Site icon Vistara News

Anitha Kumaraswamy: ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಶಾಸಕಿಗೆ ಅಪಮಾನ ಮಾಡುವುದಾ?: ಅನಿತಾ ಕುಮಾರಸ್ವಾಮಿ

Anitha Kumaraswamy says Will higher education ministers high values insult woman MLA?

#image_title

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಹಾಗೂ ರಾಮನಗರ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ವಿರುದ್ಧ ರಾಮನಗರ ವಿಧಾನಸಭೆ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ (Anitha Kumaraswamy) ಅವರು ಶಿಷ್ಟಾಚಾರ ಉಲ್ಲಂಘನೆ ಹಾಗೂ ಹಕ್ಕುಚ್ಯುತಿ ಆರೋಪ ಮಾಡಿದ್ದಾರೆ.

ಹಾರೋಹಳ್ಳಿ ತಾಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅಶ್ವತ್ಥನಾರಾಯಣ ನಾರಾಯಣ ಅವರು, ತಮ್ಮನ್ನು ಕಡೆಗಣಿಸಿ ಅಪಮಾನ ಮಾಡಿದ್ದಾರೆ. ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಇದೇನಾ? ಎಂದವರು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಡಬೇಕು ಹಾಗೂ ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರು, ಹಕ್ಕು ಭಾದ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಅನಿತಾ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ | Karnataka Election 2023: ಸಚಿವ ಅಶ್ವತ್ಥನಾರಾಯಣ ವರ್ಸಸ್‌ ಶಾಸಕಿ ಅನಿತಾ ಕುಮಾರಸ್ವಾಮಿ; ಏನಿದು ಅಭಿವೃದ್ಧಿ ಜಟಾಪಟಿ?

ಹಾರೋಹಳ್ಳಿ ತಾಲೂಕು ಕಚೇರಿ ಲೋಕಾರ್ಪಣೆಗೊಳಿಸುವ ವಿಷಯದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೋರಿದ ಆತುರ ನನಗೆ ಅಚ್ಚರಿ ಉಂಟು ಮಾಡಿದೆ. ರಾಜಕೀಯಕ್ಕಾಗಿ ಶಿಷ್ಟಾಚಾರವನ್ನು ಹತ್ತಿಕ್ಕಿ, ಮಹಿಳಾ ಶಾಸಕಿಯನ್ನು ಅಪಮಾನಿಸುವುದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ ಎಂದು ಕಿಡಿಕಾರಿದ್ದಾರೆ.

ಹಾರೋಹಳ್ಳಿ ತಾಲೂಕು ಕೇಂದ್ರ ರಚನೆಗೆ ಕಾರಣಕರ್ತರು ಯಾರು? ಎನ್ನುವುದು ಜನತೆಗೆ ಗೊತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆ ಹಾಗೂ ನನ್ನ ಬದ್ಧತೆಯ ಕುರುಹಾಗಿ ಹಾರೋಹಳ್ಳಿ ತಾಲೂಕು ಕೇಂದ್ರವಾಗಿ ಹೊರಹೊಮ್ಮಿದೆ. ಕುಮಾರಸ್ವಾಮಿ ಅವರೇ ಹಾರೋಹಳ್ಳಿ ತಾಲೂಕು ಕೇಂದ್ರ ಘೋಷಣೆ ಮಾಡಿದ್ದು. ಉಸ್ತುವಾರಿ ಸಚಿವರಿಗೆ ಇದೆಲ್ಲಾ ಗೊತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ. ನಾನು ಮತ್ತು ಕುಮಾರಸ್ವಾಮಿ ಅವರು ರಾಜಕೀಯವನ್ನು ಬದಿಗಿಟ್ಟು ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಆದರೆ, ಪ್ರತಿ ಸಣ್ಣ ವಿಷಯದಲ್ಲಿಯೂ ರಾಜಕೀಯ ಹುಡುಕುವ ಉಸ್ತುವಾರಿ ಸಚಿವರಿಗೆ, ಶಾಸಕರು ಕೂಡ ಉತ್ತರದಾಯಿ ಎನ್ನುವ ಸಾಮಾನ್ಯ ಜ್ಞಾನ ಇಲ್ಲದಾಯಿತಲ್ಲ ಎನ್ನುವುದು ನನಗೆ ಬೇಸರ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದರೂ ಅದರ ಅಧ್ಯಕ್ಷತೆ ಆಯಾ ಕ್ಷೇತ್ರದ ಶಾಸಕರು ವಹಿಸಬೇಕು. ಇದು ಶಿಷ್ಟಾಚಾರ ಮಾತ್ರವಲ್ಲ, ಶಾಸಕರ ಹಕ್ಕು ಕೂಡ. ಆದರೆ, ಸಚಿವರು ನನ್ನ ಹಕ್ಕು ಕಸಿದುಕೊಂಡಿದ್ದಾರೆ. ಇದು ಅನ್ಯಾಯದ ಪರಮಾವಧಿ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಈ ರೀತಿಯದ್ದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಚಿವರಿಗೆ ಹಾರೋಹಳ್ಳಿ ತಾಲೂಕು ಕೇಂದ್ರದ ಅಭಿವೃದ್ಧಿಗೆ ನಾನು ಮತ್ತು ಕುಮಾರಸ್ವಾಮಿ ಅವರು ನಡೆಸಿರುವ ಪ್ರಯತ್ನಗಳು, ತಂದ ಅನುದಾನದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಮೊದಲು ದಾಖಲೆಗಳನ್ನು ಪರಿಶೀಲನೆ ಮಾಡಲಿ. ಅದಕ್ಕೂ ಸಮಯ ಇಲ್ಲ ಎಂದಾದರೆ ಅವರ ಸಂಪುಟ ಸಹೋದ್ಯೋಗಿ, ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಸಂಪರ್ಕ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ | Karnataka Election: ದೇವೇಗೌಡರನ್ನು ಸಿಎಂ ಎಂದು ಹೇಳಿಕೊಂಡು ಎಲೆಕ್ಷನ್‌ಗೆ ಹೋಗಿ: ಜೆಡಿಎಸ್‌ನ ಶರವಣಗೆ ಮಾಧುಸ್ವಾಮಿ ಸವಾಲು

ಜನರ ಸಂಕಷ್ಟಗಳ ಪರಿಹಾರ, ಅಭಿವೃದ್ಧಿ ವಿಷಯದಲ್ಲಿ ನಾನಾಗಲಿ, ಕುಮಾರಸ್ವಾಮಿ ಅವರಾಗಲಿ ಅಥವಾ ನಮ್ಮ ಪಕ್ಷವಾಗಲಿ ಕ್ಷುಲ್ಲಕ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ. ಅಂತಹ ರಾಜಕೀಯದಲ್ಲಿ ನಿಪುಣರಾಗಿರುವ ಬಿಜೆಪಿಗರಿಗೆ ಶಿಷ್ಟಾಚಾರ ಎನ್ನುವುದು ಗೊತ್ತಿರಲು ಹೇಗೆ ಸಾಧ್ಯ? ಉನ್ನತ ಶಿಕ್ಷಣ ಸಚಿವರ ಉನ್ನತ ಮೌಲ್ಯ ಎಂದರೆ, ಮಹಿಳಾ ಶಾಸಕರನ್ನು ಅಪಮಾನಿಸುವುದಾ ಎಂದು ಕೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಉತ್ತರ ನೀಡಬೇಕು ಹಾಗೂ ಶಾಸಕಿಗೆ ಅಪಮಾನಿಸಿದ ಸಚಿವರ ನಡೆಯನ್ನು ಖಂಡಿಸಬೇಕು. ಇದರಿಂದ ನನಗೆ ಬಹಳ ನೋವಾಗಿದೆ. ಸಭಾಧ್ಯಕ್ಷರು ಹಾಗೂ ಹಕ್ಕು ಭಾದ್ಯತಾ ಸಮಿತಿ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗುವುದು ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.

Exit mobile version