ಆನೇಕಲ್: ನಾಡಹಬ್ಬ ಮೈಸೂರು ದಸರಾ ಮಾದರಿಯಲ್ಲೇ ಆನೇಕಲ್‌ನಲ್ಲೂ (Anekal Dasara) ವಿಜಯದಶಮಿ ದಸರಾ ಉತ್ಸವ ಮತ್ತು ಜಂಬೂ ಸವಾರಿ (Jambu savari) ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಕೇರಳ ಮೂಲದ ಸಾಧು ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಜಂಬೂಸವಾರಿ ಮೂಲಕ ಆನೇಕಲ್ ದಸರಾ ಉತ್ಸವಕ್ಕೆ ಮೆರಗು ನೀಡಿತು. ರಾಜಗಾಂಭೀರ್ಯದಲ್ಲಿ ಗಜರಾಜ ಹೆಜ್ಜೆ ಹಾಕಿದ್ದು ಭಕ್ತ ಸಾಗರ ಅದ್ಧೂರಿ ದಸರಾ ಜಂಬು ಸವಾರಿಯನ್ನು ಕಂಡು ಪುನೀತರಾಗಿದ್ದಾರೆ.
ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲೂ ನಾಡಹಬ್ಬ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಸಾಧು ಆನೆ ಸವಾರಿ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು.
ದಿವ್ಯ ಜ್ಞಾನನಂದ ಸ್ವಾಮಿ ಹಾಗೂ ಶಾಸಕ ಬಿ.ಶಿವಣ್ಣ ಸೇರಿದಂತೆ ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆನೇಕಲ್ ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿತು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಸಾಧು ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡರು.
ಇದನ್ನೂ ಓದಿ: Karnataka Weather : ಮಳೆಯಾಟ ಬಂದ್; ಇನ್ನೆರಡು ದಿನ ಕರ್ನಾಟಕ ಸಿಕ್ಕಾಪಟ್ಟೆ Hot
ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಂಡರು. ಎಂದಿನಂತೆ ತೋಗಟವೀರ ಜನಾಂಗದ ಸದಸ್ಯರು ವಿಜಯದಶಮಿ ಉತ್ಸವ ವಿಜೃಂಭಣೆಯಿಂದ ನೆರವೇರಿಸಿದ್ದರು. ತಾಯಿ ಚೌಡೇಶ್ವರಿ ಸರ್ವರಿಗೂ ಒಳಿತು ಮಾಡಲಿ ಎಂದು ಶಾಸಕ ಬಿ ಶಿವಣ್ಣ ಪ್ರಾರ್ಥಿಸಿದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲಿಯೇ ಆನೇಕಲ್ ದಸರಾ ನಡೆಯುತ್ತಿದ್ದು, ಮಿನಿ ದಸರಾ ಎಂದೇ ಪ್ರಖ್ಯಾತಿಗಳಿಸುತ್ತಿದೆ. ಕಲಾತಂಡಗಳ ಜತೆಗೆ ಅಂಬಾರಿ ಸಾಗುವ ದೃಶ್ಯ ನೋಡುವುದೇ ಒಂದು ಹಬ್ಬವಾಗಿತ್ತು. ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿದ್ದರು.
ಚಂಪಕಧಾಮಸ್ವಾಮಿ ಜಂಬೂ ಸವಾರಿ
ಬನ್ನೇರುಘಟ್ಟದಲ್ಲೂ ಶ್ರೀ ಚಂಪಕಧಾಮಸ್ವಾಮಿ ಜಂಬೂ ಸವಾರಿ ನಡೆದಿದೆ. ದೇವರ ಉತ್ಸವ ಮೂರ್ತಿ ಹೊತ್ತಿದ ಅಂಬಾರಿಗೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ಹೊತ್ತ ಗಜರಾಜ ಬನ್ನೇರುಘಟ್ಟದ ರಾಜಬೀದಿಗಳಲ್ಲಿ ರಾಜಗಾಂಭೀರ್ಯದಿಂದ ಜಾನಪದ ಕಲಾತಂಡಗಳ ಜತೆ ಹೆಜ್ಜೆ ಹಾಕಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿರುವ ಭಕ್ತ ಸಾಗರ ಕಣ್ತುಂಬಿಕೊಂಡರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ