ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಅಂಗನವಾಡಿಗಳ ಜೊತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲೆಗಳ ಸ್ವರೂಪ ನೀಡಲು ಯೋಜಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕರು ಎಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದೆ.
ಅಂಗನವಾಡಿ ಕಾರ್ಯಕರ್ತೆಯರು ಇಲ್ಲಿಯವರೆಗೆ 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕಲಿಸುತ್ತಿದ್ದರು. ಬಾಣಂತಿಯರು, ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸಲು, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದೀಗ ಅವರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದೆ. ಶಿಕ್ಷಕಿಯರು ಎಂದು ಪರಿಗಣಿಸಿದರೆ, ಅವರು ಪಡೆಯುತ್ತಿರುವ ಗೌರವ ಧನ, ವೇತನವಾಗಿ ಪರಿವರ್ತನೆಯಾಗಲಿದೆ. ಜತೆಗೆ ಸೇವಾ ಭದ್ರತೆಯೂ ದೊರೆಯಲಿದೆ. ಉತ್ತರಾಖಂಡ್ ರಾಜ್ಯದಲ್ಲಿ ಈ ಯೋಜನೆ ಈಗಾಗಲೇ ಅನುಷ್ಠಾನವಾಗಿದೆ.