ಸುವರ್ಣಸೌಧ, ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಸೇವೆಯು ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಗೌರವಯುತ ಸೇವೆಯಾಗಿರುವುದರಿಂದ ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸದಿರುವುದರಿಂದ ಇವರಿಗೆ ಇಎಸ್ ಐ ಸೌಲಭ್ಯ ವಿಸ್ತರಿಸಲು ಅವಕಾಶವಿರುವುದಿಲ್ಲ ಹಾಗೂ ಕನಿಷ್ಟ ವೇತನ ಕಾಯ್ದೆ ಇವರಿಗೆ ಅನ್ವಯಿಸುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ನಿಯಮ 330ರಡಿ ಮಂಡಿಸಿದ ವಿಷಯಕ್ಕೆ ಸಚಿವರು ನೀಡಿದ ಲಿಖಿತ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರುಗಳಿಗೆ ಸರ್ಕಾರವು ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಬದಲಿಗೆ ಇವರಿಗೆ ಕನಿಷ್ಠ ಪ್ರಮಾಣದ ಗೌರವ ಧನವನ್ನು ನೀಡುತ್ತಿದೆ. ಈ ಅಂಗನವಾಡಿ ಉದ್ಯೋಗಿಗಳಿಗೆ ಸರ್ಕಾರವು ಸಾಮಾಜಿಕ, ಆರ್ಥಿಕ ಮತ್ತು ಔದ್ಯಮಿಕ ಭದ್ರತೆಯನ್ನು ಒದಗಿಸುವ ಕಾಳಜಿ ತೋರದೆ ಕೇವಲ ದುಡಿಮೆಗಾಗಿ ಬಳಕೆಯ ವಸ್ತುಗಳಂತೆ ವ್ಯವಹರಿಸುತ್ತಿರುವುದು ಶೋಷಣಾಣಾತ್ಮಕ ಧೋರಣೆಯಾಗಿದೆ. ಈ ನೌಕರಿಗೆ ಸಾಮಾಜಿಕ ಸುರಕ್ಷ ಯೋಜನೆಯಾದ ಇ.ಎಸ್.ಐ. ಸೌಲಭ್ಯ ಹಾಗೂ ಸರ್ಕಾರಿ ನೌಕರರಿಗೆ ರೂಪಿಸಿರುವ ನೌಕರ ಸ್ನೇಹಿ ಉಚಿತ ವೈದ್ಯಕೀಯ ಯೋಜನೆಯನ್ನು ಇವರಿಗೂ ಸಹ ವಿಸ್ತರಿಸದೇ ವಿಚಾರವು ಗಂಭೀರವಾಗಿದೆ. ನಿಸ್ವಾರ್ಥತೆ ಮತ್ತು ಸೇವಾ ಮನೋಭಾವದಿಂದ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಮಸ್ಯೆಯನ್ನು ಚರ್ಚಿಸಿ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಸಲೀಂ ಅಹಮದ್ ವಿಷಯ ಮಂಡಿಸಿದ್ದರು.
ಸಚಿವರು ವಿವರಿಸಿದ ಪ್ರಮುಖಾಂಶಗಳು
-ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಈ ಯೋಜನೆಯು 1975ರಿಂದ ಜಾರಿಗೆ ಬಂದಿರುತ್ತದೆ. 204 ಶಿಶು ಅಭಿವೃದ್ಧಿ ಯೋಜನೆಗಳ ಮೂಲಕ 66,361 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ, ಈ ಯೋಜನೆಯಡಿ 64,729 ಅಂಗನವಾಡಿ ಕಾರ್ಯಕರ್ತೆಯರು ಮತ್ತು 59,627 ಅಂಗನವಾಡಿ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
– ಅಂಗನವಾಡಿ ಕಾರ್ಯಕರ್ತೆಯರಿಗೆ 10 ಸಾವಿರ ರೂ, ಸಹಾಯಕಿಯರಿಗೆ 5250 ರೂ. ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 6,250 ರೂ.ಗಳ ಗೌರವಧನವನ್ನು ಕಳೆದ ಮಾರ್ಚ್‌ವರೆಗೆ ಪಾವತಿಸಲಾಗುತ್ತಿದ್ದು, 2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತ ಸೇವಾ ಹಿರಿತನದ ಆಧಾರದ ಮೇಲೆ 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1500 ರೂ., 10 ವರ್ಷದಿಂದ 20 ವರ್ಷ ಸೇವೆ ಸಲ್ಲಿಸಿದವರಿಗೆ 1,250 ರೂ. ಮತ್ತು 10 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ 1,000 ರೂ. ಗೌರವಧನವನ್ನು ಕಳೆದ ಏಪ್ರೀಲದಿಂದ ಹೆಚ್ಚಿಸಲಾಗಿದೆ.
– ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇವೆಯಲ್ಲಿರುವಾಗ ಮರಣ ಹೊಂದಿದಲ್ಲಿ ಅವರ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ 50 ಸಾವಿರ ರೂ. ನೀಡಲಾಗುತ್ತಿದೆ. 2011 ರಿಂದ 2015ರವರೆಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ವಂತಿಕೆ ಆಧಾರಿತ ಪಿಂಚಣಿ ಯೋಜನೆಯಡಿ ನೋಂದಣಿಯಾದ 18-55 ವರ್ಷ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಸಹಾಯಕಿಯರಿಂದ ಕ್ರಮವಾಗಿ 150 ರೂ. ಹಾಗೂ 84 ರೂ. ಮಾಹೆಯಾನ ವಂತಿಗೆಯಲ್ಲಿ ಪಡೆದು ವಸೂಲಿ ಮಾಡಿ ಅಷ್ಟೇ ಮೊತ್ತದ ವಂತಿಗೆಯನ್ನು ಸರ್ಕಾರ ಭರಿಸುತ್ತದೆ.
– ಎನ್.ಪಿ.ಎಸ್. ಯೋಜನೆಯಿಂದ ವಂಚಿತರಾಗಿ ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ
ಸಹಾಯಕಿಯರಿಗೆ ಅನುಕ್ರಮವಾಗಿ 50 ಸಾವಿರ ರೂ. ಮತ್ತು 30 ಸಾವಿರ ರೂ.ಗಳನ್ನು ಪಾವತಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರಿಗೆ ವೈದ್ಯಕೀಯ ಮರುಪಾವತಿ ಯೋಜನೆಯನ್ನು ಜಾರಿಗೊಳಿಸಿದ್ದು, ಗುರುತರ ಕಾಯಿಲೆಗಳಾದ ಹೃದ್ರೋಗ ಶಸ್ತ್ರ ಚಿಕಿತ್ಸೆ, ಕ್ಯಾನ್ಸರ್ ಡಯಾಲಿಸಿಸ್ ಮತ್ತು ಮೂತ್ರಪಿಂಡ ಜೋಡಣೆ ಮತ್ತು ಗರ್ಭಕೋಶ ಸಂಬಂಧಪಟ್ಟ ಕಾಯಿಲೆಗಳಿಂದ ಬಳಲುತ್ತಿದ್ದಲ್ಲಿ ಗರಿಷ್ಠ 50 ಸಾವಿರ ರೂ.ಗಳ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೂ ಮಧ್ಯಾಹ್ನದ ಬಿಸಿಯೂಟವನ್ನೂ ಸಹ ಒದಗಿಸಲಾಗುತ್ತಿದೆ.
-ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಸೌಲಭ್ಯ ಪಡೆಯುವ ಫಲಾನುಭವಿಗಳ ಅರ್ಜಿಯನ್ನು ಆನ್ ಲೈನ್‌ನಲ್ಲಿ ಅಳವಡಿಸಿದಾಗ ಒಂದು ಅರ್ಜಿಗೆ 50 ರೂ.ಯನ್ನು ಹಾಗೂ 3 ಅರ್ಜಿಗಳನ್ನು ಅಳವಡಿಸಿದ ನಂತರ ಪ್ರತ್ಯೇಕವಾಗಿ 50 ರೂ.ಗಳು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಗೆ 200 ರೂ.ಗಳು ಮತ್ತು ಅದೇ ರೀತಿ ಅಂಗನವಾಡಿ ಸಹಾಯಕರಿಗೆ ಫಲಾನುಭವಿಗಳ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಅಳವಡಿಸಿದಾಗ ಒಂದು ಅರ್ಜಿಗೆ 25 ರೂ. ಹಾಗೂ 3 ಅರ್ಜಿಗಳನ್ನು ಅಳವಡಿಸಿದ ನಂತರ ಪ್ರತ್ಯೇಕವಾಗಿ 25 ರೂ.ಗಳು ಸೇರಿದಂತೆ ಒಟ್ಟು 100 ರೂ.ರಂತೆ ಪ್ರೋತ್ಸಾಹಧನ ನೀಡಲಾಗುವುದು.
-ಭಾಗ್ಯಲಕ್ಷ್ಮಿ ಯೋಜನೆಯಡಿ ಫಲಾನುಭವಿಯನ್ನು ಗುರುತಿಸಿ, ನೊಂದಾಯಿಸಿಕೊಳ್ಳುವ ಹಾಗೂ ಪ್ರಗತಿ ಪರಿಶೀಲನೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹೆಯಾನ 25 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು.
ಜೊತೆಗೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಸೇವಾ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಗೌರವಧನದ ಜೊತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ ಗೌರವಧನವನ್ನು ಪಾವತಿಸಲಾಗುತ್ತಿದೆ.
ಇದನ್ನೂ ಓದಿ | ಬೆಳಗಾವಿ ಅಧಿವೇಶನ | ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಗೌರವಧನ ರೂ. 15 ಸಾವಿರಕ್ಕೆ ಹೆಚ್ಚಳ: ಸಚಿವ ಅಶೋಕ್