Site icon Vistara News

Animal attack | ಚಿರತೆ ಆಯ್ತು, ಆನೆ ಹೋಯ್ತು.. ಈಗ ಕರಡಿ ಸರದಿ: ಮನೆ ಪಕ್ಕವೇ ಓಡಾಟ ಕಂಡು ಬೆಚ್ಚಿಬಿದ್ದ ಜನ!

bear at jigani

ಆನೇಕಲ್: ಒಂದು ಕಡೆ ಚಿರತೆ ಆತಂಕ ಮೇರೆ ಮೀರುತ್ತಿದೆ. ಇನ್ನೊಂದು ಕಡೆಯಲ್ಲಿ ಆನೆಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಇದರ ನಡುವೆ ಹೊಸದಾಗಿ ಕರಡಿಯೂ ಸೇರಿಕೊಂಡಿದೆ! ರಾಜ್ಯದಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ಹಾವಳಿಯ (Animal attack) ಹೊಸ ಹೊಸ ಝಲಕ್‌ಗಳು ಕಾಣಿಸಿಕೊಳ್ಳುತ್ತಿವೆ.

ಜನವಸತಿ ಪ್ರದೇಶದಲ್ಲಿ ಕರಡಿ

ಆನೇಕಲ್‌ ತಾಲೂಕಿನ ಬನ್ನೇರುಘಟ್ಟ ಸಮೀಪದ ಜಿಗಣಿಯ ಕಲ್ಲುಬಾಳು ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಜನ ಸಂಚಾರದ ವಸತಿ ಪ್ರದೇಶದಲ್ಲೇ ಓಡಾಟ ನಡೆಸಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಮತ್ತು ಮೊಬೈಲ್‌ನಲ್ಲಿ ಸೆರೆಯಾಗಿದೆ.

ಜಿಗಣಿಯ ನಂದನವನ ಲೇಔಟ್, ಕಲ್ಲುಬಾಳು ಗ್ರಾಮದ ದೇವಾಲಯದ ಬಳಿ ಕರಡಿ ಓಡಾಟ ದಾಖಲಾಗಿದೆ. ಡಿಸೆಂಬರ್‌ 12ರಂದು ಜಿಗಣಿಯ ನಂದನವನ ಲೇಔಟ್‌ನಲ್ಲಿ ಪ್ರತ್ಯಕ್ಷವಾಗಿದ್ದ ಕರಡಿ, ಡಿಸೆಂಬರ್‌ ೧೩ರಂದು ರಾತ್ರಿ 7 ಗಂಟೆ ಸುಮಾರಿಗೆ ಕಲ್ಲುಬಾಳು ಗ್ರಾಮದ ದೇವಾಲಯದ ಬಳಿ ಓಡಾಡಿದೆ.

ಬನ್ನೇರುಘಟ್ಟದ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಕರಡಿ ಕಾಣಿಸಿಕೊಳ್ಳುತ್ತಿದ್ದರೆ, ಕೆಲವು ದಿನದ ಹಿಂದೆ ಭೂತಾನಹಳ್ಳಿಯಲ್ಲಿ ಚಿರತೆ ಓಡಾಡಿತ್ತು. ಕತ್ತಲಾಗುತ್ತಿದ್ದಂತೆಯೇ ಗ್ರಾಮಗಳಿಗೆ ಪ್ರವೇಶಿಸುತ್ತಿರುವ ಚಿರತೆ ಹಾಗೂ ಕರಡಿಗಳು ಜನರಲ್ಲಿ ಭೀತಿ ಮೂಡಿಸಿವೆ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿದ್ದು, ಕರಡಿ ಕಾಣಿಸಿಕೊಂಡಿದ್ದ ಕಡೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ | Leopard death | ಮರ ಎಂದು ಭ್ರಮಿಸಿ ಟ್ರಾನ್ಸ್‌ಫಾರ್ಮರ್‌ ಮೇಲೆ ಹತ್ತಿದ ಚಿರತೆ ವಿದ್ಯುತ್‌ ಆಘಾತಕ್ಕೆ ಒಳಗಾಗಿ ಸಾವು!

Exit mobile version