ಬೆಂಗಳೂರು: ಸರ್ಕಾರಿ ಶಿಶು ಪಾಲನಾ ಕೇಂದ್ರ ಮತ್ತು ಪೂರ್ವ ಪ್ರಾಥಮಿಕ ಕೇಂದ್ರಗಳ ಸ್ಥಾಪನೆ ವಿರೋಧಿಸಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳದ 6ನೇ ಗ್ಯಾರಂಟಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆ (Anganwadi Workers Protest:) ನಡೆಸಿದರು.
ಶಿಶು ಪಾಲನಾ ಕೇಂದ್ರ ಮತ್ತು ಪೂರ್ವ ಪ್ರಾಥಮಿಕ ಕೇಂದ್ರಗಳ ಸ್ಥಾಪನೆ ಮಾಡಲು ನಿರ್ಧರಿಸುವ ಮೂಲಕ ಅಂಗನವಾಡಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ ಕಾರ್ಯಕರ್ತೆಯರು, ಸರ್ಕಾರದ 6ನೇ ಗ್ಯಾರಂಟಿಯಾದ ಅಂಗನಾಡಿ ಸಿಬ್ಬಂದಿಯ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕರು ಚುನಾವಣಾ ಪೂರ್ವದಲ್ಲಿ ಗೌರವ ಧನ ಹೆಚ್ಚಳದ ಭರವಸೆ ನೀಡಿದ್ದರು. ಆದರೆ, ಇದಕ್ಕೆ ಕ್ರಮ ಕೈಗೊಂಡಿಲ್ಲ. ಸದ್ಯ ಇರುವ ಸಾಲು ಸಾಲು ಸಮಸ್ಯೆಗಳನ್ನೇ ಪರಿಹರಿಸಲು ಸರ್ಕಾರ ವಿಫಲವಾಗಿದೆ. ಗೌರವ ಧನ ಹೆಚ್ಚಳ, ಸೇವೆ ಕಾಯಂ, ಆರ್ಥಿಕ ಭದ್ರತೆ, ಕಳಪೆ ಮೊಬೈಲ್‌ಗಳೂ ಸೇರಿ ಸಮಸ್ಯೆಗಳ ರಾಶಿಯೇ ಇದ್ದರೂ, ಇದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ ಅಂತ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Cauvery Dispute : ಕಾವೇರಿ ಕೊಳ್ಳದಲ್ಲಿ ಜನಜಾಗೃತಿ ಯಾತ್ರೆಗೆ ಬಿಜೆಪಿ ನಿರ್ಧಾರ; ಕೇಂದ್ರಕ್ಕೆ ಪತ್ರ ಬರೆದ ಸಿಎಂ ಮೇಲೆ ಸಿಟ್ಟು
ಹೊಸ ಸರ್ಕಾರ ತಮ್ಮ ಭರವಸೆಗಳನ್ನ ಈಡೇರಿಸುತ್ತೆ ಎಂದು ಭರವಸೆ ಇಟ್ಟುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ಚುನಾವಣೆ ಮುನ್ನ ಪ್ರಿಯಾಂಕಾ ಗಾಂಧಿ ಅವರನನ್ನು ಕರೆತಂದು 6ನೇ ಗ್ಯಾರಂಟಿ ಜಾರಿ ಮಾಡುವ ವಾಗ್ದಾನ ಮಾಡಿದ್ದ ರಾಜ್ಯ ನಾಯಕರು ಈಗ ತುಟಿ ಬಿಚ್ಚುತ್ತಿಲ್ಲ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುತ್ತಾ ಅಂಗನವಾಡಿ ಕಾರ್ಯಕರ್ತೆಯರು ಅಸಮಾಧಾನ ಹೊರಹಾಕಿದ್ದಾರೆ.