ಬಾಗಲಕೋಟೆ/ಯಾದಗಿರಿ: ಮೇಕೆಗಳ ಮೇಲೆ ದಾಳಿ ಮಾಡಿದ ನಾಯಿಗಳು ಅವುಗಳನ್ನು ಬಗೆದು ತಿಂದಿವೆ, ದೊಡ್ಡಿಯಲ್ಲಿ ಕಟ್ಟಿದ್ದ ಕುರಿಗಳನ್ನು ಯಾರೋ ದುರುಳರು ಕೊರಳು ಕತ್ತರಿಸಿ, ಹೊಟ್ಟೆ ಬಗೆದು ಸಾಯಿಸಿದ್ದಾರೆ. ಇಂಥ ಪರಮ ಕ್ರೌರ್ಯದ ಘಟನೆಗಳು (Animals Killed) ನಡೆದಿರುವುದು ಬಾಗಲಕೋಟೆ ಮತ್ತು ಯಾದಗಿರಿಯಲ್ಲಿ.
ಮೇಕೆಗಳನ್ನು ತಿಂದೇ ಬಿಟ್ಟ ನಾಯಿಗಳು
ಬಾಗಲಕೋಟೆ ನಗರದ ತರಕಾರಿ ಮಾರುಕಟ್ಟೆ ಬಳಿ ನಾಯಿಗಳು ಮೂರು ಮೇಕೆಗಳನ್ನು ಸಾಯಿಸಿವೆ. ಅವುಗಳಲ್ಲಿ ಒಂದರ ಮಾಂಸವನ್ನು ಸಂಪೂರ್ಣವಾಗಿ ತಿಂದು ತೇಗಿವೆ.
ಸುಲ್ತಾನ್ ಮನಿಯಾರ್ ಎಂಬುವರಿಗೆ ಸೇರಿರುವ ಮೇಕೆಗಳು ಇವಾಗಿದ್ದು, ಮನೆ ಮುಂದಿನ ಶೆಡ್ ನಲ್ಲಿ ಕಟ್ಟಿದ್ದರು. ಅವುಗಳ ಮೇಲೆ ನಾಯಿಗಳು ದಾಳಿ ಮಾಡಿವೆ.
ಸುಮಾರು 24 ಸಾವಿರ ಮೌಲ್ಯದ ಮೇಕೆಗಳು ಇವಾಗಿದ್ದು, ಶುಕ್ರವಾರವಷ್ಟೇ ಅವುಗಳನ್ನು ಸಂತೆಯಿಂದ ಖರೀದಿ ಮಾಡಿ ತರಲಾಗಿತ್ತು. ಮೇಕೆಗಳ ಮೇಲಿನ ಬೀದಿ ನಾಯಿಗಳ ದಾಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.
ಕುರಿಗಳನ್ನು ಸಾಯಿಸಿದ ಕಿರಾತಕರು
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿ ಕಿರಾತಕರು ಕುರಿಗಳ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಸುಮಾರು 13 ಕುರಿಗಳನ್ನು ಹೀಗೆ ಸಾಯಿಸಲಾಗಿದೆ. ಶನಿವಾರ ನಸುಕಿನ ಜಾವ ಈ ಘಟನೆ ನಡೆದಿದೆ.
ಕುರಿಗಾಹಿ ಮಲ್ಲಪ್ಪನಿಗೆ ಸೇರಿದ್ದ ಕುರಿಗಳು ಇವಾಗಿದ್ದು, ಮನೆ ಮುಂಭಾಗದ ಹಟ್ಟಿಯಲ್ಲಿ ಕಟ್ಟಲಾಗಿತ್ತು. ಮಲ್ಲಪ್ಪ 50 ಕುರಿಗಳನ್ನು ಸಾಕಿದ್ದ, ಕುರಿ ಸಾಕಾಣಿಕೆ ಮಾಡಿಯೇ ಜೀವನ ನಡೆಸುತ್ತಿದ್ದ,
ಇದೀಗ ದುರುಳರು 13 ಕುರಿಗಳ ಕುತ್ತಿಗೆ, ಹೊಟ್ಟೆ ಸೀಳಿ ಸಾಯಿಸಿದ್ದಾರೆ. 5 ಲಕ್ಷ ರೂಪಾಯಿ ಬೆಲೆ ಬಾಳುವ ಕುರಿಗಳು ಇವೆಂದು ಹೇಳಲಾಗಿದೆ.
ಕುರಿಗಳ ಕೊಲೆ ಹಿನ್ನೆಲೆಯಲ್ಲಿ ಕುರಿಗಾಹಿ ಕುಟುಂಬ ಕಂಗಾಲಾಗಿದೆ. ಯಾವ ಉದ್ದೇಶಕ್ಕೆ ಕುರಿಗಳ ಸಾಯಿಸಿದ್ದಾರೆ ಎಂಬುದು ನಿಗೂಢವಾಗಿದೆ. ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Monsoon Pet Care: ಮಳೆಗಾಲದಲ್ಲಿ ಸಾಕುಪ್ರಾಣಿಗಳ ಆರೋಗ್ಯ ಕಾಪಾಡುವುದು ಹೇಗೆ?