Site icon Vistara News

Anganawadi Workers: 2ನೇ ದಿನವೂ ಮುಗಿಯದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ; ಜ.25ಕ್ಕೆ ವಿಧಾನಸೌಧ ಮುತ್ತಿಗೆ

Anganwadi workers protest

ಬೆಂಗಳೂರು: ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ (Anganawadi Workers) ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಯಕರ್ತೆಯರು, ಸಹಾಯಕಿಯರ ಸೇವೆ ಕಾಯಂ, ಅಂಗನವಾಡಿ ಕಾರ್ಯಕರ್ತೆಯರಿಗೆ 21 ಸಾವಿರ ರೂಪಾಯಿ ವೇತನ ನಿಗದಿ, ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ, ಪೆನ್ಷನ್​ ಹಣ‌ ಸೇರಿದಂತೆ ಇನ್ನಿತರ ಸಮಸ್ಯೆಗಳ ಈಡೇರಿಕೆಗೆ ಬೇಡಿಕೆ ಇಟ್ಟಿದ್ದು, ಮಂಗಳವಾರ ಸಂಜೆಯೊಳಗೆ ಸರ್ಕಾರ ಆದೇಶ ನೀಡದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಲಾಗಿದೆ.

ಏಕಕಾಲಕ್ಕೆ ವಿಧಾನಸೌಧಕ್ಕೆ ನುಗ್ಗಲು ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಿರ್ಧಾರ ಮಾಡಿದ್ದು, ಬುಧವಾರದಿಂದ (ಜ.೨೪) ಅನಿರ್ದಿಷ್ಟಾವಧಿ ಕಾಲ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ, ಅನಿರ್ದಿಷ್ಟಾವಧಿ ಹೋರಾಟವನ್ನು ಮುಂದುವರಿಸಿದ್ದೇವೆ. ನಾವು ಆಶ್ವಾಸನೆಗಾಗಿ ಬಂದಿಲ್ಲ, ಆದೇಶಕ್ಕೆ ಬಂದಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ಕೋರ್ಟ್ ಸೂಚನೆಯಂತೆ ಗ್ರಾಚ್ಯುಟಿ ಕಾಯಿದೆ ಜಾರಿ ಮಾಡಬೇಕು. ಸಚಿವ ಸಂಪುಟ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತೆ ನಮ್ಮ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಮುಂದಿನ ಬಾರಿ ಅಧಿಕಾರಕ್ಕೆ ಬರ್ಬೇಕಂದ್ರೆ ಬೇಡಿಕೆ ಈಡೇರಿಸಿ’ | Anganwadi Workers Protest | Vistara News

4 ವರ್ಷದ ಮೇಲಿನ ಮಕ್ಕಳು ಅಂಗನವಾಡಿಯಲ್ಲಿ ಉಳಿಯುತ್ತಿಲ್ಲ. ಹೀಗಾಗಿ ಅಂಗನವಾಡಿಗಳ ಅಭಿವೃದ್ಧಿ ಆಗಬೇಕು. ಎಲ್ಲ ಕಾರ್ಯಕ್ರಮದಲ್ಲೂ ಅಂಗನವಾಡಿ ಕಾರ್ಯಕರ್ತೆಯರು ಭಾಗಿಯಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆ ತಕ್ಕ ಸಂಬಳ ನೀಡಬೇಕು. ಅಂಗನವಾಡಿ ಮಕ್ಕಳಿಗೆ ಪುಸ್ತಕ, ಶೂ ನೀಡಬೇಕು. ಅಂಗನವಾಡಿ ವೇಳಾಪಟ್ಟಿ ಬದಲಾಯಿಸಿ, ಶಿಕ್ಷಕರ ಸ್ಥಾನಮಾನ ನೀಡಬೇಕು. ಮಂಗಳವಾರ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯು ತೀವ್ರ ಸ್ವರೂಪವನ್ನು ಪಡೆದುಕೊಳ್ಳಲಿದೆ.

ಇದನ್ನೂ ಓದಿ: Ramesh Jarkiholi : ಸಂಖ್ಯೆ ಕಡಿಮೆ ಬಂದರೂ ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ಮಾಡುತ್ತೇವೆ: ಸತೀಶ್‌ ಜಾರಕಿಹೊಳಿ ಹೇಳಿಕೆ

ಪಾರ್ಕ್‌ನಲ್ಲಿ ಮಹಿಳೆಯರು-ಮಕ್ಕಳ ಪರದಾಟ
ಫ್ರೀಡಂ ಪಾರ್ಕ್‌ನಲ್ಲಿ ಶೌಚಾಲಯವೂ ಇಲ್ಲ, ಕುಡಿಯಲು ನೀರೂ ಇಲ್ಲದೆ ಮಹಿಳೆಯರು ಮತ್ತು ಮಕ್ಕಳು ಪರದಾಡಿದ್ದಾರೆ. ಸಾವಿರಾರು ಮಹಿಳೆಯರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಹತ್ತು ದಿನವಾದರೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು

೧. ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು

೨. ಅನ್ನದ ಜತೆ ಅಕ್ಷರ ಕೇಂದ್ರವನ್ನಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠ ಪಡಿಸಬೇಕು

3. ಅಂಗನವಾಡಿ ಕೇಂದ್ರದ ವೇಳಾಪಟ್ಟಿ ಬದಲಾಗಬೇಕು

4. ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಕಿ ಎಂಬ ಪದನಾಮದಿಂದ ಕರೆಯಬೇಕು

೫. ಅಂಗನವಾಡಿ ನೌಕರರ ಮೇಲೆ ಹೆಚ್ಚುತ್ತಿರುವ ಶಿಸ್ತುಕ್ರಮ

೬. ಉಚಿತ ಕೆಲಸ ನಿಲ್ಲಿಸಿ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಬೇಕು

೭. ನ್ಯಾಯಯುತ ಮುಂಬಡ್ತಿಗಳನ್ನು ಕೊಡದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು

8. ದಿನನಿತ್ಯದ ಸಮಸ್ಯೆಗಳಿಗೆ ಇಲಾಖಾಧಿಕಾರಿಗಳು ಸ್ಪಂದಿಸುವ ವಿಧಾನ ಕುಂಠಿತವಾಗುತ್ತಿದೆ

9. ಐಸಿಡಿಎಸ್‌ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ರಚಿಸಬೇಕು ಹಾಗೂ ಅನುದಾನವನ್ನು ಹೆಚ್ಚಿಸಬೇಕು

ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪಟ್ಟುಹಿಡಿದಿದ್ದು, ಲಿಖಿತ ಆದೇಶ ನೀಡದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Sharada Devi Idol: ಶೃಂಗೇರಿಯಿಂದ ತೀತ್ವಾಲ್‌ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ

ಅಂಗನವಾಡಿ ಸಂಘದ ಅಧ್ಯಕ್ಷೆ ಶಾಂತಾ ಎಂ. ಗಂಟೆ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ನಾಳೆ (ಬುಧವಾರ) ಒಳಗೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಸರ್ಕಾರದ ಭರವಸೆ ಈಡೇರಿಸಿಲ್ಲವೆಂದರೆ ಬುಧವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರ ಜತೆಗೆ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Exit mobile version