ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಅಂಜನಾದ್ರಿ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ತಿಳಿಸಿದರು.
ಅವರು ಮಂಗಳವಾರ ಆನೆಗುಂದಿಯಲ್ಲಿ ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಸಚಿವರಾದ ಆನಂದ್ ಸಿಂಗ್, ಮುನಿರತ್ನ, ಶಾಸಕ ಪರಣ್ಣ ಮುನವಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ʻʻಒಟ್ಟು 125 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ದೊರೆತಿದೆ. ಮೊದಲನೇ ಹಂತದ ಯೋಜನೆ ಹಾಗೂ ಜಮೀನು ದೊರೆತಿರುವಲ್ಲಿ ಕೆಲಸ ಪ್ರಾರಂಭಸಲಾಗಿದೆ. ಭಕ್ತರು ಉಳಿದುಕೊಳ್ಳಲು ಡಾರ್ಮಿಟರಿ, ಪ್ರದಕ್ಷಿಣಾ ಪಥ, ಶಾಪಿಂಗ್ ಕಾಂಪ್ಲೆಕ್ಸ್, ಶೌಚಾಲಯ ನಿರ್ಮಾಣ ಮಾಡಲಾಗುವುದು . ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದಾದ ಕೂಡಲೇ ರೋಪ್ ವೇ ಮತ್ತಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದುʼʼ ಎಂದು ಹೇಳಿದರು.
ಅಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಇಲ್ಲಿ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿ ಮಾಡುವ ಸೌಭಾಗ್ಯ ಬಿಜೆಪಿ ಸರ್ಕಾರಕ್ಕೆ ದೊರೆತಿರುವುದು ಸಂತಸ ತಂದಿದೆ ಎಂದು ಸಿಎಂ ಹೇಳಿದರು. ಅಂಜನಾದ್ರಿಯ ಆಂಜನೇಯ ಇಡೀ ಮನುಕುಲಕ್ಕೆ ಆಶೀರ್ವಾದ ಮಾಡಲಿ. ಭಾರತ ಹಾಗೂ ಕನ್ನಡ ನಾಡಿನ ಸಮಸ್ತ ಜನಕ್ಕೆ ಆಶೀರ್ವಾದ ಮತ್ತು ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ
ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಬಳಸಲು ಟೋಲ್ ರದ್ದುಪಡಿಸಲು ಪ್ರತಿಭಟನೆ ಆಗುತ್ತಿರುವ ಬಗ್ಗೆ ಮಾತನಾಡಿ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿಯವರೊಂದಿಗೆ ಮಾತನಾಡಿದ್ದು, ವಿವರಗಳನ್ನು ಕೇಳಲಾಗಿದೆ. ಪ್ರತಿ ಬಾರಿ ಟೋಲ್ ಪ್ರಾರಂಭವಾದಾಗ ಈ ವಿಚಾರ ಇದ್ದೇ ಇರುತ್ತದೆ. ವಿಚಾರಗಳನ್ನು ಜನರಿಗೆ ಹೇಳಿ ಸಮಾಧಾನ ಮಾಡಿ ಕ್ರಮ ವಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ : Temple hundi : ಅಂಜನಾದ್ರಿ ದೇಗುಲದ ಹುಂಡಿ ಎಣಿಕೆ, 28 ದಿನದಲ್ಲಿ 11.79 ಲಕ್ಷ ರೂ. ಸಂಗ್ರಹ, ವಿದೇಶಿ ನೋಟು ಕೂಡಾ ಪತ್ತೆ