವೇಳಾಪಟ್ಟಿಯಂತೆ ಅವರು ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಭಕ್ತ ಎಂದು ಹಿರಿಯ ನಟ ಅನಂತ್‌ ನಾಗ್‌ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಬುಧವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ರಾಷ್ಟ್ರದ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಚಾರ ಸಂಕಿರಣಕ್ಕೆ ಆಹ್ವಾನ ನೀಡಿದಾಗ ನಾನು ಯೋಚಿಸಿದೆ. ಇದು ಮೋದಿ ಸರ್ಕಾರ ಆರಂಭ ಮಾಡಿತೇ ಎಂಬ ಪ್ರಶ್ನೆ ಮೂಡಿತು. ನಂತರ ಈ ಪತ್ರಿಕಾ ದಿನಾಚರಣೆ ಮೊದಲಿನಿಂದಲೇ ಇತ್ತು ಎಂಬುವುದಾಗಿ ತಿಳಿದುಬಂತು ಎಂದರು.

ನಮಗೆ ರಾಷ್ಟ್ರ ನಿರ್ಮಾಣದದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಹೇಳುವಂತಹ ದಿನಗಳು ಬಂದವೇ ಎಂದು ಗೂಗಲ್‌ನಲ್ಲಿ ನೋಡಿದಾಗ 1966 ರಿಂದಲೇ ಪತ್ರಿಕಾ ದಿನ ಆಚರಿಸುತ್ತಿರುವುದು ತಿಳಿದುಬಂತು. ಸ್ವಾತಂತ್ರ್ಯವನ್ನು ಎತ್ತಿ ಹಿಡಿದದ್ದೇ ಮಾಧ್ಯಮ ಕ್ಷೇತ್ರ. ಯಾರಿಗಾದರೂ ಲಗಾಮು ಬೇಕು ಎಂದರೆ ರಾಜಕಾರಣಿಗಳಿಗೆ ಇರಬೇಕು. ಆದರೆ ಪತ್ರಕರ್ತರಿಗೆ ಇರಬಾರದು. ಪತ್ರಿಕಾ ಸ್ವಾತಂತ್ರ್ಯದ ಮಹತ್ವ ತಿಳಿದುಬಂದಿದ್ದೇ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಮಯದಲ್ಲಿ ಎಂದು ಹೇಳಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರು ಮಾಧ್ಯಮದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದರು. ತಮ್ಮ ಬರವಣಿಗೆಗಳ ಮೂಲಕ ವಾಸ್ತವವನ್ನು ಜನರಿಗೆ ಅರ್ಥ ಮಾಡಿಸಿದರು ಎಂದು ಹೇಳಿದರು.

ರಾಷ್ಟ್ರ ನಿರ್ಮಾಣಕ್ಕೆ ಮೊದಲ ಗುರು ಮಾಧ್ಯಮಗಳೇ ಆಗಬೇಕು. ಮಾಧ್ಯಮ ಸರಿ, ತಪ್ಪುಗಳನ್ನು ಜನರ ಮುಂದಿಡುವ ಕೆಲಸ ಮಾಡಬೇಕು. ತನಿಖಾ ಪತ್ರಿಕೋದ್ಯಮ ಹೆಚ್ಚಾಗಬೇಕು. ದೇಶದ ಜನರಿಗೆ ಸರಿ ಯಾವುದು, ತಪ್ಪು ಯಾವುದು ಎಂಬುವುದನ್ನು ತಿಳಿಸುವ ಕಾರ್ಯ ನಡೆಯಬೇಕು. ಜಾತಿ, ಧರ್ಮವನ್ನು ಎತ್ತಿಕಟ್ಟುವ ಕೆಲಸವನ್ನು ಮಾಧ್ಯಮಗಳು ಮಾಡಬಾರದು ಎಂದು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ | G20 Summit | ವಿಶ್ವ ನಾಯಕರಿಗೆ ಭಾರತದ ಕಲೆ, ಸಂಸ್ಕೃತಿ ಸಾರುವ ಗಿಫ್ಟ್ ನೀಡಿದ ಮೋದಿ, ಇಲ್ಲಿವೆ ಫೋಟೊಗಳು

Exit mobile version