Site icon Vistara News

Anganwadi Workers: ಗೌರವ ಧನ, ಗುಣಮಟ್ಟದ ಮೊಬೈಲ್‌ಗೆ ಪಟ್ಟು; ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರ ಹೋರಾಟ

Anganwadi workers protest at bangalore

ಬೆಂಗಳೂರು: ಗೌರವ ಧನ ಬಿಡುಗಡೆ, ಇಎಸ್‌ಐ, ಪಿಎಫ್‌, ಪಿಂಚಣಿ ಸೌಲಭ್ಯ ಹಾಗೂ ಅಂಗನವಾಡಿ ಕೆಲಸ ಕಾರ್ಯಗಳಿಗಾಗಿ ಗುಣಮಟ್ಟದ ಮೊಬೈಲ್‌ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಸೋಮವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಎನ್ಆರ್ ಕಾಲೋನಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ (ಸಿಡಿಪಿಒ) ಎದುರು ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಹೆಚ್ಚಳ ಮಾಡಿರುವ ಗೌರವಧನ ಪಾವತಿಸಬೇಕು, ಕಾರ್ಯಕರ್ತೆಯರಿಗೆ ಹೊಸ ಮೊಬೈಲ್‌ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರವನ್ನು ಆಗ್ರಹಿಸಿದರು.

ಪೋಷಣ್‌ ಅಭಿಯಾನದಡಿ 4 ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರಗಳಿಗೆ 63 ಸಾವಿರ ಮೊಬೈಲ್‌ ನೀಡಲಾಗಿತ್ತು. ಆದರೆ, ಪ್ರಸ್ತುತ ಉಪಯೋಗಿಸುತ್ತಿರುವ ತಂತ್ರಜ್ಞಾನಕ್ಕೆ ಮೊಬೈಲ್‌ಗಳು ಹೊಂದಾಣಿಕೆಯಾಗುತ್ತಿಲ್ಲ. ಇವುಗಳಲ್ಲಿ 4ಜಿ ಅಥವಾ 5ಜಿ ಇಂಟರ್‌ನೆಟ್ ಸೌಲಭ್ಯವಿಲ್ಲ. ಮೊಬೈಲ್‌ನಲ್ಲಿ ಫೀಡ್ ಮಾಡಿರೋ ಮಾಹಿತಿಯನ್ನೇ ಇತರೆ 44 ರಿಜಿಸ್ಟರ್‌ಗಳಲ್ಲಿ ದಾಖಲು ಮಾಡಬೇಕಿದ್ದು, ಇದರಿಂದ ಕಾರ್ಯಕರ್ತೆಯರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಆದ್ದರಿಂದ ಹಳೆ ಮೊಬೈಲ್‌ಗಳನ್ನು ವಾಪಸ್‌ ಪಡೆದು ಗುಣಮಟ್ಟದ ಹೊಸ ಮೊಬೈಲ್‌ಗಳನ್ನು ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದನ್ನೂ ಓದಿ | Bangalore University : ನಾಳೆ ಬೆಂಗಳೂರು ವಿವಿ ಬಂದ್‌! ತರಗತಿ ಬಾಯ್ಕಾಟ್‌

ಬೆಂಗಳೂರಿನ ಎನ್‌ಆರ್‌ ಕಾಲೋನಿಯ ಸಿಡಿಪಿಒ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರು ಮಾತನಾಡಿ, 44 ರಿಜಿಸ್ಟರ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನಿಭಾಯಿಸಬೇಕು. ಇದರ ಜತೆಯಲ್ಲಿ ಮೊಬೈಲ್‌ನಲ್ಲೂ ಮಾಹಿತಿ ಅಪ್ಲೋಡ್ ಮಾಡಬೇಕು. ಇದರಿಂದ ಕೆಲಸ ದುಪ್ಪಟ್ಟಾಗುತ್ತಿದೆ. ಮೊಬೈಲ್ ನೀಡಿ 5-6 ವರ್ಷಗಳು ಕಳೆದಿವೆ. ಸಾಫ್ಟ್‌ವೇರ್ ಕೂಡ ಈಗ ಬದಲಾಗಿದ್ದು, ಮೊಬೈಲ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆ ಮೊಬೈಲ್‌ಗಳನ್ನು ವಾಪಸ್‌ ಪಡೆಯಿರಿ ಅಂತ ಮನವಿ ಮಾಡಿದರೂ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆಯಿಲ್ಲ. ಮೊಬೈಲ್‌ ವಾಪಸ್ ಕೊಡುತ್ತೇವೆ ಎಂದು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಮೊಬೈಲ್ ವಾಪಸ್ ಪಡೆಯದಂತೆ ಮೌಖಿಕವಾಗಿ ಸೂಚಿಸಲಾಗಿದೆ. ಇದು ಖಂಡನೀಯ. ಈ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳಪೆ ಮೊಬೈಲ್ ಹಿಂಪಡೆಯುವಂತೆ ಒತ್ತಾಯ

ಆನೇಕಲ್‌: ಕಳಪೆ ಮೊಬೈಲ್ ಹಿಂಪಡೆಯುವಂತೆ ಒತ್ತಾಯಿಸಿ ಆನೇಕಲ್ ಸಿಡಿಪಿಒ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದರು. ಪೋಷಣ್‌ ಅಭಿಯಾನದ ಚಟುವಟಿಕೆ ಅಪ್‌ಡೇಟ್‌ಗಾಗಿ ಅಂಗನವಾಡಿಗಳಿಗೆ ನೀಡಿರುವ ಮೊಬೈಲ್‌ಗಳು ಕಳಪೆಯಾಗಿವೆ. ಸ್ಟೋರೇಜ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದ ಕೆಲಸ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳಪೆ ಮೊಬೈಲ್‌ ಹಿಂಪಡೆಯಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯ ಮಾಡಿದರು. ಇನ್ನು ಈ ಹಿಂದಿನ ಸರ್ಕಾರ 1000 ರೂಪಾಯಿ ಗೌರವ ಧನ ಹೆಚ್ಚಳ ಮಾಡುವುದಾಗಿ ಹೇಳಿತ್ತು. ಆದರೆ, ಈಗಿನ ಮುಖ್ಯಮಂತ್ರಿಗಳು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಗೌರವ ಧನ ಹೆಚ್ಚಳ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಚಾಮರಾಜನಗರದಲ್ಲಿ ಪ್ರತಿಭಟನೆ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾ ಕೇಂದ್ರ ಹಾಗೂ ವಿವಿಧ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು. ಹೊಸ ಮೊಬೈಲ್ ನೀಡಬೇಕು, 2023ರ ಬಜೆಟ್ ನಲ್ಲಿ ಘೋಷಿಸಿದ ಸಾವಿರ ರೂ. ಗೌರವಧನ ಕೂಡಲೇ ಬಿಡುಗಡೆ ಮಾಡಬೇಕು. ಇಎಸ್‌ಐ, ಪಿಎಫ್, ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತೆಯರು ಭಾಗಿಯಾಗಿದ್ದರು.

ಮೊಬೈಲ್ ಹಿಂತಿರುಗಿಸಿದ ಅಂಗನವಾಡಿ ಕಾರ್ಯಕರ್ತೆಯರು

ಧಾರವಾಡ: ಪೋಷಣ್‌ ಅಭಿಯಾನದಲ್ಲಿ ವಿತರಣೆ ಮಾಡಿದ್ದ ಮೊಬೈಲ್‌ಗಳಲ್ಲಿ ಸ್ಟೋರೇಜ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆ ಉಂಟಾಗಿರುವುದರಿಂದ ಮೊಬೈಲ್‌ಗಳನ್ನು ನಗರದ ಸಿಡಿಪಿಒ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವಾಪಸ್‌ ನೀಡಿದರು. ಕಳಪೆ ಮೊಬೈಲ್‌ನಿಂದ ಯಾವುದೇ ಕೆಲಸ ಮಾಡಲಾಗುತ್ತಿಲ್ಲ. ನಮ್ಮ ಕೆಲಸದ ಜತೆಗೆ ಬೇರೆ ಬೇರೆ ಇಲಾಖೆ ಕೆಲಸ ಸಹ ಮಾಡುವಂತಾಗಿದೆ. ಆದರೆ ಆ ಕೆಲಸಗಳಿಗೆ ಮೊಬೈಲ್ ಸಪೋರ್ಟ್ ಮಾಡುತ್ತಿಲ್ಲ. ಹೀಗಾಗಿ ಮೊಬೈಲ್‌ಗಳನ್ನು ವಾಪಸ್ ನೀಡುತ್ತಿದ್ದೇವೆ ಎಂದು ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯ 436 ಮೊಬೈಲ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಹಿಂತಿರುಗಿಸಿದ್ದಾರೆ.

ಗೌರವಧನ ಬಿಡುಗಡೆ ಮಾಡಿ

ಕೊಪ್ಪಳ: ಸಿಯಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಸಿಡಿಪಿಒ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಮೊಬೈಲ್‌ನಲ್ಲಿ ಇಲಾಖೆಗೆ ಸಂಬಂಧಿಸಿದ ಡೇಟಾ ಎಂಟ್ರಿಗೆ ಅವಕಾಶ ಮಾಡಲಾಗಿದೆ. ಅದರೆ, ಅಂಗನವಾಡಿ ಕಾರ್ಯಕರ್ತೆಯರನ್ನು ಇತರ ಇಲಾಖೆಗಳ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಇನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ನೀಡಿದ ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ಹಿಂದಿನ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾವಿರ ರೂಪಾಯಿ ಗೌರವಧನ ಹೆಚ್ಚಿಸಲು ನಿರ್ಧರಿಸಿತ್ತು. ಹೀಗಾಗಿ ಹಾಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಗೌರವ ಧನ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದರು.

ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಗೆ ಮನವಿ ಪತ್ರ

ರಾಯಚೂರು: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತೆಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಕಳಪೆ ಮೊಬೈಲ್‌ಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚೇತನ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇದನ್ನೂ ಓದಿ | Jain Muni Murder : ಕಾಮಕುಮಾರ ನಂದಿ ಮಹಾರಾಜ್ ಕೊಲೆಗೆ ರಾಜ್ಯಾದ್ಯಂತ ಜೈನರ ಪ್ರತಿಭಟನೆ

ಕಳಪೆ ಮೊಬೈಲ್‌ ವಿತರಣೆಗೆ ಬೇಸರ

ಬಾಗಲಕೋಟೆ: ಕಳಪೆ ಮೊಬೈಲ್‌ನಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಈ ಕೂಡಲೇ ಸರ್ಕಾರ ಹಿಂಪಡೆಯಬೇಕು ಎಂದು ನಗರದ ಮಿನಿ ವಿಧಾನಸೌಧ ಮುಂಭಾಗ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಲಸ ಹೊರತುಪಡಿಸಿ ಬೇರೆ ಇಲಾಖೆಗಳ ಕೆಲಸ ನೀಡಬಾರದು. ಇನ್ನು ಕಳಪೆ ಮೊಬೈಲ್‌ನಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಕೆಲಸದಿಂದ ಮುಕ್ತಿ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.

Exit mobile version