ಆನೇಕಲ್: ಪಿಜಿಯೊಂದರಲ್ಲಿ ಸಂಪ್ ಸ್ವಚ್ಛಗೊಳಿಸಿ (sump cleaning) ಬಣ್ಣ ಬಳಿಯುವಾಗ ಕಾರ್ಮಿಕನೊಬ್ಬ ಉಸಿರುಗಟ್ಟಿ (Suffocate) ಬಿದ್ದಿದ್ದ. ಈತನನ್ನು ಕಾಪಾಡಲು ಹೋದ ಮತ್ತಿಬ್ಬರು ಉಸಿರುಗಟ್ಟಿ ನರಳಾಡುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ಕೇವಲ 5 ನಿಮಿಷಕ್ಕೆ ದೌಡಾಯಿಸಿದ ಎಲೆಕ್ಟ್ರಾನಿಕ್ ಸಿಟಿಯ (Electronic City) ಅಗ್ನಿಶಾಮಕ ದಳ ಸಿಬ್ಬಂದಿ (Fire Station) ಮೂವರನ್ನು ರಕ್ಷಿಸಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್ (Anekal News) ತಾಲೂಕಿನ ಬೊಮ್ಮಸಂದ್ರದಲ್ಲಿರುವ ವಿಜಯ ಪಿಜಿಯಲ್ಲಿ ಈ ಘಟನೆ ನಡೆದಿದೆ. ಮಂಗಲ್ ರಾವ್(55), ಧರ್ಮೇಂದ್ರ(50), ಜೀತಿನ್(19) ಎಂಬುವವರ ರಕ್ಷಣೆ ಮಾಡಲಾಗಿದೆ.
ಬಿಲ್ಡಿಂಗ್ ಮಾಲೀಕ ಮಂಗಲ್ ರಾವ್ ಅವರು ಶನಿವಾರ ರಾತ್ರಿ 7.30ರ ಸುಮಾರಿಗೆ ನೀರಿನ ಸಂಪ್ ಕ್ಲೀನ್ ಮಾಡಿಸಿ ಒಳಗೆ ಪೇಂಟಿಂಗ್ ಮಾಡಿಸಲು ಮುಂದಾಗಿದ್ದರು. ಪೇಂಟರ್ ಧರ್ಮೇಂದ್ರ 15 ಅಡಿ ಆಳದ ಸಂಪ್ ಒಳಗೆ ಇಳಿದು ಪೇಂಟಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಧರ್ಮೇಂದ್ರಗೆ ಉಸಿರಾಟಕ್ಕೆ ತೊಂದರೆ ಆಗಿ ಅಸ್ವಸ್ಥಗೊಂಡು ಸಂಪ್‌ವೊಳಗೆ ಕುಸಿದು ಬಿದ್ದಿದ್ದರು.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಗುಡುಗು, ಮಳೆ; ಫ್ಲವರ್ ಶೋಗೆ ವರುಣ ಅಡ್ಡಿ?
ಕುಸಿದು ಬಿದ್ದವನನ್ನು ರಕ್ಷಿಸಲು ಮಾಲೀಕ ಮಂಗಲ್ ರಾವ್ ಹಾಗೂ ಜಿತೀನ್ ಕೂಡ ಸಂಪ್‌ಗೆ ಇಳಿದಿದ್ದು, ಈ ವೇಳೆ ಅವರಿಬ್ಬರು ಉಸಿರುಗಟ್ಟಿ ಬಿದ್ದಿದ್ದರು. ಸರಿಯಾಗಿ ಉಸಿರಾಡಲು ಆಗದೆ ನರಳಾಡುತ್ತಿದ್ದರು.
ಕರೆ ಬಂದ 5 ನಿಮಿಷಕ್ಕೆ ದೌಡು
ಸಂಪ್‌ನಲ್ಲಿ ಉಸಿರುಗಟ್ಟಿ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸ್ಥಳೀಯರಿಂದ ಕರೆ ಬಂದ ಐದೇ ನಿಮಿಷಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಸಾವಿನ ದವಡೆಯಲ್ಲಿದ್ದವರನ್ನ ಪಾರು ಮಾಡಿದ್ದಾರೆ. ಅಸ್ವಸ್ಥರಾಗಿದ್ದ ಮೂವರನ್ನು ಕೂಡಲೇ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಿಬ್ಬಂದಿಗೆ ಸ್ಥಳೀಯರ ಮೆಚ್ಚುಗೆ
ಅಗ್ನಿಶಾಮಕ ಸಿಬ್ಬಂದಿಯ ತುರ್ತು ಸ್ಪಂದನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರೆ ಬಂದ ಐದೇ ನಿಮಿಷಕ್ಕೆ ಬಂದು ಮೂವರನ್ನು ರಕ್ಷಿಸಿದಕ್ಕೆ ಅಭಿನಂದಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ಸಂತಸಗೊಂಡ ಸ್ಥಳೀಯರು ಅವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ