Site icon Vistara News

Anganwadi Workers | ಅಂಗನವಾಡಿ ಕಾರ್ಯಕರ್ತೆಯರಾಗಲು PUC ಆಗಲೇಬೇಕು, ಸಹಾಯಕಿಯರಿಗೆ SSLC ಕಡ್ಡಾಯ: ಇದು NEP Rules

ಅಂಗನವಾಡಿ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರಾಗಲು (Anganwadi Workers) ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು, ಸಹಾಯಕರಿಗೆ ಎಸ್ಸೆಸ್ಸೆಲ್ಸಿ ಕಡ್ಡಾಯ! ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಹೊಸ ನಿಯಮ ಜಾರಿಗೆ ಬರಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಲ್ಲಿಸಿದ್ದ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಅಸ್ತು ಎಂದಿದ್ದು, ಇನ್ನು ಮುಂದೆ ಕಾರ್ಯಕರ್ತೆಯರ ಆಯ್ಕೆಗೂ ಮಾನದಂಡಗಳನ್ನು ಜಾರಿ ಮಾಡಿದೆ. ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ/ಸಹಾಯಕಿಯರ ಆಯ್ಕೆಯನ್ನು ಇನ್ನು ಮುಂದೆ ಆನ್‌ಲೈನ್ ಮುಖಾಂತರವೇ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ.

ಯಾರೆಲ್ಲ ಅರ್ಹರು?
ಅಂಗನವಾಡಿಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಆಗಿ ಸೇರಲು ಮಹಿಳೆಯರು ಹಾಗೂ ಲಿಂಗತ್ವ ಅಲ್ಪ ಸಂಖ್ಯಾತ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು 19-35 ವರ್ಷ ವಯೋಮಿತಿಯೊಳಗಿನ ಹೆಣ್ಣು ಮಕ್ಕಳು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು ಹಾಗೂ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ
ಕನಿಷ್ಠ ಪಿಯುಸಿ ತೇರ್ಗಡೆ ಹೊಂದಿರಬೇಕು, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಸಂದರ್ಭದಲ್ಲಿ ಸರ್ಕಾರದ ಅಂಗೀಕೃತ ಸಂಸ್ಥೆಗಳಿಂದ D.SE.R.T.ಯಿಂದ ECCE ಡಿಪ್ಲೊಮಾ ಕೋರ್ಸ್, JOC ಕೋರ್ಸ್, N.T.T. ಕೋರ್ಸ್‌ಗಳನ್ನು ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ನ್ಯೂಟ್ರಿಷಿಯನ್‌, ಹೋಂ ಸೈನ್ಸ್ ಸರ್ಟಿಫಿಕೇಟ್‌ ಕೋರ್ಸ್, ಒಂದು ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು ಪ್ರಮಾಣ ಪತ್ರ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಸಹಾಯಕಿಯರಿಗೆ ಇರಬೇಕು ಕನಿಷ್ಠ ವಿದ್ಯಾರ್ಹತೆ
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ/ಮುಕ್ತ ವಿದ್ಯಾಲಯಗಳಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗೆಡೆ ಹೊಂದಿರಬೇಕು. ಮಾರ್ಕ್ಸ್‌ ಕಾರ್ಡ್‌ನಲ್ಲಿ ಗರಿಷ್ಠ 625 ಕನಿಷ್ಠ 219 ಅಂಕಗಳನ್ನು ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.

ಒಂದು ವೇಳೆ ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡಿದ್ದರೆ, ಕನ್ನಡವನ್ನು ಪ್ರಥಮ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿದ್ದರೂ SSLC ಪರೀಕ್ಷೆಗೆ ಆ ರಾಜ್ಯದಲ್ಲಿ ನಿಗದಿಪಡಿಸಿದ ಗರಿಷ್ಠ ಹಾಗೂ ಕನಿಷ್ಠ ಅಂಕಗಳು ಹಾಗೂ ಕರ್ನಾಟಕ ರಾಜ್ಯದಲ್ಲಿ ನಿಗದಿಪಡಿಸಿದ ಅಂಕದಲ್ಲಿ ವ್ಯತ್ಯಾಸವಿದ್ದಲ್ಲಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.

ವಾಸ್ತವ್ಯ ಪ್ರಮಾಣ ಪತ್ರ
ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ಗ್ರಾಮದಲ್ಲಿ ವಾಸ್ತವ ಹೊಂದಿರಬೇಕು. ಆಯ್ಕೆಗೆ ಸ್ಥಳೀಯ ಮಜಿರೆ, ತಾಂಡಾ ಹಾಗೂ ಹಾಡಿಗೆ ಸೇರಿದವರಾಗಿದ್ದರೆ ಸಂಬಂಧಿಸಿದ ವಾಸ್ತವ್ಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆಯಬೇಕು. ನಗರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ವಾರ್ಡ್‌ನಲ್ಲಿ ವಾಸ್ತವ್ಯ ಹೊಂದಿರಬೇಕು ಹಾಗೂ ವಾಸ್ತವ್ಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು.[ಚುನಾವಣಾ ವಾರ್ಡ್‌ಗಳನ್ನು ಪರಿಗಣಿಸುವಂತಿಲ್ಲ]

ತಹಸೀಲ್ದಾರ್/ ಉಪ ತಹಸೀಲ್ದಾರ್‌ರವರ ಮೂರು ವರ್ಷದ ವಾಸ್ತವ್ಯ ದೃಢೀಕರಣದೊಂದಿಗೆ ಸ್ಥಳೀಯರು ಎಂಬುದನ್ನು ದೃಢೀಕರಿಸಲು ಪೂರಕ ದಾಖಲೆಗಳಾಗಿ ಆಧಾರ ಕಾರ್ಡ್‌, ರೇಷನ್ ಕಾರ್ಡ್ ಮತದಾರರ ಗುರುತಿನ ಚೀಟಿಗಳನ್ನು ಪಡೆಯುವುದು. ಮಜಿರೆ, ತಾಂಡಾ ಹಾಗೂ ಹಾಡಿಗೆ ಸೇರಿದವರಾಗಿದ್ದರೆ ಸಂಬಂಧಿಸಿದ ವಾಸ್ತವ್ಯ ಪ್ರಮಾಣ ಪತ್ರ ಪಡೆಯುವುದು.

ಇದನ್ನೂ ಓದಿ | Viral Video | ವೇದಿಕೆ ಮೇಲೆ ತಂಗಿ ಪ್ರಿಯಾಂಕಾರನ್ನು ಅಪ್ಪಿ, ಮುತ್ತಿಕ್ಕಿ ಮುದ್ದು ಮಾಡಿದ ರಾಹುಲ್​ ಗಾಂಧಿ

Exit mobile version