ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುಗಳೂರು ಬ್ರಿಡ್ಜ್ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಮೃತದೇಹವು (Anekal News) ಪತ್ತೆಯಾಗಿದೆ.
ಬ್ರಿಡ್ಜ್‌ನ ತಡೆಗೋಡೆ ಮೇಲೆ ರಕ್ತದ ಕಲೆಗಳು ಪತ್ತೆ ಆಗಿದ್ದು, ಯಾರೋ ದುಷ್ಕರ್ಮಿಗಳು ಕೊಲೆಗೈದು ಹೊಳೆಗೆ ಎಸೆದಿರುವ ಶಂಕೆಯು ವ್ಯಕ್ತವಾಗಿದೆ. ಜತೆಗೆ ಬ್ರಿಡ್ಜ್ ಮೇಲೆ ರೈಡಿಂಗ್ ಮಾಡುವಾಗ ಬಳಸುವ ಕನ್ನಡಕ ಪತ್ತೆ ಆಗಿದೆ. ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್ ಸಮೇತ ಹೊಳೆಗೆ ಬಿದ್ದಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಬೇರೆಲ್ಲೊ ಕೊಲೆಗೈದು ಹೊಳೆಯಲ್ಲಿ ಎಸೆದಿದ್ದಾರೆ. ತಲೆಯ ಹಿಂಭಾಗದಲ್ಲಿ ಚೂಪಾದ ಆಯುಧದಿಂದ ಹಲ್ಲೆ ಮಾಡಿರುವ ಗಾಯವಾಗಿದೆ. ಕೊಲೆ ಬಳಿಕ ಮುಗಳೂರು ಬಳಿ ಹೊಳೆಗೆ ಎಸೆದಿದ್ದಾರೆ. ಹೊಳೆಯ ಬ್ರಿಡ್ಜ್ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದೆ. ಸದ್ಯ ಮೃತನ ಗುರುತು ಪತ್ತೆಯಾಗಿಲ್ಲ. ಮೃತನ ಪತ್ತೆಗಾಗಿ ಸುತ್ತಮುತ್ತಲಿನ ಠಾಣೆಗಳಲ್ಲಿ ಮಿಸ್ಸಿಂಗ್ ಕೇಸ್‌ಗಳ ಕುರಿತು ತನಿಖೆ ನಡೆಸಲಾಗುತ್ತಿದೆ.
ಹಣಕಾಸಿನ ವಿಚಾರಕ್ಕೆ ಸ್ನೇಹಿತರ ಹೊಡೆದಾಟ, ಓರ್ವ ಸಾವು
ಮೈಸೂರು: ಹಣಕಾಸಿನ ವಿಚಾರಕ್ಕೆ (Financial matter) ಸ್ನೇಹಿತರ ನಡುವೆ ನಡೆದ ಹೊಡೆದಾಟದಲ್ಲಿ (Fight between friends) ಒಬ್ಬ ಸಾವನ್ನಪ್ಪಿದ್ದಾನೆ (Murder case). ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಕಾಲೋನಿಯಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಆಸಿಫ್ ಅಲಿಯಾಸ್ ಬಿಲ್ಲಾ ಆಸಿಫ್(36) ಎಂದು ಗುರುತಿಸಲಾಗಿದೆ.
ಆಸಿಫ್ ಮತ್ತು ಸಲೀಂ ಪಾಷಾ ಅವರಿಬ್ಬರ ನಡುವೆ ಜಗಳ ನಡೆದಿದ್ದು, ಕೊಲೆ ಮಾಡಿರುವ ಆರೋಪಿ ಸಲೀಂ ಪಾಷಾಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸಿಫ್ ಪಾಷಾ ಮತ್ತು ಸಲೀಂ ಇಬ್ಬರೂ ಬೀಡಿ ಕಾಲೋನಿಯ ಬಳಿ ಇರುವ ಟೀ ಅಂಗಡಿಯಲ್ಲಿ ಕುಳಿತಿದ್ದರು. ಈ ವೇಳೆ
ಹಣಕಾಸಿನ ವಿಚಾರದಲ್ಲಿ ಸಲೀಂ ಪಾಷ ಕ್ಯಾತೆ ತೆಗೆದಿದ್ದಾನೆ ಎನ್ನಲಾಗಿದೆ. ಆಗ ಅವರಿಬ್ಬರ ನಡುವೆ ಹೊಡೆದಾಟ ಶುರುವಾಗಿದೆ.
ಗಲಾಟೆ ಗಂಭೀರ ಸ್ವರೂಪಕ್ಕೆ ತಿರುಗಿದಾಗ ಸಲೀಂ ಪಾಷಾ ಆಸಿಫ್‌ನ ತಲೆಗೆ ಮರದ ಪಟ್ಟಿಯಿಂದ ಹಲ್ಲೆ ಮಾಡಿದ್ದಾನೆ. ಆಗ ಆಸಿಫ್ ತೀವ್ರವಾಗಿ ಗಾಯಗೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಆಸಿಫ್‌ನನ್ನು ತಕ್ಷಣವೇ ಕೆ.ಆರ್.ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಹೊಡೆದಾಟದಲ್ಲಿ ಗಾಯಗೊಂಡ ಆರೋಪಿ ಸಲೀಂಪಾಷಾಗೂ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident: 13 ಮಂದಿಯ ಬಲಿ ಪಡೆದ ದಟ್ಟ ಮಂಜು; ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ
ಇನ್‌ಸ್ಟಾಗ್ರಾಮ್ ಸ್ನೇಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ
ಕಾರವಾರ: ಇನ್‌ಸ್ಟಾಗ್ರಾಮ್‌ನಲ್ಲಿ (instagram) ಪರಿಚಯ ಬೆಳೆಸಿದ ಸ್ನೇಹಿತನ ಕಿರುಕುಳದಿಂದ (blackmail case) ಬೇಸತ್ತು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ (Self harm) ಘಟನೆ ಭಟ್ಕಳದಲ್ಲಿ ನಡೆದಿದೆ.
ಉತ್ತರಕನ್ನಡ (Uttara kannada news) ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳದ ಹಾಡವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನೇತ್ರಾ ಗೋವಾಳಿ(24) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತನಾಗಿದ್ದ ಗೋವರ್ಧನ್ ಮೊಗೇರ್ ಎಂಬಾತ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕಳೆದೊಂದು ವರ್ಷದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಗೋವರ್ಧನ್ ಈಕೆಗೆ ಪರಿಚಯವಾಗಿದ್ದ. ನೇತ್ರಾಳೊಂದಿಗೆ ಆತ್ಮೀಯವಾಗಿ ಸ್ನೇಹ ಬೆಳೆಸಿದ್ದ ಈತ ಬಳಿಕ ಪ್ರೀತಿಸುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಪ್ರೀತಿಗೆ ಒಪ್ಪದಿದ್ದಾಗ, ತಾನು ಖರ್ಚು ಮಾಡಿದ್ದ ಹಣ ನೀಡುವಂತೆ ಪೀಡಿಸಲು ಆರಂಭಿಸಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ನಿನ್ನ ಅಶ್ಲೀಲ ಪೋಟೋಗಳನ್ನು ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ.
ಈ ಕಿರುಕುಳದಿಂದ ಬೇಸತ್ತ ನೇತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಗೋವರ್ಧನ್ ಕಾರಣ ಎಂದು ನೇತ್ರಾ ತಂದೆಯಿಂದ ಗೋವರ್ಧನ್ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ